ರಾಯಚೂರು | ಮಾ.14 ರಂದು ಹೋಳಿಹಬ್ಬ ಆಚರಣೆ ; ಶಾಂತಿ ಸಭೆ
ಒತ್ತಾಯಪೂರ್ವಕವಾಗಿ ಬಣ್ಣ ಎರಚಿದರೆ ಕ್ರಮ : ಸಿಪಿಐ ಉಮೇಶ ಕಾಂಬ್ಳೆ ಎಚ್ಚರಿಕೆ

ರಾಯಚೂರು: ನಗರದ ಸದರ್ ಬಜಾರ ಪೋಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ಅಂಗವಾಗಿ ಇಂದು ಶಾಂತಿ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಠಾಣೆಯ ಸಿಪಿಐ ಉಮೇಶ ಕಾಂಬ್ಳೆ ಮಾತನಾಡಿ, ಹೋಳಿ ಹಬ್ಬವು ಒಂದೇ ಧರ್ಮದ ಹಬ್ಬವಲ್ಲ. ಸರ್ವ ಧರ್ಮಗಳ ಸಮ್ಮಿಲನ ಮತ್ತು ಸೌಹಾರ್ದತೆಯ ಸಂಕೇತವಾಗಿದೆ. ನಿಯಮಗಳನ್ನು ಪಾಲಿಸಿ ಹಬ್ಬ ಆಚರಿಸಬೆಕು. ಮಾ.13 ರಂದು ರಾತ್ರಿ ಕಾಮ ದಹನ ಮತ್ತು 14 ರಂದು ಬೆಳಿಗ್ಗೆ 8ರಿಂದ 12ಗಂಟೆಯವರೆಗೆ ಮಾತ್ರ ಸಂಪೂರ್ಣ ಹೋಳಿ ಹಬ್ಬವನ್ನು ಆಚರಣೆ ಮಾಡಬಹುದು. ಗಂಟೆ 12ರ ನಂತರ ಮಹಾನಗರ ಪಾಲಿಕೆಯಿಂದ ನಗರದಾದ್ಯಂತ ನೀರು ಸರಬರಾಜು ಮಾಡಲಾಗುವುದು. ನಂತರ ತಮ್ಮ ತಮ್ಮ ಮನೆಗಳನ್ನು ಸ್ವಚ್ಚಗೊಳಿಸುವುದು ಸ್ನಾನ, ಪೂಜೆ ನಾಡಿನ ಸಂಸ್ಕೃತಿ ಸಂಪ್ರದಾಯದಂತೆ ಹಬ್ಬವನ್ನು ಆಚರಿಸಬೇಕು ಎಂದು ತಿಳಿಸಿದರು.
ಒತ್ತಾಯ ಪೂರ್ವಕವಾಗಿ ಬಣ್ಣ ಹಚ್ಚಬಾರದು :
ಹೋಳಿಹಬ್ಬವನ್ನು ಆಡುವಾಗ ಪರಿಚಯವಿಲ್ಲದವರಿಗೆ ಒತ್ತಾಯಪೂರ್ವಕವಾಗಿ ಬಣ್ಣ ಎರಚಬಾರದು. ಬಣ್ಣಗಳಲ್ಲಿ ರಸಾಯನ ದ್ರವಗಳನ್ನು ಬಳಸಿ ಮತ್ತೊಬ್ಬರಿಗೆ ಎರಚಿ ಅಹಿತಕರ ಘಟನೆಗಳನ್ನು ಸೃಷ್ಠಿ ಮಾಡಿದಲ್ಲಿಅವರ ಮೇಲೆ ಕಾನೂನು ಪ್ರಕಾರವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಿಯಮ ಪಾಲನೆ ಕಡ್ಡಾಯ :
