ರಾಯಚೂರು | ಜ.19 ರಂದು ಮಾನ್ವಿಯಲ್ಲಿ ಸಾಮೂಹಿಕ ಮದುವೆ ಸಮಾರಂಭ : ತಿಮ್ಮಾರೆಡ್ಡಿಗೌಡ ಭೋಗಾವತಿ
ರಾಯಚೂರು : ಮಾನ್ವಿ-ಸಿರವಾರ ಕೆಎಸ್ ಎನ್ ಸಾಮಾಜಿಕ ಸೇವಾ ಸಮಿತಿಯಿಂದ ಜ.19 ರಂದು ಜಿಲ್ಲೆ ಮಾನ್ವಿ ಪಟ್ಟಣದಲ್ಲಿ ಸಾಮೂಹಿಕ ಮದುವೆ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ತಿಮ್ಮಾರೆಡ್ಡಿಗೌಡ ಭೋಗಾವತಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರ ಸಾರಥ್ಯದಲ್ಲಿ ಜರುಗಲಿರುವ ಕಾರ್ಯಕ್ರಮದ ಸಾನಿಧ್ಯವನ್ನು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಜಾಲಹಳ್ಳಿಯ ಬೃಹನ್ಮಠದ ವಿದ್ಯಾಭಿಮಾನ್ಯ ಶಿವಾಭಿನವ ಜಯಶಾಂತೇಶ್ವರ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು, ನಾನಾ ಧರ್ಮಗಳ ಗುರುಗಳು, ಮಠಾಧೀಶರು, ಪೀಠಾಧಿಪತಿಗಳು ವಹಿಸಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಮಾಜಿ ಸಂಸದ ಬಿ.ವಿ.ನಾಯಕ ಅವರು ವಹಿಸಲಿದ್ದು, ಕೇಂದ್ರ ರೈಲ್ವೆ ಸಚಿವಾಲಯದ ರಾಜ್ಯ ಸಚಿವ ವಿ.ಸೋಮಣ್ಣ, ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕ ಗಾಲಿ ಜನಾರ್ಧನ ರೆಡ್ಡಿ, ಹಾಲಿ-ಮಾಜಿ ಸಚಿವರು, ಶಾಸಕರು, ಎಂಎಲ್ಸಿ, ವಿವಿಧ ಪಕ್ಷಗಳ ಪ್ರಮುಖರು, ಸಮಾಜದ ಮುಖಂಡರು ಸೇರಿದಂತೆ ಹಲವಾರು ಜನರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಕಳೆದ ಹತ್ತು ವರ್ಷಗಳಿಂದ ಮಾನ್ವಿ-ಸಿರವಾರ ಕೆಎಸ್ಎನ್ ಸಾಮಾಜಿಕ ಸೇವಾ ಸಮಿತಿಯಿಂದ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಕೋವಿಡ್ ಸಮಯದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಆಹಾರ, ಮಾಸ್ಕ್, ಕುಡಿಯುವ ನೀರು ಸೇರಿದಂತೆ ಆಹಾರ ಕಿಟ್ಗಳನ್ನು ವಿತರಿಸಲಾಗಿತ್ತು. ಇದೀಗ ಬೃಹತ್ ಸಾಮೂಹಿಕ ವಿವಾಹ ಮಹೋತ್ಸವನ್ನು ಆಯೋಜಿಸಿದ್ದು ಸುಮಾರು 5,001 ಜೋಡಿಗಳ ಹಸೆಮಣಿ ಹತ್ತಲಿದ್ದಾರೆ ಈಗಾಗಲೇ ನೂರಾರು ಜನರು ನೋಂದಣಿಯನ್ನು ಮಾಡಿಸಿಕೊಂಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ತಿಪ್ಪರಾಜು ಹವಲ್ದಾರ್, ಗಂಗಾಧರ ನಾಯಕ, ಜಾಡಲದಿನ್ನಿ ಶರಣಪ್ಪ, ಅಚ್ಚುತರೆಡ್ಡಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಕೆ.ಜಂಬಣ್ಣ ನಿಲಗಲ್, ರಮಾನಂದ, ಶಂಕರಗೌಡ, ರಾಘವೇಂದ್ರ ಉಟ್ಕೂರ್ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಮುಖಂಡರು ಇದ್ದರು.