ರಾಯಚೂರು | ತರಕಾರಿ ಮಾರುಕಟ್ಟೆ ಸ್ಥಳಾಂತರ ಮಾಡಲು ಮೀನಾ ಮೇಷ : ಎನ್.ಮಹಾವೀರ ಖಂಡನೆ

ರಾಯಚೂರು : ನಗರದ ಎಂ.ಈರಣ್ಣ ವೃತ್ತದಿಂದ ಆಕಾಶವಾಣಿ ಕೇಂದ್ರಕ್ಕೆ ಹೋಗುವ ರಸ್ತೆಯ ಮಧ್ಯಭಾಗದಲ್ಲಿ ಸ್ಮಶಾನ ಪಕ್ಕದ ಜಾಗದಲ್ಲಿ ಸರ್ಕಾರಿ ಸಿ.ಎ.ಸೈಟ್‌ನಲ್ಲಿ ಹಾಗೂ ಖಾಸಗಿ ವ್ಯಕ್ತಿಯ ಪ್ಲಾಟ್‌ಗಳಲ್ಲಿ ಅನಧಿಕೃತ ತರಕಾರಿ ಮಾರುಕಟ್ಟೆ ನಡೆಯುತ್ತಿದ್ದು, ಸ್ಥಳಾಂತರಕ್ಕೆ ವಿಳಂಬ ಮಾಡುವುದನ್ನು ಬಿಟ್ಟು ತಕ್ಷಣ ಕ್ರಮ ಕೈಗೊಳ್ಖಬೇಕೆಂದು ರಾಯಚೂರು ನಗರ ಉಸ್ಮಾನಿಯ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಮಹಾವೀರ ಒತ್ತಾಯಿಸಿದರು.
ನಗರದ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, "ಅನಧಿಕೃತ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಿಸಲು ವಿಳಂಬವೇಕೆ ಆಯುಕ್ತರೇ? ಎಂದು ಪ್ರಶ್ನಿಸಿದ್ದಾರೆ. ಮಹಾ ನಗರಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪಾಲಿಕೆಯ ಸರ್ವ ಸದಸ್ಯರು ಅನಧಿಕೃತ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಗೊಳಿಸಲು ಅನುಮೋದಿಸಿದ್ದಾರೆ" ಆದರೂ ವಿಳಂಭವಾಗುತ್ತಿರುವುದು ಖಂಡನೀಯವೆಂದರು.
ಮಹಾನಗರ ಪಾಲಿಕೆಯ ಆಯುಕ್ತರು, ಖಡಕ್ ಅಧಿಕಾರಿ ಸರಿಯಷ್ಟೇ, ಪಾಲಿಕೆಯ ಸಿಬ್ಬಂದಿ ಹಾಗೂ ನೌಕರರು ಭ್ರಷ್ಟಚಾರದಲ್ಲಿ ತೊಡಗಿರುತ್ತಾರೆ. ಸರ್ಕಾರದ ಆದೇಶದಂತೆ ಇ-ಖಾತಾ ಮತ್ತು ಬಿ-ಖಾತಾಗಳನ್ನು ತ್ವರಿತಗತಿಯಲ್ಲಿ ಕೆಲಸಗಳು ಆಗುತ್ತಿಲ್ಲವೆಂದರು.
ವಾರ್ಡ ನಂ.13ನೇ ಪಾಲಿಕೆ ಸದಸ್ಯೆ ಪತಿಯವರು ಅನಧಿಕೃತ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಿ ಕರ ವಸೂಲಿ ಮಾಡಿಕೊಳ್ಳುತ್ತಿದ್ದಾನೆ. 2024-25ನೇ ಅವಧಿಗೆ ತರಕಾರಿ ಮಾರುಕಟ್ಟೆಯಿಂದ ಕರವಸೂಲಿ ಮಾಡುವ ಟೆಂಡರ್ ಆಗಿರುವುದಿಲ್ಲ. ನಾನು ಟೆಂಡರ್ ಪಡೆದುಕೊಂಡಿದ್ದೇನೆಂದು ಹೇಳಿಕೊಂಡು ಕಾನೂನು ಬಾಹಿರವಾಗಿ ಕರ ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಿದರು.
ಅನಧಿಕೃತ ಕರ ವಸೂಲಿ ಮಾಡುವರನ್ನು ಕೆಲ ಮುಖಂಡರು ಬೆಂಬಲ ನೀಡುತ್ತಿರುವುದು ವಿಷಾದನೀಯ ಹಾಗೂ ಖಂಡನೀಯವೆಂದರು.
