ರಾಯಚೂರು | ಮಹಾನಗರ ಪಾಲಿಕೆಯಾದ ಬಳಿಕ ನಡೆದ ಮೊದಲ ಸಭೆಯಲ್ಲಿಯೇ ಗದ್ದಲ, ವಾಗ್ವಾದ
ರಾಯಚೂರು : ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಆಯೋಜಿಸಿದ್ದ ಮೊದಲ ಮಹಾ ಸಭೆಯಲ್ಲಿ ನಗರದ ಶಶಿಮಹಲ್ ರಸ್ತೆಯಿಂದ ರೈಲ್ವೆ ಸ್ಟೇಷನ್ಗೆ ಹೋಗುವ ರಸ್ತೆಯಲ್ಲಿ ನಡೆಯುತ್ತಿರುವ ತರಕಾರಿ ಮಾರುಕಟ್ಟೆಯನ್ನು ಅದೇ ಸ್ಥಳದಲ್ಲಿ ಮುಂದುವರೆಸುವಂತೆ ಒತ್ತಾಯಿಸಿ ನವರತ್ನ ಯುವಕ ಸಂಘ ಹಾಗೂ ಎಂ.ಈರಣ್ಣ ವೃತ್ತದ ತರಕಾರಿ ಮಾರಾಟಗಾರರ ಸಂಘ ಪ್ರತ್ಯೇಕವಾಗಿ ನಡೆಸಿದ ಪ್ರತಿಭಟನೆ ವಾಗ್ವಾದಕ್ಕೆ ಕಾರಣವಾಯಿತು.
ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ತರಕಾರಿ ಮಾರುಕಟ್ಟೆ ಸ್ಥಳಾಂತರಕ್ಕೆ ಮುಂದಾಗಿರುವದು ಸೂಕ್ತವಲ್ಲ.13 ಕ್ಕೂ ಹೆಚ್ಚು ವಾರ್ಡಿನ ಜನರು ತರಕಾರಿ ಖರೀದಿ ಮಾಡುತ್ತಿದ್ದು, 500ಕ್ಕೂ ಹೆಚ್ಚುತರಕಾರಿ ಮಾರಾಟಗಾರರು ಜೀವನಕ್ಕೆ ಆಧಾರವಾಗಿದೆ. 2022ರಲ್ಲಿ ಅಂದಿನ ಪಾಲಿಕೆಯ ಅಧ್ಯಕ್ಷೆ ಲಲಿತಾ ಕಡಗೋಳ ಆಂಜಿನೇಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಅಧಿಕೃತವಾಗಿ ಟೆಂಡರ್ ನಡೆಸಿ 9 ಲಕ್ಷ 50 ಸಾವಿರ ರೂ. ಮುಂಗಡ ಠೇವಣಿ ಪಡೆದು ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈಗ ಏಕಾಎಕಿ ತರಕಾರಿ ಮಾರುಕಟ್ಟೆ ಸ್ಥಳಾಂತರ ಮಾಡಲು ಹೊರಟಿರುವುದು ಸಮಸ್ಯೆಯಾಗಲಿದೆ. ಕೂಡಲೇ ಅದೇ ಸ್ಥಳದಲ್ಲಿ ಮುಂದುವರೆಸಬೇಕು. ಇಲ್ಲದೇ ಹೋದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದ ಮನವಿಯನ್ನು ಸಲ್ಲಿಸಲು ಆಗಮಿಸಿದ್ದಾಗಲೇ ಎಂ.ಈರಣ್ಣ ವೃತ್ತದ ಬಳಿ ತರಕಾರಿ ಮಾರಾಟಗಾರರು ಸಹ ಸೇರಿದರು.
