ರಾಯಚೂರು | ಸೇವಾ ನ್ಯೂನತೆ ಆರೋಪ: ಝೊಮ್ಯಾಟೋ, ಡೊಮಿನೋಸ್ ಗೆ 40 ಸಾವಿರ ರೂ. ದಂಡ
ಸಾಂದರ್ಭಿಕ ಚಿತ್ರ (PC: Freepik)
ರಾಯಚೂರು: ಸೇವಾ ನ್ಯೂನತೆ ಎಸಗಿದ ಆರೋಪದಲ್ಲಿ ಝಮ್ಯಾಟೋ ಮತ್ತು ಡೊಮಿನೋಸ್ ಕಂಪೆನಿಗೆ ರಾಯಚೂರು ಜಿಲ್ಲಾ ಗ್ರಾಹಕರ ಆಯೋಗ 40 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ರಾಯಚೂರು ನಗರದ ನಿವಾಸಿ ವಿದ್ಯಾಶ್ರೀ ಎಂಬವರು ಕಳೆದ ಮಾರ್ಚ್ 17ರಂದು ಸಂಜೆ 7 ಗಂಟೆಗೆ ಝಮ್ಯಾಟೋದಲ್ಲಿ ಡೊಮಿನೋಸ್ ಪಿಝ್ಝಾ ಖರೀದಿಸಲು 337.45 ರೂ. ಪಾವತಿಸಿ ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದರು. ಮೊಬೈಲ್ ಸಂಖ್ಯೆಗೆ ಸ್ವೀಕೃತಿಯನ್ನು ಸ್ವೀಕರಿಸಿದ ನಂತರ ರಾತ್ರಿ 9 ಗಂಟೆಯವರೆಗೆ ಕಾದರು ಪಿಝ್ಝಾ ಸರಬರಾಜು ಆಗಿರಲಲ್ಲ. ಈ ಹಿನ್ನೆಲೆಯಲ್ಲಿ ಅವರು ಝಮ್ಯಾಟೋದವರನ್ನು ಸಂಪರ್ಕಿಸಿದಾಗ ಪಿಝ್ಝಾ ತಯಾರಿಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ತಡರಾತ್ರಿವರೆಗೂ ಪಿಝ್ಝಾ ಡೆಲಿವರಿ ಆಗಿರಲಿಲ್ಲ ಎಂದು ವಿದ್ಯಾಶ್ರೀ ಗ್ರಾಹಕರ ಆಯೋಗಕ್ಕೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಮಧ್ಯೆ ವಿದ್ಯಾಶ್ರೀ ಅವರ ಮೊಬೈಲ್ ಸಂಖ್ಯೆಗೆ ಸದರಿ ಪಿಝ್ಝಾ ಡೆಲಿವರಿ ಮಾಡಿರುವ ಬಗ್ಗೆ ಮತ್ತು ಪಿರ್ಯಾದುದಾರರಿಂದ ಹಣ ಸ್ವೀಕರಿಸಿದ ಬಗ್ಗೆ ಸಂದೇಶ ಬಂತು. ಈ ಬಗ್ಗೆ ವಿದ್ಯಾಶ್ರೀ ಝಮ್ಯಾಟೋದವರು ಸಂಪರ್ಕಿಸಿ ಪಿಝ್ಝಾ ಸರಬರಾಜು ಮಾಡದೇ ಸಂದೇಶ ಏಕೆ ಕಳುಹಿಸಿದ್ದೀರಿ? ಎಂದು ವಿಚಾರಿಸಿದಾಗ, ತಮಗೆ ಪಿಝ್ಝಾ ಸರಬರಾಜು ಮಾಡುವಲ್ಲಿ ಅಡಚಣೆಯಾಗಿದೆ, ಅದನ್ನು ಸರಿಪಡಿಸುವುದಾಗಿ ಹೇಳಿದ್ದಾರೆ. ಆದರೆ ತಾನು ಆರ್ಡರ್ ಮಾಡಿದ್ದ ಪಿಝ್ಝಾವನ್ನು ಸರಬರಾಜು ಮಾಡಲಿಲ್ಲ ಎಂದು ಅವರು ದೂರಿದ್ದಾರೆ.
ತನಗಾದ ಕೆಟ್ಟ ಅನುಭವವನ್ನು ಸೇವಾ ನ್ಯೂನತೆ ಎಂದು ಪರಿಗಣಿಸಿ ಪರಿಹಾರ ನೀಡುವಂತೆ ಕೋರಿ ವಿದ್ಯಾಶ್ರೀ ರಾಯಚೂರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರು ಸ್ವೀಕರಿಸಿದ ರಾಯಚೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ರಾಯಚೂರಿನ ಝಮ್ಯಾಟೋ ಹಾಗೂ ಬೆಂಗಳೂರಿನ ಡೊಮಿನೋಸ್ ಕಂಪನಿಗೆ ನೋಟಿಸ್ ಜಾರಿ ಮಾಡಿತ್ತು.
ನೋಟಿಸ್ ಸ್ವೀಕರಿಸಿದರೂ ಎದುರುದಾರರು ಈ ಆಯೋಗದ ಮುಂದೆ ಹಾಜರಾಗಲಿಲ್ಲ, ಈ ಹಿನ್ನೆಲೆಯಲ್ಲಿ ಸಾಕ್ಷಿ ಮತ್ತು ದಾಖಲೆಗಳನ್ನು ಪರಿಶೀಲಿಸಿದ ರಾಯಚೂರು ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ವಿ.ಸುರೇಂದ್ರಕುಮಾರ್ ಹಾಗೂ ಪ್ರಭುದೇವ ಪಾಟೀಲ್ ಅವರಿದ್ದ ಪೀಠವು ಅರ್ಜಿದಾರರಿಗೆ ಉಂಟಾದ ಮಾನಸಿಕ ವ್ಯಥೆ ಹಾಗೂ ಸೇವಾ ನ್ಯೂನತೆಗೆ ಪ್ರತಿಯಾಗಿ ರೂ.40,000 ಪಾವತಿಸುವಂತೆ ಆದೇಶ ಮಾಡಿದೆ.