ರಾಯಚೂರು | ಚಿರತೆ ದಾಳಿಯಿಂದ ಎರಡು ಕರುಗಳ ಮೃತ್ಯು
ರಾಯಚೂರು : ನಗರದ ಹೊರವಲಯದ ಮಲಿಯಬಾದ್ ಗ್ರಾಮದ ಗುಡ್ಡದಲ್ಲಿ ಸೋಮವಾರ ರಾತ್ರಿ ಚಿರತೆ ದಾಳಿಗೆ ಎರಡು ಕರುಗಳು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಮಲಿಯಾಬಾದ್ ಗ್ರಾಮದ ನಿವಾಸಿ ಈರೇಶ ಎಂಬುವವರಿಗೆ ಸೇರಿದ ಎರಡು ಕರುಗಳು ಸಾವನ್ನಪ್ಪಿವೆ. ಮಂಗಳವಾರ ಕರುಗಳ ಮೇಲೆ ದಾಳಿಯ ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇರುವ 10 ಜನರ ತಂಡ ಮಲಿಯಾಬಾದ್ ಅರಣ್ಯ ಪ್ರದೇಶದ ಬಳಿ ಬಿಡಾರ ಹೂಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಾರ್ವಜನಿಕರು ಗುಡ್ಡದ ಬಳಿ ಅನವಶ್ಯಕವಾಗಿ ಓಡಾಡಬಾರದು. ಜಾನುವಾರುಗಳ ಮಾಲೀಕರು ರಾತ್ರಿ ವೇಳೆ ದನಕರುಗಳನ್ನು ಮನೆಯ ಜಮೀನಿನಲ್ಲಿ ಕಟ್ಟಬೇಕು ಎಂದು ಅರಣ್ಯ ಇಲಾಖೆಯ ವಲಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಅಧಿಕಾರಿ ರಾಜೇಶ, ಉಪ ವಲಯ ಅರಣ್ಯ ಅಧಿಕಾರಿ ಮೌನೇಶ, ಗಸ್ತು ಅರಣ್ಯ ಪಾಲಕ ಭೀಮೇಶಪ್ಪ, ಯಲ್ಲಪ್ಪ, ಈರೇಶ, ಬಸವರಾಜ, ನರೇಶ ಉಪಸ್ಥಿತರಿದ್ದರು.
Next Story