ರಾಯಚೂರು | ಕೇಂದ್ರ ಸರಕಾರದ ವಿರುದ್ಧ ಕೂಲಿ ಕಾರ್ಮಿಕರ ಧರಣಿ
ರಾಯಚೂರು : ಉದ್ಯೋಗ ಖಾತ್ರಿ ಯೋಜನೆಯಡಿ ಹೊಸ ನೀತಿ ರೂಪಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಗ್ರಾಮೀಣ ಕೂಲಿಕಾರರ ಸಂಘಟನೆ( ಗ್ರಾಕೂಸ್)ಯಿಂದ ಗುರುವಾರ ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಧರಣಿ ನಡೆಸಿದರು.
ಪ್ರತಿಭಟನಾನಿರತ ಮಹಿಳೆಯರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.
ನರೇಗಾ ಕಾನೂನು ಅಡಿಯಲ್ಲಿ ಗ್ರಾಮೀಣ ಭಾಗದ ಕೂಲಿಕಾರರಿಗೆ 100 ದಿನಗಳ ಕೆಲಸದ ಗ್ಯಾರಂಟಿ ನೀಡಲಾಗಿತ್ತು. ನರೇಗಾ ಯೋಜನೆಯಡಿ ದೇಶದ ಎಲ್ಲಾ ಹಳ್ಳಿಗಳಲ್ಲಿ ಕೋಟ್ಯಾಂತರ ಜನರು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಮಹಾನಗರಗಳಿಗೆ ಕೆಲಸ ಹುಡುಕಿ ಗುಳೆ ಹೋಗುವ ಸಮಸ್ಯೆ ತಪ್ಪಿದೆ. ಆದರೆ ಕೇಂದ್ರ ಸರಕಾರದ ಹೊಸ ನೀತಿಯಿಂದಾಗಿ ಕೂಲಿ ಕಾರ್ಮಿಕರಿಗೆ ಸಮಸ್ಯೆಯಾಗಲಿದೆ ಎಂದು ದೂರಿದರು.
ಉದ್ಯೋಗ ಖಾತ್ರಿ ಯೋಜನೆಗೆ ಬಜೆಟ್ ನಲ್ಲಿ ಮೀಸಲಿಡುವ ಹಣ ಕೇಂದ್ರ ಸರಕಾರ ಪ್ರತಿ ಬಾರಿ ಕಡಿಮೆ ಮಾಡುತ್ತಾ ಬರುತ್ತಿದೆ. ಇದರಿಂದ ಕಾರ್ಮಿಕರಿಗೆ 100 ದಿನ ಕೆಲಸ ಸಿಗುತ್ತಿಲ್ಲ ಹಾಗೂ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ ಎಂದು ಆರೋಪಿಸಿದರು.
ನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ 200 ದಿನಗಳ ಕೆಲಸ ನೀಡಬೇಕು ಹಾಗೂ 600 ರೂ. ಕೂಲಿ ನಿಗದಿಪಡಿಸಬೇಕು. ಕೆಲಸದ ವೇಳೆ ಸಾವನಪ್ಪಿದವರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು. ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಬಜೆಟ್ನಲ್ಲಿ ಮೀಸಲಿಡಬೇಕಾದ ಹಣ ಕೇಂದ್ರ ಸರಕಅರ ಪ್ರತಿ ವರ್ಷ ಕಡಿಮೆ ಮಾಡುತ್ತಾ ಬರುತ್ತಿದೆ. ಇದರಿಂದ ಕಾರ್ಮಿಕರಿಗೆ ನೂರು ದಿನಗಳ ಉದ್ಯೋಗ ಖಾತ್ರಿ ಕೆಲಸದ ಹಕ್ಕು ಕೇಂದ್ರ ಸರಕಾರ ಕಿತ್ತುಕೊಳ್ಳುತ್ತಿದೆ. ಸಮಯಕ್ಕೆ ಕೆಲಸ ಮಾಡಿದ ಕಾರ್ಮಿಕರಿಗೆ ಪಾವತಿ ಆಗುತ್ತಿಲ್ಲ. ಕೇಂದ್ರ ಸರಕಾರ ತಮ್ಮ ಬಜೇಟ್ನಲ್ಲಿ 2 ಲಕ್ಷ ಕೋಟಿ ರೂ. ಹಣ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಹಾಗೂ ಅರ್ಜಿ ಸಲ್ಲಿಸಿ ವರ್ಷಗಳು ಕಳೆದರೂ ಪಡಿತರ ಚೀಟಿ ದೊರೆಯುತ್ತಿಲ್ಲ. ಶೀಘ್ರವೇ ಅರ್ಜಿ ಸಲ್ಲಿಸಿದ ಕುಟುಂಬಗಳಿಗೆ ಪಡಿತರ ಚೀಟಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡ ಬಸವರಾಜ, ಗೋವಿಂದ, ಮಾರೆಮ್ಮ, ಹುಚ್ಚಮ್ಮ, ಕರೆಮ್ಮ, ನರಸಮ್ಮ, ತಾಯಪ್ಪ, ಹುಚ್ಚಪ್ಪ ಕುರ್ಡಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗದ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.