ರಾಯಚೂರು ಮಹಾನಗರ ಪಾಲಿಕೆಯ ಅಯ-ವ್ಯಯ ಪೂರ್ವಭಾವಿ ಸಭೆ
ಪಾಲಿಕೆಯಲ್ಲಿ ಶಿಸ್ತು ಮತ್ತು ಜನ ಸ್ನೇಹಿ ಆಡಳಿತಕ್ಕೆ ಒತ್ತು : ಆಯುಕ್ತ ಜುಬೀನ್

ರಾಯಚೂರು : ಮಹಾನಗರ ಪಾಲಿಕೆಯಲ್ಲಿ ಶಿಸ್ತು ಮತ್ತು ಜನಸ್ನೇಹಿ ಆಡಳಿತ ನಿರ್ವಹಣೆಗಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಪಾಲಿಕೆ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ. ಪಾಲಿಕೆಯ ವ್ಯಾಪ್ತಿಯ ರಸ್ತೆ, ಕುಡಿಯುವ ನೀರು, ಬೀದಿ ದೀಪಗಳ ಸಮಪರ್ಕ ನಿರ್ವಹಣೆ ಹಾಗೂ ತೆರಿಗೆ ಸಂಗ್ರಹ ಹೆಚ್ಚಳ ಸೇರಿದಂತೆ ಸರ್ಕಾರ ವಿವಿಧ ಯೋಜನೆಗಳ ಸಮರ್ಪಕವಾಗಿ ಅರ್ಹರಿಗೆ ತಲುಪಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದೆಂದು ರಾಯಚೂರು ಮಹಾನಗರ ಪಾಲಿಕೆ ಆಯುಕ್ತರಾದ ಜುಬೀನ್ ಮೊಹಪತ್ರ ಅವರು ಹೇಳಿದರು.
ಫೆ.13ರ ಗುರುವಾರದಂದು ನಗರದ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ʼ2025-26ನೇ ಸಾಲಿನ ಅಯ-ವ್ಯಯ ಪೂರ್ವಭಾವಿ ಸಭೆʼಯಲ್ಲಿ ಘನ ಉಪಸ್ಥಿತಿ ವಹಿಸಿ ಅವರು ಮಾತನಾಡಿದರು.
ಮಹಾನಗರ ಪಾಲಿಕೆಯಲ್ಲಿ ಶಿಸ್ತು ಮತ್ತು ಜನಸ್ನೇಹಿ ಆಡಳಿತ ನಿರ್ವಹಣೆಗಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಪಾಲಿಕೆ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ. ಅಭಿವೃದ್ಧಿ ವಿಷಯದಲ್ಲಿ ಪಾಲಿಕೆ ಸರ್ವ ಸದಸ್ಯರು ಸಾರ್ವಜನಿಕರು ಮತ್ತು ಹೋರಾಟಗಾರ ಸಲಹೆ ಸೂಚನೆ ಮೇರೆಗೆ ಬಜೆಟ್ ಸಿದ್ದತೆಗೆ ಒತ್ತು ನೀಡಲಾಗುವುದು. ಭ್ರಷ್ಟಾಚಾರ ಮುಕ್ತ ಮತ್ತು ಜನಸ್ನೇಹಿ ಆಡಳಿತ ನೀಡುವುದು ನನ್ನ ಆದ್ಯ ಕರ್ತವ್ಯ ಪಾಲಿಕೆ ಅಯ್ಯವ್ಯಯ ಬಜೆಟ್ನಲ್ಲಿ ಕುಡಿಯುವ ನೀರು ಸ್ವಚ್ಛತೆ ರಸ್ತೆ ಬೀದಿ ದೀಪ ನಿರ್ವಹಣೆ ಸೇರಿ ಪಾಲಿಕೆ ಅಭಿವೃದ್ಧಿಗೆ ಪೂರಕ ಬಜೆಟ್ ರೂಪಿಸಲಾಗುವುದು ಎಂದರು.
