ರಾಯಚೂರು | ಮನಸ್ಸಿನ ಅಸ್ವಸ್ಥತೆಯಿಂದ ಅಪರಾಧ ಹೆಚ್ಚಳ : ಡಾ.ಮನೋಹರ್ ಪತ್ತಾರ
ರಾಯಚೂರು : ಇಲ್ಲಿನ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಸಭಾಂಗಣದಲ್ಲಿ 'ಮಹಿಳೆಯ ಘನತೆ ಮತ್ತು ಮಾನವ ಮೌಲ್ಯ ಉಳಿಸೋಣ' ಎಂಬ ಘೋಷ ವಾಕ್ಯದೊಂದಿಗೆ ರಾಯಚೂರು, ಯಾದಗಿರಿ ಜಿಲ್ಲಾ ಮಟ್ಟದ ಯುವಜನರ ಸಂಕಲ್ಪ ಸಮಾವೇಶವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಏರ್ಪಡಿಸಿದ್ದ ಸಮಾವೇಶವನ್ನು ಮನೋರೋಗ ತಜ್ಞ ಡಾ.ಮನೋಹರ ವೈ.ಪತ್ತಾರ್ ಅವರು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿನಿತ್ಯ ಸಮಾಜದಲ್ಲಿ ಅತ್ಯಾಚಾರ, ಕೊಲೆ, ಸುಲಿಗೆ , ಹಾಗೂ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಮೂಲ ಕಾರಣ ಮನಸ್ಸಿನ ಅಸ್ವಸ್ಥತೆ. ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಇರುವಂತಹ ನಿರ್ಭಂದಗಳು ಪುರುಷರಿಗೆ ಇಲ್ಲವಾಗಿವೆ ಎಂದರು.
ಎಐಡಿವೈಒ ರಾಜ್ಯ ಅಧ್ಯಕ್ಷ ಶರಣಪ್ಪ ಉದ್ಘಾಳ್ ಆಶಯ ನುಡಿಗಳನ್ನಾಡಿದರು. ಮನೋರೋಗ ತಜ್ಞ ಡಾ.ಸುನಿಲ್ ಕುಮಾರ್ ಅವರು 'ಇಂದಿನ ಯುವಮನಸ್ಸಿನ ತಲ್ಲಣಗಳು' ವಿಷಯದ ಕುರಿತು ಉಪನ್ಯಾಸ ನೀಡಿದರು.
ಎಐಡಿವೈಒ ಅಖಿಲ ಭಾರತ ಉಪಾಧ್ಯಕ್ಷರಾದ ಡಾ.ಜಿ.ಎಸ್.ಕುಮಾರ್ ಅವರು ಸಮಾರೋಪ ನುಡಿಗಳನ್ನು ಹೇಳಿದರು. ಬಳಿಕ ಸಂವಾದವನ್ನು ಏರ್ಪಡಿಸಲಾಗಿತ್ತು. ಯಾದಗಿರಿ, ರಾಯಚೂರು ಜಿಲ್ಲೆಯ ಹಲವು ಗ್ರಾಮದ ಯುವಕರು, ವಿವಿಧ ಸಂಸ್ಥೆಯ ವಿದ್ಯಾರ್ಥಿಗಳು ಸೇರಿ ಇನ್ನೂರಕ್ಕೂ ಹೆಚ್ಚು ಯುವಜನರು ಭಾಗವಹಿಸಿದ್ದರು.