ರಾಯಚೂರು | 3 ತಿಂಗಳಿನಿಂದ ಮಲಿಯಾಬಾದ್ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆ

ರಾಯಚೂರು: ಕಳೆದ ಸುಮಾರು ಮೂರು ತಿಂಗಳಿನಿಂದ ಮಲಿಯಾಬಾದ್ ಗ್ರಾಮಸ್ಥರಿಗೆ ಭಯ ಹುಟ್ಟಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಇಂದು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
ನಗರದ ಹೊರವಲಯದ ಮಲಿಯಾಬಾದ್ ಗ್ರಾಮದಲ್ಲಿ ಕಳೆದ ಡಿಸೆಂಬರ್ 11ರಂದು ಆಕಳ ಕರುವೊಂದನ್ನು ಕೊಂದು ತಿಂದಿದ್ದ ಚಿರತೆ, ಫೆಬ್ರವರಿ 14ರಂದು ಚಿರತೆ ದಾಳಿ ನಡೆಸಿ ಆಕಳನ್ನು ಕೊಂದು ಹಾಕಿತ್ತು.
ಗೋಶಾಲೆಯಲ್ಲಿದ್ದ ಆಕಳಿನ ಮೇಲೆ ಚಿರತೆ ದಾಳಿ ಮಾಡಿ ಸಾಯಿಸಿದ್ದು, ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. 3 ತಿಂಗಳಿನಿಂದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿದರೂ ಸೆರೆ ಸಿಕ್ಕಿರಲಿಲ್ಲ. ಇದರಿಂದ ಆಕ್ರೋಶಗೊಂಡಿದ್ದ ಗ್ರಾಮಸ್ಥರು, ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿಯದಿದ್ದರೆ ನಾವೇ ಕಾರ್ಯಾಚರಣೆ ನಡೆಸಿ ಹಿಡಿಯುತ್ತೇವೆ ಹಾಗೂ ಸಂಬಂಧಿಸಿದ ಸಚಿವರಿಗೆ ಪತ್ರ ಬರೆಯುತ್ತೇವೆ ಎಂದು ಎಚ್ಚರಿಸಿದ್ದರು.
ಫೆಬ್ರವರಿ ಎರಡನೇ ವಾರದಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆಯವರು, ಚಿರತೆಯ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿ ಎರೆಡು ಮೂರು ಕಡೆ ಬೋನು ಇರಿಸಿದ್ದರು. ಅರಣ್ಯ ಇಲಾಖೆಯಿಂದ ಗ್ರಾಮದಲ್ಲಿ ಸಿಬ್ಬಂದಿಯನ್ನು ನೇಮಿಸಿ ನಿಗಾ ಇರಿಸಿದ್ದರು. ಗ್ರಾಮಸ್ಥರಿಗೆ ಮುಸ್ಸಂಜೆ ಹೊತ್ತಲ್ಲಿ ತಿರುಗಾಡದಂತೆ ಹಾಗೂ ಸಂಜೆಯ ಬಳಿಕ ಜಾನುವಾರುಗಳನ್ನು ಅರಣ್ಯ ಪ್ರದೇಶ ಬಳಿ ಗೂಟಕ್ಕೆ ಕಟ್ಟಬೇಡಿ ಎಂದು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದ್ದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರು. ಕ್ಯಾಮರಾದಲ್ಲಿ ಚಿರತೆ ಚಲನವಲನವೂ ಸೆರೆಯಾಗಿತ್ತು. ಹೀಗೆ ನಿತಂತರ ಪರಿಶ್ರಮದ ಫಲವಾಗಿ ಇಲಾಖೆ ಅಧಿಕಾರಿಗಳ ಇಂದು ಬೆಳಗ್ಗೆ 7:30ಕ್ಕೆ ಚಿರತೆಯನ್ನು ಬೋನಿನಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.