ರಾಯಚೂರು: ಎಸ್.ಯು.ಸಿ.ಐ. (ಕಮ್ಯುನಿಸ್ಟ್) ಪಕ್ಷದ 78 ನೇ ಸಂಸ್ಥಾಪನಾ ದಿನಾಚರಣೆ

ರಾಯಚೂರು: ಕಾರ್ಮಿಕ ವರ್ಗದ ಮಹಾನ್ ನಾಯಕರಾದ ಶಿವದಾಸ್ ಘೋಷ್ ರವರು ಭಾರತದ ನೆಲದಲ್ಲಿ ನೈಜ ಕಮ್ಯುನಿಸ್ಟ್ ಪಕ್ಷ ಕಟ್ಟಲು ಪರಿಶ್ರಮದಾಯಕ ಹೋರಾಟ ನಡೆಸಿ ಆ ಗತಿಯಲ್ಲಿ ಎಸ್ .ಯು.ಸಿ.ಐ.(ಕಮ್ಯುನಿಸ್ಟ್) ಪಕ್ಷವನ್ನು ಸ್ಥಾಪಿಸಿ ಬೆಳೆಸಿದರು ಎಂದು ಪಕ್ಷದ ಹಿರಿಯ ಸದಸ್ಯವೀರೇಶ್ ಎನ್ ಎಸ್ ಅವರು ಅಭಿಪ್ರಾಯ ಪಟ್ಟರು.
ಇಂದು ಬೆಳಿಗ್ಗೆ ಜವಾಹರ್ ನಗರದ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡ 78ನೇ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮದಲ್ಲಿ ಶಿವದಾಸ್ ಘೋಷ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿ ಸಂಘವಾದ ಅನುಶೀಲನ ಸಮಿತಿಯ ಸಕ್ರಿಯ ಸದಸ್ಯರಾಗಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಅವರು ಜೈಲು ಸೇರಿದರು. 1945ರಲ್ಲಿ ಜೈಲಿನಲ್ಲಿ ಇರುವಾಗಲೇ ಹಲವು ಜನ ಕ್ರಾಂತಿಕಾರಿಗಳೊಂದಿಗೆ ಸೇರಿ ವೈಚಾರಿಕ ಸಂಘರ್ಷವನ್ನು ನಡೆಸಿದರು. ಈ ಪ್ರಕ್ರಿಯೆಯಲ್ಲಿ ದೇಶದ ವಿಮೋಚನೆಗೆ ಮಾರ್ಕ್ಸ್ ವಾದ ಮಾತ್ರ ಪರಿಹಾರ ಎಂದು ಅರಿತರು. ಹಾಗೆಯೇ ಈ ಹುಡುಕಾಟದಲ್ಲಿ ಅವರು ಮಾರ್ಕ್ಸ್ ವಾದ -ಲೆನಿನ್ ವಾದವು ಒಂದು ವೈಜ್ಞಾನಿಕ ತತ್ವಶಾಸ್ತ್ರ ಎಂದು ಅರಿತು ಅದರೆಡೆಗೆ ಆಕರ್ಷಿತರಾದರು. ಅಲ್ಲದೇ ಮಾರ್ಕ್ಸವಾದ ಮಾತ್ರವೇ ಈ ಕಾಲದ ಶ್ರೇಷ್ಠ ವಿಚಾರ ಮಾತ್ರವಲ್ಲ, ಅದೊಂದೇ ಉನ್ನತ ನೀತಿ ಮೌಲ್ಯಗಳನ್ನು ಕೊಡಬಲ್ಲ ತತ್ವಶಾಸ್ತ್ರ ಎಂದರಿತರು.
ಅಂತೆಯೇ ಈ ದೇಶದ ವಿಶಿಷ್ಟ ಪರಿಸ್ಥಿತಿಗೆ ಅದನ್ನು ಅಳವಡಿಸಿ ಬೆಳೆಸುತ್ತಾ ಸರ್ಕಾರಗಳ ಜನವಿರೋಧಿ ನೀತಿಗಳಾದ ಬೆಲೆ ಏರಿಕೆ, ಖಾಸಗೀಕರಣ, ನಿರುದ್ಯೋಗ ಮತ್ತು ಮಹಿಳೆಯರ ಮೇಲಿನ ಅಪರಾಧಗಳ ವಿರುದ್ಧ ಧ್ವನಿಯೆತ್ತುತಿರುವುದನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಚನ್ನಬಸವ ಜಾನೇಕಲ್, ಹಯ್ಯಾಳಪ್ಪ, ಸರೋಜಾ ಗೋನವಾರ, ವಿನೋದ್ ಕುಮಾರ್, ಬಸವರಾಜ್, ಪೀರ್ ಸಾಬ್, ನಂದಗೋಪಾಲ್, ಹೇಮಂತ್, ಅಮೋಘ ಮುಂತಾದವರು ಉಪಸ್ಥಿತರಿದ್ದರು.