ಈ ವೇಳೆ ಪಾಲಿಕೆಯ ಹಿರಿಯ ಸದಸ್ಯರಾದ ಜಯಣ್ಣ ಅವರು ಮಾತನಾಡಿ, 2025-26ನೇ ಸಾಲಿನ ಬಜೆಟ್ನಲ್ಲಿ ನಗರದ ಅಭಿವೃದ್ಧಿಗೆ ಪ್ರಮುಖ ವಿಷಯಗಳ ಸೇರ್ಪಡೆ ಮಾಡಬೇಕು. ಸಾಕಷ್ಟು ಸಮಸ್ಯೆಗಳಿಗೆ ನಾಗರೀಕ ಪ್ರಜ್ಞೆ ಮೂಡಿಸಬೇಕು. ಸ್ವಚ್ಚತೆ, ರಸ್ತೆ ದುರಸ್ತಿ, ಕಸ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಿಬೇಕು. ಬಜೆಟ್ಗೆ ಬೇಕಾದ ಆರ್ಥಿಕ ಕ್ರೋಢಿಕರಣದ ಮೇಲೆ ಚರ್ಚೆ ನಡೆಯಬೇಕಿದೆ ಎಂದರು.
ಪಾಲಿಕೆ ನಿವಾಸಿಯಾದ ಉದಯ ಕುಮಾರ ಅವರು ಮಾತನಾಡಿ, ಬೀದಿ ದೀಪಗಳ ನಿರ್ವಹಣೆ ಮಾಡುತ್ತಿಲ್ಲ. ಮಾಹಿತಿ ನೀಡಿದರೆ, ಕೇಳೋರು ಇಲ್ಲ. ಬೀದಿ ದೀಪಗಳ ನಿರಂತರವಾಗಿ ಉರಿಯುತ್ತಿದೆ. ಆಫ್ ಆನ್ ಬಟನ್ ಅಳವಡಿಸಬೇಕು. ಬಡಾವಣೆಗಳ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸಬೇಕು. ಮೂರು ನಾಲ್ಕು ರಸ್ತೆ ಕೂಡುವ ಕಡೆ ಮದ್ಯದಲ್ಲಿ ಪೋಲು ಅವಳಡಿಸಬೇಕು. ನಗರದಲ್ಲಿ ಕುಡಿಯುವ ನೀರಿನ ಪೈಪುಗಳ ಒಡೆದು ಹೋದಲ್ಲಿ ಕೂಡಲೇ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದರು.
ಡಿಎಸ್ಎಸ್ ಸಂಘಟನೆ ಮುಖಂಡ ಎಂ.ಈರಣ್ಣ ಅವರು ಮಾತನಾಡಿ, ನಗರದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಸುತ್ತಮುತ್ತಲಿನ ಪರಿಸರ ಉತ್ತಮವಾಗಿರಬೇಕು. ಇದಕ್ಕಾಗಿ ಅನುದಾನ ಮೀಸಲಿಡಬೇಕು. ಮಾವಿನಕೆರೆಗೆ ಕಸ ತಂದು ಹಾಕುತ್ತಿದ್ದು, ತಡೆದು ಅಭಿವೃದ್ಧಿ ಕೆಲಸ ಮಾಡಬೇಕು, ಕೆರೆಗೆ ಗೋಡೆ ನಿರ್ಮಾಣ ಮಾಡಬೇಕು. ಬೇಸಿಗೆ ವೇಳೆ ವೃತ್ತಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದರು.
