ರಾಯಚೂರು | ಬೆಂಬಲ ಬೆಲೆಯಲ್ಲಿ ಒಣಮೆಣಸಿನಕಾಯಿ ಖರೀದಿಸಲಿ : ರಾಘವೇಂದ್ರ ಕುಷ್ಟಗಿ
ಎ.20 ವರೆಗೆ ಕಾಲುವೆಗೆ ನೀರು ಹರಿಸಲು ಒತ್ತಾಯ

ರಾಯಚೂರು : ತುಂಗಭದ್ರಾ ಎಡದಂಡೆ ನಾಲೆಯ ವ್ಯಾಪ್ತಿಯ ಮಾನ್ವಿ, ಸಿರವಾರ ಹಾಗೂ ರಾಯಚೂರು ತಾಲೂಕುಗಳಲ್ಲಿ ರೈತರು ಬೇಸಿಗೆ ಬೆಳೆಯಾಗಿ ಭತ್ತ ಬೆಳೆದಿದ್ದು, ತೆನೆ ಬಿಡುವ ಹಂತದಲ್ಲಿದ್ದು, ಬೆಳೆ ಸಂಪುರ್ಣವಾಗಿ ಕೈಗೆ ಬರಲು ಎ.20 ವರೆಗೆ ಕಾಲುವೆಗೆ ನೀರು ಹರಿಸಬೇಕು ಹಾಗೂ ಒಣಮೆಣಸಿನಕಾಯಿ ರೈತರಿಂದ ನೇರವಾಗಿ ಖರೀದಿಸಬೇಕು ಎಂದು ತುಂಗಭದ್ರಾ ಎಡದಂಡೆ ಕಾಲುವೆ ರೈತರ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಒತ್ತಾಯಿಸಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಹವಾಮಾನ ವೈಪರೀತ್ಯದಿಂದಾಗಿ ಭತ್ತದ ತೆನೆ ಬಿಡುವುದು ತಡವಾಗಿದೆ. ಈಗ ಕೇವಲ ಶೇ.35 ರಷ್ಟು ಬೆಳೆದಿದ್ದು ಎ.20 ವರೆಗೆ ನೀರು ಬಿಡದಿದ್ದರೆ ಬೆಳೆ ಒಣಗುತ್ತದೆ. ನೀರಾವರಿ ಸಲಹಾ ಸಮಿತಿಯ ನಿರ್ಧಾರದಂತೆ ಮಾ.23ರ ವರೆಗೆ ಕಾಲುವೆಗಳಿಗೆ ನೀರು ಬಿಡಲು ಹಿಂದಿನ ಸಭೆಯಲ್ಲಿ ತೀರ್ಮಾನವಾಗಿತ್ತು. ಸರ್ಕಾರ ರೈತರ ಬೆಳೆಗಳನ್ನು ರಕ್ಷಣೆ ಮಾಡಲು ಎಪ್ರಿಲ್ ವರೆಗೆ ನೀರು ಹರಿಸಕು ತುರ್ತು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ರಾಯಚೂರು ಸೇರಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಕೆಂಪು ಒಣ ಮೆಣಸಿನಕಾಯಿ ಬೆಳೆದಿದ್ದು, ಬೆಲೆ ಕುಸಿತದಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಕೋಲ್ಡ್ ಸ್ಟೋರೆಜ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ರೈತರು ಸಂಗ್ರಹಿಸಿದ್ದಾರೆ. ಬೆಳೆಗೆ ಸಾಕಷ್ಟು ಸಾಲ ಮಾಡಿದ್ದು, ಸಾಲ ತೀರಿಸಲು ಆಗುತ್ತಿಲ್ಲ. ಸಾಲ ನೀಡಿದ ಸಂಸ್ಥೆಗಳು ಸಾಲದ ಮರು ಪಾವತಿಗೆ ನೋಟಿಸ್ ನೀಡುತ್ತಿದ್ದಾರೆ. ಪ್ರತಿ ಎಕರೆಗೆ 1.50 ಲಕ್ಷ ರೂ. ಖರ್ಚಾಗಿದೆ. ಸರ್ಕಾರ ರೈತರ ಸಮಸ್ಯೆ ನಿವಾರಣೆಗೆ ಸರ್ಕಾರ ರೈತರಿಂದ ನೇರವಾಗಿ ಕ್ವಿಂಟಾಲ್ ಗೆ 13,000 ದರದಲ್ಲಿ ಒಣ ಮೆಣಸಿನಕಾಯಿ ಖರೀದಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರ ರೈತರ ನೆರವಿಗೆ ಬಾರದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ಚಾಮರಸ ಮಾಲಿ ಪಾಟೀಲ, ಮಾಜಿ ಶಾಸಕ ಗಂಗಾಧರ ನಾಯಕ, ನಾಗನಗೌಡ ಹರವಿ, ಶರಣಪ್ಪ ಗೌಡ ಜಾಡಲದಿನ್ನಿ ಉಪಸ್ಥಿತರಿದ್ದರು.