ರಾಯಚೂರು | ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ
ಸರ್ಕಾರದ ಯೋಜನೆಗಳನ್ನು ಮಹಿಳೆಯರು ಸದುಪಯೋಗ ಪಡೆದುಕೊಳ್ಳಿ : ಶರಣಬಸವ ಕರೆ

ರಾಯಚೂರು : ದೇಶದ ಅಭಿವೃದ್ಧಿಗೆ ಮಹಿಳೆಯರ ಸಶಕ್ತೀಕರಣ, ಮೌಲ್ಯ ಹಾಗೂ ಗೌರವವು ಅವಶ್ಯವಾಗಿದೆ. ಮಹಿಳೆಯರು ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಶರಣಬಸವ ಅವರು ಹೇಳಿದರು.
ಮಾ.12ರ ಬುಧವಾರ ದಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಸ್ವ-ಸಹಾಯ ಸಂಘಗಳ ಮೂಲಕ ತಳಮಟ್ಟದಲ್ಲಿ ಮಹಿಳಾ ಅಭಿವೃದ್ಧಿ ಸಾಧಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರು ಚಾಲಕರಾಗಿದ್ದಾರೆ. ಅದು ಕೇವಲ ವಾಹನದ ಚಲಾವಣೆ ಮಾತ್ರವಲ್ಲ, ಸಾಮಾಜಿಕ ಸಶಕ್ತೀಕರಣವಾಗಿದೆ. ಮಹಿಳಾ ಸಶಕ್ತೀಕರಣ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳಿಗೆ ಸಾಲ, ಉದ್ಯೋಗಿನಿ ನೆರವು, ಕೌಶಲಾಭಿವೃದ್ಧಿ ಕಾರ್ಯಕ್ರಮವನ್ನು ಸರ್ಕಾರ ಮಾಡುತ್ತಿದೆ. ಮಹಿಳೆಯರು ಪರಸ್ಪರ ಗೌರವಿಸುವ, ಉತ್ತೇಜಿಸುವ ಕಾರ್ಯ ಆಗಬೇಕು ಎಂದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ ಅವರು ಮಾತನಾಡಿ, ಅಂತರ್‌ರಾಷ್ಟ್ರೀಯ ಮಹಿಳಾ ದಿನ ಆಚರಣೆ ಪ್ರತಿವರ್ಷ ಮಾ.8ರಂದು ಜಾಗತಿಕವಾಗಿ ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ಬಹಳ ಸಂತೋಷವಾಗಿ ಶಾಲಾ, ಕಾಲೇಜು, ಕಚೇರಿಗಳಲ್ಲಿ ಸಹ ಇಂದು ಆಚರಣೆ ಮಾಡಲಾಗುತ್ತದೆ. ಪ್ರತಿ ಕುಟುಂಬ, ದೇಶದ ದೊಡ್ಡ ಸೈನಿಕ ಶಕ್ತಿ ಎಂದೇ ಮಹಿಳೆಯರನ್ನು ಬಣ್ಣಿಸಲಾಗುತ್ತದೆ. ಅಂದು ಅವರ ಕೊಡುಗೆಗಳನ್ನು ನೆನೆದು ಸ್ಮರಿಸುವ ದಿನವಾಗಿಯೂ ಈಗ ಈ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದರು.
ಸ್ತ್ರೀ ಶಕ್ತಿ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಶ್ರೀದೇವಿ ಶ್ರೀನಿವಾಸ ಅವರು ಮಾತನಾಡಿ, ಹೆಣ್ಣು ಸಂಸಾರದ ಕಣ್ಣು ಹೆಣ್ಣೆಂದರೆ, ಮನೆಯ ಬೆಳಗುವ ದೀಪ. ನಾಲ್ಕು ಗೋಡೆಗೆ ಸೀಮಿತವಾಗಿದ್ದ ಹೆಣ್ಣು ಇಂದು ಕೈಯಾಡಿಸದ ಕ್ಷೇತ್ರವಿಲ್ಲ. ಎಲ್ಲಾ ಕ್ಷೇತ್ರದಲ್ಲಿ ಗಂಡಿಗೆ ಸಮಾನವಾಗಿ ನಿಂತಿದ್ದಾಳೆ. ತನ್ನದೇ ಛಾಪು ಮೂಡಿಸಿ ತಾನು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ಸಾಭೀತು ಪಡಿಸಿದ್ದಾಳೆ ಎಂದರು.
ಇದೇ ವೇಳೆ ವಿವಿಧ ತಾಲೂಕಿನ ಮಹಿಳಾ ಡ್ರೈವರ್ ಮತ್ತು ಸ್ವಚ್ಛತಾಗಾರರನ್ನು ಸನ್ಮಾನ ಮಾಡಲಾಯಿತು. ಸಾಮಾಜಿಕ ಕ್ರೋಡಿಕರಣ ಅಭಿಯಾನದಲ್ಲಿ ಪ್ರಗತಿ ಸಾಧಿಸಿದ ಒಕ್ಕೂಟದ ಸಿಬ್ಬಂದಿಗಳಿಗೆ ಅಭಿನಂದನಾ ಪ್ರಮಾಣ ಪತ್ರ ವಿತರಿಸಲಾಯಿತು. ನಲ್ ಜಲ್ ಮಿತ್ರ ತರಬೇತಿ ಪಡೆದ ಮಹಿಳೆಯರಿಗೆ ಸಮವಸ್ತ್ರ ಮತ್ತು ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಜಿ.ಯು ಹುಡೇದ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನವೀನ್ ಕುಮಾರ್,ಗ್ರಾ.ಕು.ನೀಷಿ ನೈ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಮೇನಕಾ ಪಾಟೀಲ್,ಶಾಲಾ ಶಿಕ್ಷಣ ಉಪನಿರ್ದೇಶಕ(ಅಭಿವೃದ್ಧಿ) ಇಂದಿರಾ ಆರ್,ಆರೋಗ್ಯ ಇಲಾಖೆ ಆರ್.ಸಿ.ಹೆಚ್ ಅಧಿಕಾರಿ ಡಾ.ನಂದಿತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಶರಣಮ್ಮ,ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳು ಪುಷ್ಪಾ,ಎನ್.ಆರ್.ಎಲ್.ಎಮ್.ಜಿಲ್ಲಾ ವ್ಯವಸ್ಥಾಪಕರಾದ ವಿಜಯ ಕುಮಾರ್, ಶ್ರೀಕಾಂತ್ ಬನ್ನಿಗೋಳ,ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಕಾರ್ಯದರ್ಶಿ ಈರಮ್ಮ, ಖಜಾಂಚಿ ಶರಣಮ್ಮ , ಸ್ಪೂರ್ತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಅಧ್ಯಕ್ಷ ಚಂದ್ರಮ್ಮ, ಎನ್.ಆರ್.ಎಲ್‌ಎಮ್ ಸಿಬ್ಬಂದಿಗಳು ಸೇರಿದಂತೆ ವಿವಿಧ ತಾಲ್ಲೂಕುಗಳ ಮಹಿಳೆಯರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ವಿಜಯಲಕ್ಷ್ಮೀ ಅವರು ಮಾಡಿದರು.