ಈ ವೇಳೆ ಸಿಪಿಐಎಂ ಸಂಘಟನೆಯ ಮುಖಂಡ ಕೆ.ಜಿ.ವೀರೇಶ ಅವರು ಮಾತನಾಡಿ, ನಗರದಲ್ಲಿ 40 ಫೀಟ್ ರಸ್ತೆ ಆಗಲೀಕರಣ ಮಾಡಬೇಕು. ಬೃಹತ್ ಗಾತ್ರದ ಲಾರಿಗಳ ಸಂಚಾರವನ್ನು ಬೈಪಾಸ್ ಮೂಲಕ ಹೋಗುವ ವ್ಯವಸ್ಥೆ ಮಾಡಬೇಕು. ಅಲ್ಲದೆ ನಗರದಲ್ಲಿ ಶುದ್ದ ನೀರು ಸರಬರಾಜು ಸಮರ್ಪಕವಾಗಿ ಎಲ್ಲಾ ವಾರ್ಡ್ ಗಳಲ್ಲಿ ದೊರೆಯಬೇಕು. ಅಲ್ಲದೆ ಸ್ಲಂ ಜನರಿಗೆ ಹಕ್ಕು ಪತ್ರ ವಿತರಣೆ ಮಾಡಬೇಕೆಂದರು.
ಮುಖಂಡರಾದ ಡಾ.ರಜಾಕ್ ಉಸ್ತಾದ್ ಅವರು ಮಾತನಾಡಿ, ರಾಯಚೂರಿನಲ್ಲಿ ಕಸ, ನೀರು, ಚರಂಡಿ, ಸ್ವಚ್ಛತೆ ಸಮಸ್ಯೆ ಇದೆ. ಇದಕ್ಕಾಗಿ ಸಹಾಯವಾಣಿ ಕೇಂದ್ರ ಮಾಡಬೇಕು. ಕಸ ನಿರ್ವಹಣೆ, ಪಾದಚಾರಿಗಳ ಸಂಚಾರಕ್ಕೆ ಸೂಕ್ತ ವ್ಯವಸ್ಥೆ, ಫುಡ್ ಪಾರ್ಕ್, ಸ್ವೀಟ್ ಪಾರ್ಕ್, ಲಾರಿಗಳು ನಿಲುಗಡೆ, ನಾಯಿಗಳ ಕಾಟ ಮಿತಿ ಮೀರಿದ್ದು, ಕಡಿವಾಣಕ್ಕೆ ಕ್ರಮ ವಹಿಸಬೇಕು. ಟ್ರಾಫಿಕ್ ಸಿಗ್ನಲ್ ಸರಿಯಾಗಿ ಕೆಲಸ ಮಾಡಬೇಕು. ಅಲ್ಲದೆ ಬೇಸಿಗೆ ಪ್ರಾರಂಭವಾಗಲಿದ್ದು, ನಗರದ ಸರ್ಕಲ್ನಲ್ಲಿ ಮೇಲ್ಬಾಗದಲ್ಲಿ ಗ್ರೀನ್ ಮ್ಯಾಟ್ ಅಳವಡಿಕೆ ಮಾಡಬೇಕು. ನಗರದಲ್ಲಿ ಶಾಲೆಗಳಿಗೆ ಕನಿಷ್ಠ ಅನುದಾನ ಮೀಸಲಿಡಬೇಕು. ಪ್ರತಿ ವರ್ಷ ಮಳೆಗಾಲದಲ್ಲಿ ಕೆಲ ಬಡಾವಣೆಗಳು ನೀರಿನಲ್ಲಿ ಮುಳುಗಿ ಹೋಗುತ್ತಿದೆ. ಈ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದರು. ಇನ್ನೂ ಆನೇಕ ಮುಖಂಡರು ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ಉಪಾಧ್ಯಕ್ಷರಾದ ಸಾಜೀದ್ ಸಮೀರ್ ಸೇರಿದಂತೆ ಪಾಲಿಕೆಯ ವಿವಿಧ ಸದಸ್ಯರು, ವಿವಿಧ ಸಂಘ -ಸಂಸ್ಥೆಗಳ ಮುಖಂಡರು, ಹೋರಾಟಗಾರ ಸೇರಿದಂತೆ ಇತರರು ಇದ್ದರು.