ರಾಯಚೂರು | ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಪ್ರತಿಭಟನೆ
ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ ಜನರು ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ರಾಯಚೂರಿನ ಜಿಲ್ಲಾ ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು.
ಜನಸೇವಾ ಫೌಂಡಷನ್ ಸಹಕಾರದೊಂದಿಗೆ ಮಾನ್ವಿ ತಾಲೂಕಿನ ವಿವಿಧ ಹಳ್ಳಿಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಮಹಿಳೆಯರು, ತಾವು ಅನೇಕ ವರ್ಷಗಳಿಂದ ಸಾಲ ಪಡೆದು ಮರು ಪಾವತಿ ಮಾಡಿದ್ದು, ಈಗ ಕೆಲಸವಿಲ್ಲದೇ ಸಮಸ್ಯೆಯಾದರೂ ಸಾಲ ಮರುಪಾವತಿಗೆ ಸಮಯವಕಾಶ ಕೇಳಿದರೆ, ನೀಡದೇ ಮನೆಗಳಿಗೆ ಬಂದು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ಮೈಕ್ರೋ ಫೈನಾನ್ಸ್ ಕಂಪನಿಗಳು ಭದ್ರತೆ ಇಲ್ಲದೇ ಅಮಾಯಕ ಮಹಿಳೆಯರಿಗೆ ನಕಲಿ ದಾಖಲಾತಿ ಸೃಷ್ಠಿ ಮಾಡಿ ಸಾಲ ನೀಡಿ, ಸಾಲ ಮರುಪಾವತಿಗಾಗಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ. ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಸೇರಿಸಿ ಸಾಲದ ಹಣ ಹಿಂತಿರುಗಿಸುವಂತೆ ದೌರ್ಜನ್ಯ ಮಾಡುತ್ತಿದ್ದಾರೆ. ಕೂಡಲೇ ಸಾಲ ಮನ್ನಾ ಮಾಡಬೇಕು. ಕಿರುಕುಳ ನೀಡಿದ ಫೈನಾನ್ಸ್ ಕಂಪನಿಯ ಅಧಿಕಾರಿಗಳ, ಸಿಬ್ಬಂದಿಯ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಸಾಲ ಮರುಪಾವತಿಸದೇ ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ನಷ್ಟ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಮೈಕ್ರೋ ಫೈನಾನ್ಸ್ ಕಂಪನಿಗಳ ಗೂಂಡಾ ವರ್ತನೆ ಹಾಗೂ ಮಾನಸಿಕ ಕಿರುಕುಳಕ್ಕೆ ಬೇಸತ್ತು ಮಾನ್ವಿಯ ಕಪಗಲ್ ಗ್ರಾಮದ ಶರಣಬಸವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಹಾಯಧನ ನೀಡಬೇಕು. ನಕಲಿ ದಾಖಲೆ ಸೃಷ್ಠಿಸಿ ಸಾಲ ನೀಡಿ ಗುಂಡಾ ವರ್ತನೆ ತೋರಿದ ಕಂಪನಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಜನಸೇವಾ ಫೌಂಡೇಶನ್ ರಾಜ್ಯಾಧ್ಯಕ್ಷ ಜಾವೀದ್ ಖಾನ್, ಕಾರ್ಯದರ್ಶಿ ವೆಂಕಟೇಶ ಪೂಜಾರಿ ಕುರ್ಡಿ, ಸರೋಜಮ್ಮ, ಪಾರ್ವತಿ, ಮಹೇಶ ಚಲವಾದಿ, ರಾಜಪ್ಪ ನೀರಮಾನ್ವಿ ಉಪಸ್ಥಿತರಿದ್ದರು.