ರಾಯಚೂರು | ವಿದ್ಯಾರ್ಥಿನಿಯ ಹತ್ಯೆಗೈದು ಪೊಲೀಸರಿಗೆ ಶರಣಾದ ಆರೋಪಿ

ಹತ್ಯೆ ಆರೋಪಿ ಮುಬೀನ್
ರಾಯಚೂರು : ವಿದ್ಯಾರ್ಥಿನಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ಸಿಂಧನೂರಿನ ಹೊರ ಭಾಗದಲ್ಲಿ ನಡೆದಿದೆ.
ಲಿಂಗಸುಗೂರು ಪಟ್ಟಣದ ಶಿಫಾ (24) ಹತ್ಯೆಯಾದ ಯುವತಿ ಎಂದು ತಿಳಿದುಬಂದಿದೆ. ಹತ್ಯೆ ಮಾಡಿದ ಬಳಿಕ ಆರೋಪಿ ಮುಬೀನ್ ಲಿಂಗಸುಗೂರು ಪೊಲೀಸರಿಗೆ ಶರಣಾಗಿದ್ದಾನೆ.
ಯುವತಿ ಬೆಳಗ್ಗೆ ಲಿಂಗಸೂಗುರಿನಿಂದ ಸಿಂಧನೂರು ಕಾಲೇಜಿಗೆ ಬಂದಿದ್ದಾಳೆ. ಆರೋಪಿ ಬೈಕ್ ನಲ್ಲಿ ಆಕೆಯನ್ನು ಹಿಂಬಾಲಿಸಿಕೊಂಡು ಕಾಲೇಜಿನವರೆಗೂ ಬಂದಿದ್ದು, ನಂತರ ಆಕೆಯನ್ನು ಮಾತನಾಡಲು ಕರೆದಿದ್ದಾನೆ. ಬಳಿಕ ಇಬ್ಬರ ನಡುವೆ ಮಾತುಕತೆ ನಡೆದಿದೆ. ನಂತರ ಆರೋಪಿ ಚಾಕುವಿನಿಂದ ಯುವತಿಯನ್ನು ಹತ್ಯೆ ಮಾಡಿ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಬಿಎಸ್ ತಳವಾರ, ಗ್ರಾಮೀಣ ಠಾಣೆಯ ಸಿಪಿಐ ವೀರಾರೆಡ್ಡಿ, ಬಳಗಾನೂರು ಪಿಎಸ್ಐ ಯರಿಯಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.