ಲೋಕಸಭೆಯಲ್ಲಿ ಕನ್ನಡದಲ್ಲಿಯೇ ಮಾತನಾಡಿದ ಸಂಸದ ಕುಮಾರ್ ನಾಯ್ಕ್
ಕೇಂದ್ರ ಬಜೆಟ್ ಕುರಿತು ಟೀಕೆ

ರಾಯಚೂರು : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ವಾಸ್ತವಿಕತೆ ಬಿಂಬಿಸುವ ಕನ್ನಡಿಯಲ್ಲ. ಭವಿಷ್ಯತ್ತಿಗೆ ದಾರಿ ತೋರುವ ದೀವಿಗೆಯೂ ಅಲ್ಲ. ಕಟ್ಟು ಕಥೆಗಳ ಕಂತೆ ಎಂದು ಸಂಸದ ಜಿ.ಕುಮಾರ ನಾಯಕ್ ಸಂಸತ್ತಿನಲ್ಲಿ ಬಜೆಟ್ ಮೆಲಿನ ಚರ್ಚೆಯಲ್ಲಿ ಟೀಕಾ ಪ್ರಹಾರ ನಡೆಸಿದರು.
ನಿನ್ನೆ ಸಂಸತ್ತಿನ ಅಧಿವೇಶನದಲ್ಲಿ ಕನ್ನಡದಲ್ಲಿಯೇ ಮಾತನಾಡಿ ಗಮನ ಸೆಳೆದ ಅವರು, ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಅತಿ ಧೈರ್ಯದ ಹೇಳಿಕೆ, ಮಹಾದಾಸೆಯ ಘೋಷಣೆಯಾಗಿದೆ, ಜನಜೀವನ ಕಷ್ಟ, ಕಾರ್ಪಣ್ಯಗಳ ಪುಟ್ಟ ಪುಸ್ತಕವಾಗಿದೆ ಎಂದು ಲೇವಡಿ ಮಾಡಿದರು.
ದೇಶದ ಆರ್ಥಿಕತೆ ನಿಧಾನವಾಗಿದೆ. ಹಣದುಬ್ಬರ ಹೆಚ್ಚಾಗಿದೆ. ಅಸಮಾನತೆ ಹೊಸ ದಾಖಲೆ ಸೃಷ್ಠಿಸಿದೆ. ನಿರುದ್ಯೋಗ ಅಪಾಯಕಾರಿ ಮಟ್ಟದಲ್ಲಿದೆ, ಜನಜೀವನ ದುಸ್ತರವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಏಮ್ಸ್ ಬಗ್ಗೆ ಧ್ವನಿ ಎತ್ತಿದ ಸಂಸದ :
ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯಿಂದ ಸಾವಿರ ದಿನಗಳಿಂದ ಅನಿರ್ದಿಷ್ಠಾವಧಿ ಸತ್ಯಾಗ್ರಹ ಮಾಡಲಾಗುತ್ತಿದೆ. ಎಲ್ಲಾ ರಾಜ್ಯಕ್ಕೆ ಏಮ್ಸ್ ಮಂಜೂರು ಮಾಡಿದ ಕೇಂದ್ರ ಸರಕಾರ ನಮ್ಮ ಕರ್ನಾಟಕ ರಾಜ್ಯಕ್ಕೆ ನೀಡದೇ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು 6.29 ನಿಮಿಷ ಸುದೀರ್ಘವಾದ ಭಾಷಣ ಮಾಡಿ ಕೇಂದ್ರದ ವಿರುದ್ದ ಟೀಕಾ ಪ್ರಹಾರ ಮಾಡಿದರು.