ರಾಯಚೂರು | ಪಿಡಿಒ ಪರೀಕ್ಷೆ ಲೋಪ ಪ್ರಕರಣ : ಸಿಐಡಿಗೆ ವಹಿಸಲು ಡಾ.ರಜಾಕ್ ಉಸ್ತಾದ್ ಆಗ್ರಹ
ರಾಯಚೂರು : ಈಚೆಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ಪಿಡಿಒ ಹುದ್ದೆಗೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಿಂಧನೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಾದ ಗಲಾಟೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ರಜಾಕ್ ಉಸ್ತಾದ್ ಮನವಿ ಮಾಡಿದರು.
ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶ್ನೆ ಪತ್ರಿಕೆ 15 ನಿಮಿಷ ತಡವಾಗಿ ನೀಡಿದ್ದಲ್ಲದೇ, ಆಗಲೇ ಲಕೋಟೆ ತೆಗೆಯಲಾಗಿತ್ತು. ಇದನ್ನೇ ಪರೀಕ್ಷಾರ್ಥಿಗಳು ಪ್ರಶ್ನಿಸಿದ್ದಾರೆ. ನಿಯಮಾನುಸಾರ ನಿಗದಿತ ಸಮಯಕ್ಕೆ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಪ್ರಶ್ನೆ ಪತ್ರಿಕೆ ಲಕೋಟೆ ತೆರೆಯಬೇಕು. ಅಲ್ಲದೇ, ಇಬ್ಬರು ಪರೀಕ್ಷಾರ್ಥಿಗಳ ಸಹಿ ಕೂಡ ಪಡೆಯಬೇಕು. ಆದರೆ, ಅಲ್ಲಿನ ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಇದ್ಯಾವುದು ಮಾಡದೇ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪ ಮಾಡಿದರು.
ಕರ್ತವ್ಯಲೋಪ ಪ್ರಶ್ನಿಸಿ ಪ್ರತಿಭಟನೆ ನಡೆಸಿದ ಕಾರಣಕ್ಕೆ 12 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿರುವುದು ಖಂಡನೀಯ. ಇದರಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವುದು ತಪ್ಪು ಎಂದಾದರೆ, ನಿಯಮದ ಪ್ರಕಾರ ಪರೀಕ್ಷೆ ನಡೆಸದೇ ಇರುವ ಅಧಿಕಾರಿಗಳದ್ದು ಕೂಡ ಅಷ್ಟೇ ತಪ್ಪು. ಹಾಗಾಗಿ ಪರೀಕ್ಷಾ ಕೇಂದ್ರದ ಮುಖ್ಯಸ್ಥ ಬಸವರಾಜ ಸೇರಿ ಇತರೆ ಸಿಬ್ಬಂದಿ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಪರೀಕ್ಷಾ ಕೊಠಡಿಗಳಲ್ಲಿ 800 ವಿದ್ಯಾರ್ಥಿಗಳು ಪರೀಕ್ಷೆ ಹಾಜರಿದ್ದರು. ಪ್ರತಿ ಕೋಣೆಯಲ್ಲಿ 24 ವಿದ್ಯಾರ್ಥಿಗಳಿದ್ದು, ಕೇವಲ 12 ವಿದ್ಯಾರ್ಥಿಗಳಿಗೆ ಮಾತ್ರ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಈ ರೀತಿ ಎಲ್ಲ ಕೋಣೆಗಳಲ್ಲೂ ಸಮಸ್ಯೆ ಆಗಿದೆ. ಆದರೆ, ಇಷ್ಟೆಲ್ಲ ಆಗಿದ್ದರೂ ಸ್ಥಳೀಯ ಅಧಿಕಾರಿಗಳೇ ತನಿಖೆ ನಡೆಸಿ ವಿದ್ಯಾರ್ಥಿಗಳನ್ನು ಮಾತ್ರ ಗುರಿ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಈ ಕೇಂದ್ರದಲ್ಲಿ ಇಂಥ ಪರೀಕ್ಷೆಗಳು ನಡೆದಿರುವುದು ಇದೇ ಮೊದಲಲ್ಲ. ಅಲ್ಲದೇ, ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೂ ತರಬೇತಿ ನೀಡಿರುತ್ತಾರೆ. ಇದರಲ್ಲಿ ಕೇವಲ ವಿದ್ಯಾರ್ಥಿಗಳನ್ನು ತಪ್ಪಿತಸ್ಥರನ್ನಾಗಿ ಮಾಡದೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನು, ಸಿಬ್ಬಂದಿಯನ್ನು ತಪ್ಪಿತಸ್ಥರನ್ನಾಗಿ ಮಾಡಬೇಕು ಹಾಗೂ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮುಹಮ್ಮದ್ ಉಸ್ಮಾನ್ ಇದ್ದರು.