ರಾಯಚೂರು | ಡಿ.9 ರಂದು ಸಾರಿಗೆ ನೌಕರರಿಂದ ಸುವರ್ಣಸೌಧ ಚಲೋ
ರಾಯಚೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಡಿ.9ರಂದು ಬೆಳಗಾವಿ ಚಲೋ ಪ್ರತಿಭಟನೆಯನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆ ಜಂಟಿ ಕ್ರಿಯಾ ವೇದಿಕೆ ಸಮಿತಿಯ ಮುಖಂಡರಾದ ಬಾಷುಮಿಯಾ ಹಾಗೂ ಶ್ರೀಶೈಲರೆಡ್ಡಿ ಹೇಳಿದರು.
ಕಳೆದ ಅಕ್ಟೋಬರ್ ತಿಂಗಳಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪ್ರತಿನಿಧಿಗಳು ಭಾಗವಹಿಸಿ 38 ತಿಂಗಳ ಬಾಕಿ ವೇತನ ಹಾಗೂ 2024ರ ಜ.1ರಿಂದ ವೇತನ ಪರಿಷ್ಕರಣೆ, ನಿವೃತ್ತ ನೌಕರರಿಗೆ 2020 ರಿಂದ ವೇತನ ಪರಿಷ್ಕರಣೆ ಬಾಕಿ ಹಣ ಶೀಘ್ರ ಬಿಡುಗಡೆ ಸೇರಿದಂತೆ ಅನೇಕ ಬೇಡಿಕೆಗಳ ಕುರಿತು ಚರ್ಚೆ ನಡೆಸಲಾಗಿತ್ತು.
ಸಭೆಯಲ್ಲಿ ಸಚಿವರಿಂದ ಉತ್ತಮ ಸ್ಪಂದನೆ ಸಿಕ್ಕಿದರೂ ಇದುವರೆಗೆ ಬೇಡಿಕೆ ಈಡೇರಿಲ್ಲ ಎಂದು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಸರಕಾರವು ಸಾರಿಗೆ ನಿಗಮಗಳ ನೌಕರರ ಈ ಎಲ್ಲ ಬೇಡಿಕೆ ಈಡೇರಿಸಬೇಕು. ಈ ಬಗ್ಗೆ ಸಮಿತಿಯಿಂದ ನೋಟಿಸ್ ನೀಡಲಾಗುವುದು. ಯಾವುದೇ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷ್ಯವಹಿಸಿದರೆ. ಡಿ.31ರಿಂದ ಮುಷ್ಕರ ನಡೆಸಲು ಕಾರ್ಮಿಕರ ಸಂಘಟನೆಗಳ ಕ್ರಿಯಾ ಸಮಿತಿಯು ತೀರ್ಮಾನಿಸಿದೆ ಎಂದು ಹೇಳಿದರು.
ಸಂಘಟನೆಯ ಪದಾಧಿಕಾರಿಗಳಾದ ಎಸ್.ಎಂ ಪೀರ್, ಚಂದ್ರಶೇಖರ ಕೆ, ಖಲೀಲ್ ಪಾಷಾ, ಆನಂದ, ರವಿಪಾಟೀಲ, ಜಾಫರ್ ಉಪಸ್ಥಿತರಿದ್ದರು.