ರಾಯಚೂರು: ಮಹಾನಗರ ಪಾಲಿಕೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ಅನುದಾನವನ್ನು ಕಾಲಮಿತಿಯೊಳಗೆ ಬಳಸಲು ಜಿಲ್ಲಾಧಿಕಾರಿಗಳ ನಿರ್ದೇಶನ
ರಾಯಚೂರು: 15ನೇ ಹಣಕಾಸು ಮುಕ್ತ ಮತ್ತು ನಿರ್ಬಂಧಿತ ಅನುದಾನ, ಎಸ್ಎಫ್ಸಿ, ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅನುದಾನ ಸೇರಿದಂತೆ ಮಹಾನಗರ ಪಾಲಿಕೆಯ ನಾನಾ ಯೋಜನೆಗಳಿಗೆ ಸಂಬಂಧಿಸಿದ ಅನುದಾನವನ್ನು ಕಾಲಮಿತಿಯೊಳಗೆ ಬಳಸಿ ರಾಯಚೂರು ನಗರದ ಸೌಂದರ್ಯೀಕರಣಕ್ಕೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, 2021-22ನೇ ಸಾಲಿನಿಂದ 2024-2025ನೇ ಸಾಲಿನವರೆಗೆ ಎಸ್ಎಫ್ಸಿ ಕುಡಿಯುವ ನೀರು ಪೂರೈಕೆಗೆ ಮೀಸಲಿರಿಸಿದ ಅನುದಾನ, ನಗರೋತ್ಥಾನ ಹಂತ 3 ಮತ್ತು 4ರ ಅನುದಾನ ಹಾಗೂ ಸಿವಿಲ್ ಕಾಮಗಾರಿಗಳ ಅನುದಾನವನ್ನು ಆಯಾ ಉದ್ದೇಶಗಳಿಗೆ ನಿಯಮಾನುಸಾರ ಬಳಕೆ ಮಾಡಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ರಾಯಚೂರು ನಗರಸಭೆ ವ್ಯಾಪ್ತಿಯಲ್ಲಿ ಮಂಜೂರಾದ ಆಸ್ಪಿರೇಷನಲ್ ಸಾರ್ವಜನಿಕ ಶೌಚಾಲಯ, ಸಾರ್ವಜನಿಕ ಶೌಚಾಲಯ ಹಾಗೂ ಮೂತ್ರಾಲಯ ನಿರ್ಮಾಣಕ್ಕೆ 4.15 ಕೋಟಿ ರೂಪಾಯಿಯ ಕ್ರಿಯೋ ಯೋಜನೆಗೆ ಈಗಾಗಲೇ ಅನುಮೋದನೆ ನೀಡಿ ಆದೇಶಿಸಲಾಗಿದ್ದು, ಅದರಂತೆ ಅನುದಾನವನ್ನು ಹಂಚಿಕೆ ಮಾಡಿದನ್ವಯ ರಾಯಚೂರು ನಗರದ 8 ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಕಾರ್ಯ, ರಾಯಚೂರು ನಗರದ 4 ಕಡೆಗಳಲ್ಲಿ ಮೂತ್ರಾಲಯ ನಿರ್ಮಾಣ ಕಾರ್ಯ ಮತ್ತು 2 ಕಡೆಗಳಲ್ಲಿ ಆಸ್ಪಿರೇಷನ್ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾರ್ಯವು ತ್ವರಿತಗತಿಯಲ್ಲಿ ನಡೆಯಬೇಕು. ಈ ಕಾಮಗಾರಿಗಳ ಮೇಲ್ವಿಚಾರಣೆಯು ಅಚ್ಚುಕಟ್ಟಾಗಿ ನಡೆಯಬೇಕು. ಭೌತಿಕ ಮತ್ತು ಆರ್ಥಿಕ ಪ್ರಗತಿಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸ್ವಚ್ಛ ಭಾರತ ಮಿಷನ್ 2.0 ಯೊಜನೆಯಡಿ 8 ಕೋಟಿ ರೂ ವೆಚ್ಚದಲ್ಲಿ 6 ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಕಾರ್ಯ, 9.60 ಲಕ್ಷ ರೂ. ವೆಚ್ಚದಲ್ಲಿ 6 ಕಡೆಗಳಲ್ಲಿ ಮೂತ್ರಾಲಯ ನಿರ್ಮಾಣ ಕಾರ್ಯ, ಒಟ್ಟು 8 ಸ್ಥಳಗಳ ಪೈಕಿ ಈಗಾಗಲೇ 7 ಕಡೆಗಳಲ್ಲಿ 10.8 ಕೋಟಿ ರೂ.ವೆಚ್ಚದಲ್ಲಿ ಸಮುದಾಯ ಶೌಚಾಲಯಗಳ ನಿರ್ಮಾಣ ಕಾರ್ಯ ಹಾಗೂ 25 ಲಕ್ಷ ರೂ. ವೆಚ್ಚದಲ್ಲಿ ಮಹತ್ವಕಾಂಕ್ಷೆಯ ಒಂದು ಶೌಚಾಲಯ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
2021-22ನೇ ಸಾಲಿನಲ್ಲಿ 15ನೇ ಹಣಕಾಸು ಯೋಜನೆಯಡಿ ರಾಯಚೂರು ಜಿಲ್ಲೆಗೆ 4.15 ಕೋಟಿ ರೂ ಅನುದಾನ ಮೀಸಲಿರಿಸಲಾಗಿದೆ. ಕ್ರಿಯಾಯೋಜನೆಯಂತೆ ಕೋಟಿ 4.7 ಲಕ್ಷ ರೂ.ವೆಚ್ಚದಲ್ಲಿ 6 ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಈ ಪೈಕಿ ರೂ.2.99 ಕೋಟಿ ವೆಚ್ಚದಲ್ಲಿ 5 ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. 1.ಕೋಟಿ ರೂ ವೆಚ್ಚದಲ್ಲಿ 1 ಚಟುವಟಿಕೆ ನಡೆಸಲು ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಅಮೃತ ನಿರ್ಮಲ ನಗರ ಯೋಜನೆಯಡಿ ರಾಯಚೂರು ಜಿಲ್ಲೆಗೆ ಒಂದು ಕೋಟಿ ಅನುದಾನ ಮೀಸಲಿರಿಸಿದ್ದು, ಈ ಪೈಕಿ ಈಗಾಗಲೇ 10 ಲಕ್ಷ ರೂ. ವೆಚ್ಚದಲ್ಲಿ 1 ಕಾರ್ಯ ಆರಂಭವಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಪೌರಾಯುಕ್ತರು, ರಾಯಚೂರು ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಇನ್ನಿತರರು ಇದ್ದರು.