ರಾಯಚೂರು | ಗ್ರಾಮ ಪಂಚಾಯತ್ ಗಳ ಪ್ರಗತಿ ಪರಿಶೀಲನಾ ಸಭೆ
ತೆರಿಗೆ ಸಂಗ್ರಹದಲ್ಲಿ ರಾಜ್ಯದಲ್ಲೇ ರಾಯಚೂರು ಪ್ರಥಮ : ರಾಹುಲ್ ತುಕರಾಂ ಪಾಂಡ್ವೆ
ರಾಯಚೂರು : ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಗಳಿಂದ ತೆರಿಗೆ ಸಂಗ್ರಹ ಕಾರ್ಯ ಉತ್ತಮವಾಗಿ ನಡೆದಿದ್ದು, ರಾಜ್ಯದಲ್ಲಿ ತೆರಿಗೆ ಸಂಗ್ರಹದಲ್ಲಿ ಜಿಲ್ಲೆಯು ಪ್ರಥಮ ಸ್ಥಾನಕ್ಕೆ ತಲುಪಿರುವುದು ಸಂತಸದ ವಿಚಾರವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಗ್ರಾಮ ಪಂಚಾಯತ್ ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಸಿರವಾರ, ಮಾನ್ವಿ, ರಾಯಚೂರು, ಸಿಂಧನೂರು ಹಾಗೂ ಮಸ್ಕಿ ತಾಲೂಕಿನಲ್ಲಿ ಉತ್ತಮ ತೆರಿಗೆ ಸಂಗ್ರಹವಾಗಿದೆ. ಅದೇ ರೀತಿ ದೇವದುರ್ಗ ಮತ್ತು ಲಿಂಗಸುಗೂರು ತಾಲೂಕುಗಳು ಸಹ ಉತ್ತಮ ಸ್ಥಾನ ಕಾಯ್ದುಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತೆರಿಗೆ ಸಂಗ್ರಹದಲ್ಲಿ ಜಿಲ್ಲೆಯ ಒಟ್ಟಾರೆ ಸಾಧನೆಯು ಶೇ.81ರಷ್ಟಿದ್ದು, ಸಿರವಾರ ತಾಲೂಕಿನಲ್ಲಿ ಶೇ.93, ರಾಯಚೂರು ತಾಲೂಕಿನಲ್ಲಿ ಶೇ.84, ಮಾನ್ವಿ, ಸಿಂಧನೂರು ಹಾಗೂ ಮಸ್ಕಿ ತಾಲೂಕಿನಲ್ಲಿ ಶೇ.81ಕ್ಕಿಂತ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. ಉಳಿದಂತೆ ಲಿಂಗುಸಗೂರು ತಾಲೂಕಿನಲ್ಲಿ ಶೇ.78 ಹಾಗೂ ದೇವದುರ್ಗ ಅರಕೇರಾ ಸೇರಿ ಶೇ.69 ಸಾಧನೆಯಾಗಿದೆ. ಲಿಂಗಸುಗೂರು ಹಾಗೂ ದೇವದುರ್ಗ ತಾಲೂಕುಗಳು ಸುಧಾರಿಸಬೇಕಿದೆ ಎಂದು ತಿಳಿಸಿದರು.
ತೆರಿಗೆ ಸಂಗ್ರಹ ಮಾತ್ರವಲ್ಲದೇ ಗ್ರಾಮ ಪಂಚಾಯತ್ ಪಿಡಿಒಗಳು ಇತರೆ ಸಮಸ್ಯೆಗಳ ಬಗ್ಗೆಯೂ ಗಮನಹರಿಸಬೇಕು. ಮಾರ್ಚ್ ಅಂತ್ಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಗ್ರಾಮ ಪಂಚಾಯತಿಗಳಿಗೆ ಪ್ರಶಂಸಿಲಾಗುತ್ತದೆ ಎಂದು ಹೇಳಿದರು.
