ರಾಯಚೂರು | ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ಒದಗಿಸಿ : ನಿತೀಶ್ ಕೆ.
ರಾಯಚೂರು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶ್ರೇಯೋಭಿವೃದ್ಧಿಗಾಗಿ ಸರಕಾರ ಮೀಸಲಿಟ್ಟ ಅನುದಾನವನ್ನು ನಿಗದಿತ ಅವಧಿಯೊಳಗೆ ಶೇ.100ರಷ್ಟು ಖರ್ಚು ಮಾಡಿ, ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿಬೇಕೆಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗುರುವಾರದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗದಲ್ಲಿ 2024ರ ನವಂಬರ್ ತಿಂಗಳ ಅಂತ್ಯದ ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೊಲಿಕೆ ಮಾಡಿದರೆ, ಜಿಲ್ಲೆಯಲ್ಲಿ ಎಸ್ಸಿ, ಎಸ್ಟಿ ಜನಾಂಗ ಹೆಚ್ಚು ವಾಸವಾಗಿದ್ದು, ಅವರಿಗೆ ಸರಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳು ಸರಿಯಾಗಿ ತಲುಪಿಸಬೇಕು ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಗಳ ಅಭಿವೃದ್ಧಿಗಾಗಿ ಸರಕಾರ ಪ್ರತಿ ವರ್ಷ ನೀಡುವ ವಿಶೇಷ ಅನುದಾನವು ನ್ಯಾಯಯುತವಾಗಿ ಆಯಾ ಸಮುದಾಯದ ಜನತೆಗೆ ತಲುಪಿಸಬೇಕು. ಈ ವಿಶೇಷ ಅನುದಾನ ಕಾಲಮಿತಿಯೊಳಗೆ ಬಳಸುವ ಹೊಣೆ ಆಯಾ ಇಲಾಖೆಯ ಅನುಷ್ಠಾನಾಧಿಕಾರಿಗಳ ಮೇಲಿದ್ದು, ನಿಯಮದಂತೆ ಮೀಸಲಿಟ್ಟ ಅನುದಾನವು ನಿಗದಿತ ಅವಧಿಯಲ್ಲಿ ಬಳಸದೇ ವಿಳಂಬವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಯಾಗಿಸಿ, ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.
ಈ ಯೋಜನೆಯ ಅನುದಾನವನ್ನು ನಿಗದಿತ ಯೋಜನೆಗಳಿಗೆ ಮಾತ್ರ ಬಳಸಬೇಕು. ಬೇರೆ ಯೋಜನೆಗಳಿಗೆ ಬಳಸುವಂತಿದ್ದರೆ ಸರಕಾರದ ಆದೇಶದಂತೆ ಬಳಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಎಸ್.ಸಿ.ಮತ್ತು ಎಸ್.ಟಿ. ಸಮುದಾಯದವರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶೇ.100ರಷ್ಟು ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಲು ಆಯಾ ಇಲಾಖಾ ಮುಖ್ಯಸ್ಥರು ವೈಯಕ್ತಿಕ ಗಮನ ಹರಿಸಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕಾರಾಂ ಪಾಂಡ್ವೆ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಚಿದಾನಂದ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಜಯಕುಮಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಶ್ರೀಶೈಲ ಸಿ.ಕಾಚಾಪೂರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಕ.ಬಡಿಗೇರ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಮೊಹಮ್ಮದ ಅಲಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಂದ್ರ ಜಲ್ದಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿರೇಶ್ ನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನವೀನ್ ಕುಮಾರ್, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಧಿಕಾರಿ ಶ್ರೀದೇವಿ, ಪಶು ಸಂಗೋಪನಾ ಇಲಾಖೆಯ ನಿರ್ದೇಶಕರಾದ ಅಶೋಕ ಕೋಲಕಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.