ರಾಯಚೂರು | ವಿದ್ಯಾರ್ಥಿನಿ ಹತ್ಯೆ ಪ್ರಕರಣ : ಸಾಲಿಡಾರಿಟಿ ಮೂವ್ ಮೆಂಟ್ ಪ್ರತಿಭಟನೆ

ರಾಯಚೂರು : ಸಿಂಧನೂರಿನಲ್ಲಿ ವಿದ್ಯಾರ್ಥಿನಿಯ ಹತ್ಯೆ ಪ್ರಕರಣವನ್ನು ಫಾಸ್ಟ್ ಟ್ರಾಕ್ ಕೋರ್ಟ್ ನಲ್ಲಿ ತನಿಖೆ ನಡೆಸಿ, ತ್ವರಿತಗತಿಯಲ್ಲಿ ಅರೋಪಿಯ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಸಿಂಧನೂರು ತಾಲೂಕು ಘಟಕದ ವತಿಯಿಂದ ತಹಶಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದರು.
ಸಿಂಧನೂರು ನಗರದ ಸರಕಾರಿ ಪದವಿ ಮಹಾವಿದ್ಯಾಲಯದ ಎಂಎಸ್ಸಿ ಸ್ನಾತಕೋತ್ತರ ವಿದ್ಯಾರ್ಥಿನಿ ಶಿಫಾ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಕೊಲೆ ಮಾಡಿರುವುದು ಅಮಾನವೀಯವಾಗಿದೆ. ಆರೋಪಿ ಲಿಂಗಸುಗೂರಿನಲ್ಲಿ ಶರಣಾಗಿದ್ದು, ಪೊಲೀಸರು ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಹಾಗೂ ಇಂತಹ ಘಟನೆಗಳು ಮತುಕಳಿಸದಂತೆ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.
ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುವುದು ಕಡಿಮೆ. ಇಂತಹ ಸಂದರ್ಭದಲ್ಲಿ ಮಹಿಳೆಯರ, ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ, ಹತ್ಯೆ ಪ್ರಕರಣಗಳಿಂದ ಮತ್ತಷ್ಟು ಆತಂಕ ಮೂಡಿಸಿದೆ. ಸಿಂಧನೂರು ಶೈಕ್ಷಣಿಕ ಹಬ್ ಆಗಿದ್ದು ಅಪರಾಧಿಕ ಚಟುವಟಿಕೆಗಳಿಂದ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಶಾಲಾ-ಕಾಲೇಜುಗಳ ಆವರಣ, ಮೈದಾನ ಪುಂಡ ಪೋಕರಿಗಳು ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕು ಹಾಗೂ ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಜನಾಬ್ ಹುಸೈನ್ ಸಾಬ್, ರಹಿಮಾ ಸಾಬ್, ನಿಸಾರ್ ಖಾನ್, ಮುಹಮ್ಮದ್ ಲಿಯಾಖತ್ ಅಲಿ ಸೋಲಿಡಾರ್ಟಿ ಯೂತ್ ಮ್ಯುಮೆಂಟ್ ವಾಸೀಮ್, ತನ್ವೀರ್, ಸಮದ್ ಚೌದ್ರಿ, ಅಬ್ದುಲ್ ನಾಯ್ಕ್ ಇರ್ಫಾನ್, ಇನ್ನಿತರ ಸಂಘಟನೆ ಕಾರ್ಯಕರ್ತರು ಮತ್ತು ಸದಸ್ಯರು ಭಾಗವಹಿಸಿದ್ದರು.