ನಗರಸಭೆ ಮಾಜಿ ಸದಸ್ಯ ಎಂ.ಕೆ.ಬಾಬರ್ ಮನವಿ ಓದಿ ನೀಡುವಾಗ ವೈಯಕ್ತಿಕ ವಿಷಯ ಪ್ರಸ್ತಾಪಿಸದಂತೆ ಕಾಂಗ್ರೆಸ್ ಮುಖಂಡ ನರಸಿಂಹಲು ಮಾಡಗಿರಿ ಆಕ್ಷೇಪ ವ್ಯಕ್ತಪಡಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಪರಸ್ಪರ ಬೆಂಬಲಿಗರು ನೂಕಾಟ ತಳ್ಳಾಟಗಳ ಮಧ್ಯೆ ಪ್ರತಿಭಟನೆ ನಡೆಯಿತು. ಮಹಾನಗರ ಪಾಲಿಕೆ ಸದಸ್ಯ ಉಮಾ ರವೀಂದ್ರ ಜಲ್ದಾರ ಹಾಗೂ ಪಾಲಿಕೆ ಮಹಾ ಪೌರರಾದ ನರಸಮ್ಮ ನರಸಿಂಹಲು ಮಾಡಗಿರಿ ಸೇರಿದಂತೆ ಅನೇಕ ಹೋರಾಟಗಾರರ ಸಮ್ಮುಖದಲ್ಲಿಯೇ ವಾಗ್ವಾದ ನಡೆಯಲು ಕಾರಣವಾಯಿತು.
ಪೊಲೀಸರು ಮಧ್ಯಸ್ಥಿಕೆವಹಿಸಿ ಪರಸ್ಥಿತಿಯನ್ನು ತಿಳಿಗೊಳಿಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನಗರಸಭೆ ಮಾಜಿ ಸದಸ್ಯ ಎಂ.ಕೆ.ಬಾಬರ್, ತರಕಾರಿ ಮಾರಾಟ ಕೇಂದ್ರ ಸ್ಥಳಾಂತರದಿಂದ ವೈಯಕ್ತಿಕ ಹಿತಾಸಕ್ತಿಯಿದೆ. ನೂರಾರು ಜನರು ತರಕಾರಿ ಮಾರಾಟ ಮಾಡುತ್ತಿದ್ದು ಉಸ್ಮಾನೀಯಾ ತರಕಾರಿ ಮಾರಾಟ ಸ್ಥಳಕ್ಕೆ ಸ್ಥಳಾಂತರಿಸಿದರೆ ಎಲ್ಲರಿಗೂ ಮಾರಾಟಕ್ಕೆ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ. 15ಕ್ಕೂ ಹೆಚ್ಚು ಸಂಘಟನೆಗಳು ತರಕಾರಿ ಮಾರಾಟಗಾರರ ಪರವಾಗಿ ನಿಂತು ಹೋರಾಟ ಮಾಡುತ್ತಿವೆ. ದಿವಂಗತ ಎಂ.ಈರಣ್ಣನವರ ವೃತ್ತದ ಬಳಿ ನಡೆಯುತ್ತಿರುವ ತರಕಾರಿ ಮಾರಾಟ ನಂಬಿಕೊಂಡು, ರೈತರು, ಬೀದಿಬದಿ ತರಕಾರಿ ಮಾರಾಟಗಾರರು ಜೀವನ ನಡೆಸುತ್ತಿದ್ದಾರೆ. ಹಿಂದಿನ ನಗರಸಭೆ ಅಧಿಕೃತವಾಗಿ ಟೆಂಡರ್ ಕರೆದು ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅನಧಿಕೃತವಾಗಿ ನಡೆಯುತ್ತಿಲ್ಲ. ಕೆಲ ಹಿತಾಸಕ್ತಿಗಳು ಸ್ಥಳಾಂತರಿಸಲು ಸಾಮಾನ್ಯಸಭೆಯಲ್ಲಿ ಚರ್ಚೆಗೆ ಮುಂದಾಗಿರುವದು ಅವೈಜ್ಞಾನಿಕವೆಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶರಣಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜ, ರವೀಂದ್ರ ಜಲ್ದಾರ, ನರಸಿಂಹಲುಮಾಡಗಿರಿ, ಎಂ.ಕೆ.ಬಾಬರ್, ಬಿ.ಬಸವರಾಜ, ಎಸ್.ಹುಲಿಗೆಪ್ಪ, ಚಂದ್ರಭಂಡಾರಿ, ಎಸ್.ವೆಂಕಟೇಶ, ರವಿಕುಮಾರ, ಎಸ್.ಈರೇಶ, ಆಂಜಿನೇಯ್ಯ, ಶಿವಪ್ಪ ಮಣಿಗಿರಿ, ಪವನ್, ನಿತಿನ್ ಸೇರಿದಂತೆ ಅನೇಕರು ಭಾಗಿಯಾದರು.