ರಾಯಚೂರು | ಜೋಳ ಖರೀದಿ ಕೇಂದ್ರ ತೆರೆಯಲು ಶಾಸಕರ ಒತ್ತಾಯ
ರಾಯಚೂರು : ಜಿಲ್ಲೆಯಲ್ಲಿ ಜೋಳ ಖರೀದಿ ಕೇಂದ್ರಗಳನ್ನು ತ್ವರಿತಗತಿಯಲ್ಲಿ ತೆರೆದು ರೈತರಿಗೆ ಅನುಕೂಲ ಮಾಡಬೇಕು. ಈರುಳ್ಳಿ ಸೇರಿದಂತೆ ರೈತರ ಉತ್ಪನ್ನಗಳಿಗ ಎಪಿಎಂಸಿಯಲ್ಲಿ ಖರೀದಿ ಮಾಡದೇ ಅಧಿಕಾರಿಗಳು ವಾಪಸ್ ಕಳುಹಿಸುತ್ತಿದ್ದು ರಾಜ್ಯ ಸರಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಜಿಲ್ಲೆಯ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರಿಗೆ ಮನವಿ ಮಾಡಿದ್ದಾರೆ.
ರಾಯಚೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಆರಂಭದಲ್ಲಿ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ನೀರಾವರಿ ಪ್ರದೇಶ ಹೊರತುಪಡಿಸಿ ಹಲವೆಡೆ ಅನೇಕ ರೈತರು ಜೋಳ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತಿಲ್ಲ. ಕೂಡಲೇ ರಾಜ್ಯ ಸರಕಾರ ಜೋಳ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿದರು.
ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ರೈತರು ಈರುಳ್ಳಿ ಬೆಳೆದಿದ್ದು ರಾಯಚೂರಿನ ಎಪಿಎಂಸಿಯಲ್ಲಿ ಆದೇಶ ಹೊರಡಿಸಿ ರೈತರು ಈರುಳ್ಳಿ ವ್ಯಾಪಾರಕ್ಕೆ ತರಬಾರದು ಎಂದು ಹೇಳುತ್ತಿದ್ದಾರೆ ಇದರಿಂದ ಅನೇಕ ರೈತರ ಬೆಳೆ ಹೊಲದಲ್ಲಿಯೇ ಕೊಳೆತು ಲಕ್ಷಾಂತರ ರೂಪಾಯಿ ನಾಶವಾಗಿದೆ ಇದಕ್ಕೆ ಯಾರು ಹೊಣೆ ಎಂದು ಸಚಿವರಿಗೆ ಪ್ರಶ್ನಿಸಿದರು.
ಎಪಿಎಂಸಿ ಕಾರ್ಯದರ್ಶಿ ಆದೆಪ್ಪಗೌಡ ಪ್ರತಿಕ್ರಿಯಿಸಿ, ಎಪಿಎಂಸಿಯಲ್ಲಿ ಕೇವಲ 3–4 ಜನ ಈರುಳ್ಳಿ ಖರೀದಿದಾರರು ಇದ್ದು, 40 ಸಾವಿರಕ್ಕೂ ಹೆಚ್ಚು ಚೀಲಗಳು ಮಾರಾಟಕ್ಕೆ ತರುವುದರಿಂದ ಸಮಸ್ಯೆಯಾಗುತ್ತಿದೆ. ಹೀಗಾಗಿ ಹೈದರಾಬಾದ್ ಮತ್ತಿತರೆಡೆ ದೊಡ್ಡ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಹೆಚ್ಚಿನ ಲಾಭ ನಿರೀಕ್ಷಿಸಬಹುದು ಎಂದು ರೈತರಿಗೆ ಈರುಳ್ಳಿ ತರದಂತೆ ಹೇಳಿದ್ದೇವೆ ಎಂದು ಸಬೂಬು ನೀಡಿದರು.
ಸಭೆಯಲ್ಲಿ ಕೃಷಿ ಇಲಾಖೆ, ರೇಷ್ಮೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು.
ಸಭೆಯಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಚ್.ಎಂ.ರೇವಣ್ಣ, ನಿಗಮಗಳ ಅಧ್ಯಕ್ಷರುಗಳಾದ ಬಸನಗೌಡ ತುರ್ವಿಹಾಳ, ಬಸನಗೌಡ ದದ್ದಲ್, ಡಿಸಿ ನಿತೀಶ, ಜಿ.ಪಂ ಸಿಇಓ ರಾಹುಲ್ ತುಕಾರಾಂ ಪಾಂಡ್ವ, ಎಸ್ಪಿ ಪುಟ್ಟಮಾದಯ್ಯ ಇದ್ದರು.
ಶಾಸಕರಾದ ಹಂಪಯ್ಯನಾಯಕ, ಹಂಪನಗೌಡ ಬಾದರ್ಲಿ, ಎಲ್ಎಲ್ಸಿಗಳಾದ ಎ.ವಸಂತಕುಮಾರ, ಚಂದ್ರಶೇಖರ ಪಾಟೀಲ್, ಬಸನಗೌಡ ಬಾದರ್ಲಿ ಸೇರಿ ಗ್ಯಾರಂಟಿ ಯೋಜನಾ ಸಮಿತಿ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ತಾಲೂಕು ಅಧ್ಯಕ್ಷರುಗಳು, ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.