ಅನಧಿಕೃತ ತರಕಾರಿ ಮಾರುಕಟ್ಟೆ ಕರ ವಸೂಲಿಯಲ್ಲಿ ಭಾಗೀಯಾದವರ ಮೇಲೆ ತಕ್ಷಣ . ಕೂಡಲೇ ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಮತ್ತು ವಾರ್ಡ ನಂ.13 ಮಹಾನಗರ ಪಾಲಿಕೆ ಸದಸ್ಯೆಯ ಪಾಲಿಕೆ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದೇವೆ ಎಂದರು.
ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿರುವ ಸ್ಥಳೀಯ ರಾಜಕೀಯ ಮುಖಂಡರುಗಳಿಗೆ ಅಭಿನಂದನೆಗಳು. ಮಹಾನಗರ ಪಾಲಿಕೆಯ ಆಯುಕ್ತ ಒಬ್ಬ ಖಡಕ್ ಅಧಿಕಾರಿಯನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿರುವುದು ಖಡಕ್ ಅಧಿಕಾರಿಯಿಂದ ಪಾಲಿಕೆಯಲ್ಲಿ ಭ್ರಷ್ಟಚಾರ ಕಡಿಮೆಯಾಗುತ್ತದೆಂದು ನಗರದ ಜನತೆ ಭಾವಿಸಿದ್ದರು. ಆದರೆ ಪಾಲಿಕೆಯಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದೆ. ರಾಯಚೂರು ಮಹಾನಗರ ಪಾಲಿಕೆಗೆ ಯಾರೇ ಖಡಕ್ ಅಧಿಕಾರಿ ಬಂದರೂ ಕೂಡ ಪ್ರಯೋಜನವಿಲ್ಲ. ರಾಜ್ಯ ಸರ್ಕಾರ ಇ-ಖಾತಾ ಮತ್ತು ಬಿಖಾತಾಗಳನ್ನು ಪಡೆದುಕೊಳ್ಳಲು ಸರ್ಕಾರ ಆದೇಶದ ಪ್ರಕಾರ ಇ-ಖಾತಾ ಮತ್ತು ಬಿ-ಖಾತಾ ಪಾಲಿಕೆ ಸಿಬ್ಬಂದಿಯು ತ್ವರಿತವಾಗಿ ಕೊಡುತ್ತಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳನ್ನು ಹೇಳುತ್ತಿರುವುದು ಶೋಚನಿಯವೆಂದರು.
ಪಾಲಿಕೆಯ ಆಯುಕ್ತರು, ನಗರದ ಜನತೆಗೆ ಯಾವುದೇ ರೀತಿಯ ತೊಂದರೆ ಆಗದೇ ಇ-ಖಾತಾ ಮತ್ತು ಬಿ-ಖಾತಾಗಳನ್ನು ತ್ವರಿತಗತಿಯಲ್ಲಿ ನೀಡಲು ಪಾಲಿಕೆ ಸಿಬ್ಬಂದಿಗಳಿಗೆ ಸೂಚಿಸಬೇಕು. ಪಾಲಿಕೆ ಆಯುಕ್ತರು ಕೂಡಲೇ ಅನಧಿಕೃತ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಗೊಳಿಸಿ. 2025-26ರ ಕರವಸೂಲಿ ಟೆಂಡರ್ ಕರಿಯಬೇಕು ಇಲ್ಲದಿದ್ದಲ್ಲಿ ಮಹಾನಗರ ಪಾಲಿಕೆಗೆ ಇಲ್ಲಿಯವರೆಗೆ 1 ಕೋಟಿ ರೂಪಾಯಿ ಆದಾಯ ನಷ್ಟವಾದಂತಾಗುತ್ತದೆ. ಹಾಗೂ ವಾರ್ಡ ನಂ.13 ಪಾಲಿಕೆಯ ಸದಸ್ಯೆಯ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘವು ಒತ್ತಾಯ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಎನ್.ಮಹಾವೀರ,ಕಾರ್ಯದರ್ಶಿ ಪ್ರಭುನಾಯಕ, ಕೆ.ವಿ.ಖಾಜಪ್ಬ,ಬಸವರಾಜ,ಉದಯಕುಮಾರ,ರಿಜ್ವಾನ್ ಉಪಸ್ಥರಿದ್ದರು.