ರಾಯಚೂರು | ವಕ್ಫ್ ಆಸ್ತಿಗಳ ಗೊಂದಲ ರಾಜ್ಯ ಸರಕಾರ ಸರಿಪಡಿಸಲಿ : ಸಿ.ಎಂ ಇಬ್ರಾಹೀಂ
ಸಿ.ಎಂ ಇಬ್ರಾಹೀಂ
ರಾಯಚೂರು : ರಾಜ್ಯದಲ್ಲಿ ನಡೆಯುತ್ತಿರುವ ವಕ್ಫ್ ಆಸ್ತಿಗಳ ಗೊಂದಲದ ಬಗ್ಗೆ ಭೂಮಿ ವಕ್ಫ್ ಗೆ ಸೇರಿದೆಯೋ, ಲ್ಯಾಂಡ್ ಫಾರಂ ಆಕ್ಟ್ ಪ್ರಕಾರ ರೈತರಿಗೆ ಸೇರಿದೆಯೋ ಅಥವಾ ಖರೀದಿ ಮಾಡಿದ್ದರೋ ಎಂಬುದನ್ನು ಜಿಲ್ಲಾಧಿಕಾರಿ, ತಹಶೀಲ್ದಾರರು ರೈತರ ದಾಖಲೆಗಳನ್ನು ಕುಲಂಕುಶವಾಗಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಬಾರದು ಎಂದು ಮಾಜಿ ಸಚಿವ ಸಿ.ಎಂ ಇಬ್ರಾಹೀಂ ತಿಳಿಸಿದ್ದಾರೆ.
ರವಿವಾರ ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ವಕ್ಫ್ ಆಸ್ತಿ ವಿವಾದ ರಾಜ್ಯ ಸರಕಾರಕ್ಕೆ ಮಂತ್ರಿಯ ಅನುಭವದ ಕೊರತೆಯಿಂದ ರೈತರಿಗೆ ನೋಟಿಸ್ ಜಾರಿ ಮಾಡಿಸಿದ್ದಾರೆ. ಇದರಿಂದ ರೈತರಲ್ಲಿ ಗೊಂದಲವಾಗಿದೆ. ಬಿಜೆಪಿ ಇದನ್ನೇ ಉಪಚುನಾವಣೆಯ ಅಸ್ತ್ರವಾಗಿ ಬಳಸಿಕೊಂಡು ಅಪಪ್ರಚಾರ ಮಾಡಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ನೋಟಿಸ್ ನೀಡಲಾಗಿದೆ. ಆದರೆ ಅವರ ಅವಧಿಯಲ್ಲಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದರು.
ಮಾಜಿ ಸಚಿವ ಈಶ್ವರಪ್ಪ ಎಲ್ಲಾ ರೈತರ ಭೂಮಿಗಳನ್ನು ವಕ್ಫ್ ಆಸ್ತಿಗಳೆಂದು ಘೋಷಣೆ ಮಾಡಿದ್ದರೆ ರೈತರು ಕಾಂಗ್ರೆಸಿಗರನ್ನು ಒಡಾಡಿಸಿ ಹೊಡೆಯುತ್ತಾರೆ ಎಂದು ಹೇಳಿಕೆ ನೀಡಿದ ಕುರಿತು ಪ್ರತಿಕ್ರಿಯಿಸಿ ‘ ರಾಜ್ಯ ಸರಕಾರಕ್ಕೆ ತಾಕತ್ತು ಇದ್ದರೆ ಈಶ್ವರಪ್ಪನ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಿ.
ಈಶ್ವರಪ್ಪ ನವರಿಗೆ ಪಕ್ಷದಲ್ಲಿ ಸ್ಥಾನಮಾನ ಸಿಗುತ್ತಿಲ್ಲ. ಮನಸ್ಸಿಗೆ ಬಂದ ಹಾಗೆ ಹೇಳಿಕೆ ನೀಡುತ್ತಿದ್ದಾರೆ. ಕೋವಿಡ್ನಲ್ಲಿ ಬಿಜೆಪಿ ಸರಕಾರ ಮಾಡಿದ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಸರಕಾರ ಈಗ ತನಿಖೆ ಮಾಡಲು ಹೊರಟಿದ್ದು ಇದನ್ನು ಮೊದಲೇ ಮಾಡಬೇಕಿತ್ತು ಎಂದು ತಿಳಿಸಿದರು.