ಶುದ್ಧವಾದ ಕುಡಿಯುವ ನೀರು ಸಿಗುತ್ತಿಲ್ಲ ಎಂಬುದು ಬಹುತೇಕ ಗ್ರಾಮಸ್ಥರ ದೂರುಗಳಾಗಿರುತ್ತವೆ. ಈ ಬಗ್ಗೆ ಎಲ್ಲಾ ಪಂಚಾಯತ್ ಗಳಲ್ಲಿ ಗಮನ ಹರಿಸಬೇಕು. ಆಯಾ ಪಂಚಾಯತ್ ವ್ಯಾಪ್ತಿಯಲ್ಲಿನ ಶುದ್ದ ಕುಡಿಯುವ ನೀರಿನ ಘಟಕಗಳ ಸದ್ಯದ ಸ್ಥಿತಿಗತಿ ಏನು ಎಂಬುದರ ಬಗ್ಗೆ ಕೂಡಲೇ ಪರಿಶೀಲಿಸಿ ಜಿಲ್ಲಾ ಪಂಚಾಯತ್ ಗೆ ವರದಿ ಮಾಡಬೇಕು ಎಂದು ಸಿಇಓ ಅವರು ಎಲ್ಲ ಪಿಡಿಓಗಳಿಗೆ ನಿರ್ದೇಶನ ನೀಡಿದರು.
ಲಿಂಗಸೂರ ತಾಲೂಕಿನ ಅಧಿಕಾರಿಗಳಿಗೆ ಎಚ್ಚರಿಕೆ :
ಲಿಂಗಸುಗೂರು ತಾಲೂಕಿನಿಂದ ಜಿಲ್ಲಾ ಪಂಚಾಯತಿಗೆ ನಿರಂತರವಾಗಿ ಸಮಸ್ಯೆಗಳ ಬಗ್ಗೆ ದೂರುಗಳು ಬರುತ್ತಿವೆ. ತಾಲೂಕಿನಲ್ಲಿ ಎಲ್ಲ ಗ್ರಾಮ ಪಂಚಾಯತ್ ಅಧಿಕಾರಿಗಳು ಸಂಪರ್ಕಕ್ಕೆ ಸಿಗುವುದಿಲ್ಲ. ಸಮಸ್ಯೆಗಳನ್ನು ಆಲಿಸುವುದಿಲ್ಲ ಎಂಬ ದೂರುಗಳ ಬರುತ್ತಿದ್ದು, ಲಿಂಗಸುಗೂರು ತಾಲೂಕಿನ ಅಧಿಕಾರಿಗಳು ಎಚ್ಚರವಹಿಸಿ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.
ಕಾರಣ ಕೇಳಿ ನೋಟಿಸ್ ನೀಡಿ :
ದೇವದುರ್ಗ ತಾಲೂಕಿನ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಗೆ ಬಾರದಿರುವುದಕ್ಕೆ ಕಾರಣ ಕೇಳಿ ನೋಟೀಸ್ ಜಾರಿ ಮಾಡುವಂತೆ ಸಿಇಓ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾಮಾನ್ಯ ಸಭೆ ನಿಯಮಿತವಾಗಿ ನಡೆಯಲಿ :
ಕಡ್ಡಾಯವಾಗಿ ಗ್ರಾಮ ಪಂಚಾಯತ್ ಗಳು ಸಾಮಾನ್ಯ ಸಭೆಗಳು ನಿಯಮಿತವಾಗಿ ನಡೆಯಬೇಕು. ದೇವದುರ್ಗ ಮತ್ತು ಅರಕೇರಾದಲ್ಲಿ 5, ಮಸ್ಕಿಯಲ್ಲಿ 8 ಮಾತ್ರ ನಡೆದಿವೆ. ಎಲ್ಲಾ ಪಂಚಾಯ್ತಿಗಳಲ್ಲಿ ಕಡ್ಡಾಯವಾಗಿ ಸಾಮಾನ್ಯ ಸಭೆ ನಡೆಸಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಶರಣಬಸವ ಕೆಸರಹಟ್ಟಿ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಡಾ.ಟಿ.ರೋಣಿ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇದ್ದರು.