ಯಾರೇ ಆಗಲಿ ಕಾಮದಹನ ಮಾಡುವ ಸಮಯದಲ್ಲಿ ಮತ್ತೊಬ್ಬರ ಮನೆಗಳ ಹಳೆ ಬಾಗಿಲುಗಳು, ಮನೆ ಬಳಕೆಯ ಕಟ್ಟಿಗೆಗಳನ್ನು ಕದ್ದು ತರುವುದು, ವಿದ್ಯುತ್ ದೀಪಗಳನ್ನು ಕಲ್ಲಿನಿಂದ ಹೊಡೆಯುವುದು, ಮತ್ತೊಬ್ಬರ ಮನೆಯ ದೂರದರ್ಶನದ ಕೇಬಲ್ ವೈರ್ ನ ಕೆಳಗೆ ಕಾಮದಹನ ಮಾಡಬಾರದು. ವಿದ್ಯುತ್ ತಂತಿಗಳ ಕೆಳಗೆ ಕಾಮದಹನ ಮಾಡುವುದು, ಕಾಮದಹನದ ಬೆಂಕಿ ಕಿಚ್ಚಿನಲ್ಲಿ ವಾಹನಗಳ ಹಳೇ ಟೈರ್ ಗಳನ್ನು ಹಾಕುವುದು, ಮಧ್ಯಪಾನ ಮಾಡಿ ಮತ್ತೊಬ್ಬರಿಗೆ ತೊಂದರೆ ಕೊಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಠಾಣೆಯ ಸಿ.ಪಿ.ಐ. ಉಮೇಶ ಕಾಂಬ್ಳೇ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯ ಮುಖಂಡರಾದ ಮಹಾವೀರ, ನಜೀರ ಪಂಜಾಬಿ, ಶ್ರೀನಿವಾಸ ಪತಂಗೆ, ರಸೂಲ ಸಾಬ್ ಮಾತನಾಡಿ, ಹೋಳಿ ಹಬ್ಬವು ಪುರಾತನ ಕಾಲದಿಂದಲೂ ಮಾಡಲಾಗುತ್ತಿದೆ. ರಾಯಚೂರಿನಲ್ಲಿ ಹಿಂದು, ಮುಸ್ಲಿಂ ಮತ್ತು ಕ್ರೈಸ್ತರೆಲ್ಲರೂ ಸೇರಿ ಪರಸ್ಪರ ಸಹಬಾಳ್ವೆಯಿಂದ ಹಬ್ಬ ಹರಿದಿನ ಆಚರಿಸುತ್ತಿದ್ದಾರೆ. ಹೋಳಿ ಹಬ್ಬವೆಂದರೆ ಯುದ್ಧದಲ್ಲಿ ವಿಜೇತರಾಗಿ ಆಗಮಿಸಿ ವಿಜಯಕೇಸರಿ ಹಾರಿಸಿ ಮೇಲೆ ಸರ್ವರ ಸಂತೋಷಕ್ಕಾಗಿ ವಿವಿದ ಬಣ್ಣಗಳನ್ನು ಅದರಲ್ಲಿಯೂ ಗುಲಾಲ್ ಬಣ್ಣಗಳನ್ನು ಒಬ್ಬರಿಗೊಬ್ಬರು ಎರಚುತ್ತಾ ಮನರಂಜಿಸುವಂತ ಹಬ್ಬವಾಗಿದೆ ಎಂದು ಹೇಳಿದರು.
ಈಗಿನ ಯುವಕರು ಗುಲಾಲ ಬಣ್ಣವನ್ನು ಅಲ್ಲದೆ ಇನ್ನುಳಿದ ರಾಸಾಯನಿಕ ದ್ರವಗಳನ್ನು ಬಳಸದೇ ಶುದ್ಧ ಗುಲಾಲ್ ಪೌಡರ್ ಬಣ್ಣವನ್ನು ಒಬ್ಬರಿಗೊಬ್ಬರು ಎರಚಿ ಹಬ್ಬವನ್ನು ಆಚರಿಸಬೇಕಾಗಿದೆ ಎಂದು ಸರ್ವ ಮುಖಂಡರು ಯುವಕರಿಗೆ ಕಿವಿಮಾತು ಹೇಳಿದರು.
ಸಭೆಯಲ್ಲಿ ಪಿಎಸ್ಐ ನರಸಮ್ಮ, ಪೊಲೀಸ್ ಅಧಿಕಾರಿಗಳಾದ ಶ್ಯಾಮ್, ಶ್ರೀನಿವಾಸ, ಹೆಡ್ ಕಾನ್ ಸ್ಟೆಬಲ್ ಚಾಂದ್ ಪಾಶ, ಬಸವರಾಜ, ಮುಖಂಡರಾದ ಸೂರಿ, ಶ್ಯಾಮ್ ಕೌನ್ಸಲರ್, ಶರಣ ಬಸವ ಬಜರಂಗ ದಳ, ಪ್ರಭು ನಾಯಕ ಮಡ್ಡಿಪೇಟೆ ಹಾಗೂ ಇನ್ನಿತರ ಮುಖಂಡರು, ಯುವಕರು ಉಪಸ್ಥಿತರಿದ್ದರು.