ರಾಯಚೂರು | ಜಿಲ್ಲೆಯ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ ಸಚಿವ ಎನ್.ಎಸ್.ಬೋಸರಾಜು

ರಾಯಚೂರು : ಜಿಲ್ಲೆಯ ರೈಲ್ವೆ ಇಲಾಖೆಗೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನವದೆಹಲಿಯಲ್ಲಿ ಮಂಗಳವಾರ ಕೇಂದ್ರ ಜಲಶಕ್ತಿ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ, ರಾಜ್ಯ ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಅವರು ಮನವಿ ಪತ್ರ ಸಲ್ಲಿಸಿದರು.
ವಿಶಾಖಪಟ್ಟಣಂದಿಂದ ಮಹೆಬೂಬ್‍ನಗರದವರೆಗೆ ಸಂಚರಿಸುವ ಎಕ್ಸ್ ಪ್ರೆಸ್ ರೈಲನ್ನು ರಾಯಚೂರು ನಗರದವರೆಗೆ ವಿಸ್ತರಣೆ ಮಾಡಬೇಕು. ರಾಯಚೂರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮಿನಿ ವಿಧಾನಸೌಧದಿಂದ ನಗರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯಾದ ಯಕ್ಲಾಸಪುರ ರಸ್ತೆಯನ್ನು ಹಾದು ಹೊಗಿರುವ ರೈಲ್ವೆ ಸಂಪರ್ಕದ ಅಂಡರ್ ಪಾಸ್ ಬ್ರಿಡ್ಜ್ ಚಿಕ್ಕದಾಗಿದ್ದು, ದ್ವಿಚಕ್ರ ವಾಹನಗಳು ಹೊರತುಪಡಿಸಿ, ಬೇರೆ ಯಾವ ವಾಹನಗಳು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಈ ಸೇತುವೆಯನ್ನು ದೊಡ್ಡದಾಗಿ ನಿರ್ಮಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ರಾಯಚೂರು ನಿಲ್ದಾಣದಲ್ಲಿ ಎಕ್ಸಲೇಟರ್ ಅಳವಡಿಸಿ ರೈಲ್ವೆ ನಿಲ್ದಾಣದ ಅಭಿವೃದ್ಧಿಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ರಾಜ್ಯದ ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಟಿ.ಬಿ.ಜಯಚಂದ್ರ ಸೇರಿದಂತೆ ಇತರರಿದ್ದರು.