ರಾಯಚೂರು ವಿವಿ ಸಂಯೋಜನೆ ಪಡೆದ ಕಾಲೇಜುಗಳಿಂದ ಅಕ್ರಮವಾಗಿ ಠೇವಣಿ ಹಣ ಪಡೆದಿಲ್ಲ : ಪ್ರಭಾರ ಕುಲಪತಿ ಡಾ.ಸುಯಮೀಂದ್ರ ಸ್ಪಷ್ಟನೆ
ರಾಯಚೂರು | ವಿಶ್ವ ವಿದ್ಯಾಲಯದ ಸಂಯೋಜನೆ ಪಡೆದ ಕಾಲೇಜುಗಳಿಂದ ಅಕ್ರಮವಾಗಿ ಠೇವಣಿ ಹಣ ಪಡೆದಿಲ್ಲ. ಬದಲಾಗಿ ಸಂಯೋಜನೆ ಇರುವ ಪ್ರತ್ಯೇಕ ತಂತ್ರಾಂಶ ಅಭಿವೃದ್ದಿ ನಿಯಮಗಳ, ಷರತ್ತುಗಳ ಪರಿಶೀಲನೆಯ ನಂತರವೇ ನಿಗಧಿಪಡಿಸಿದ ಶುಲ್ಕ ಪಡೆಯಲಾಗಿದೆ ಎಂದು ರಾಯಚೂರು ವಿಶ್ವವಿದ್ಯಾಲಯ ಪ್ರಭಾರ ಕುಲಪತಿ ಡಾ.ಸುಯಮೀಂದ್ರ ಕುಲ್ಕರ್ಣಿ ಹೇಳಿದರು.
ಮಂಗಳವಾರ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯ ಕುರಿತು ಹೆಚ್ಚಿನ ಶುಲ್ಕ ಪಡೆಯಲಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ವಿಶ್ವವಿದ್ಯಾಲಯ ಅಧಿಕಾರಿಗಳೊಂದಿಗೆ ಚರ್ಚಿಸಿ ಗೊಂದಲ ನಿವಾರಿಸಬೇಕೆಂದು ಮನವಿ ಮಾಡಿದರು.
ಡಾ.ಶಂಕರ ವಣಿಕ್ಯಾಳ ಮಾತನಾಡಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ 194 ಕಾಲೇಜುಗಳು ಸಂಯೋಜನೆ ಪಡೆದಿವೆ. ಸರ್ಕಾರಿ, ಅನುದಾನಿತ, ಹಾಗೂ ಅನುದಾನ ರಹಿತ ಕಾಲೇಜುಗಳಿದ್ದು, ಪ್ರತಿವರ್ಷ ಸಂಯೋಜನೆ, ಹೊಸ ಕೊರ್ಸ್ ಗಳ ಪ್ರಾರಂಭ, ಶಿಷ್ಯವೇತನ, ಅಂಕಪಟ್ಟಿ ಸಹಿತ ವಿದ್ಯಾರ್ಥಿಗಳ ಡೌನ್ ಲೋಡ್ ಮಾಡಿಕೊಳ್ಳುವ ತಂತ್ರಾಂಶವನ್ನು ಅಭಿವೃದ್ದಿಪಡಿಸಲಾಗಿದೆ. ವಿಶ್ವವಿದ್ಯಾಲಯ ಕಾಯ್ದೆ ಮತ್ತು ಯುಜಿಸಿ ನಿಯಮಗಳ ಅನ್ವಯ ಸಂಯೋಜನೆ ವ್ಯವಸ್ಥೆಯನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಕಾಲೇಜುಗಳ ಆರ್ಥಿಕ ಪರಸ್ಥಿತಿ, ಮೂಲಭೂತ ಸೌಕರ್ಯ, ಬೋಧನ ಸಿಬ್ಬಂದಿಗಳ ಮಾಹಿತಿ ಆಧಾರಿಸಿ ಶುಲ್ಕ ನಿಗಧಿಗೊಳಿಸಲಾಗುತ್ತದೆ. ಅಲ್ಲದೇ ವಿಶ್ವವಿದ್ಯಾಲಯದಿಂದ ಸ್ಥಳೀಯ ವಿಚಾರಣಾ ಸಮಿತಿ ರಚಿಸಿ ಕಾಲೇಜುಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಷರತ್ತುಗಳ ಅನ್ವಯ ಅಂಕ ನೀಡಲಾಗುತ್ತದೆ. ಅಂಕಗಳ ಆಧಾರದ ಮೇಲೆ ಸಂಯೋಜನೆ ನೀಡುವುದೊ, ಬೇಡವೋ ಎಂಬುವ ಕುರಿತು ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಅಂತಿಮಗೊಳಿಸಲಾಗುತ್ತದೆ. ಬಿಎ, ಬಿಕಾಂ ಸೇರಿದಂತೆ ಈಗಾಗಲೇ ಇರುವ ಕೋರ್ಸ್ ಗಳಿಗೆ ಯಾವುದೇ ಶುಲ್ಕ ಸಂಗ್ರಹಿಸುವುದಿಲ್ಲ. ಹೊಸದಾಗಿ ಕೋರ್ಸ್ ಗಳಿಗೆ ಇಂತಿಷ್ಟು ಶುಲ್ಕವೆಂದು ಸರ್ಕಾರ ನಿಗಧಿಪಡಿಸಿರುವ ಶುಲ್ಕವನ್ನು ಕಾಲೇಜುಗಳು ಬರಿಸಬೇಕಾಗುತ್ತದೆ. ಪಾರದರ್ಶಕವಾಗಿ ಪ್ರಕ್ರಿಯೆ ನಡೆಯುತ್ತದೆ. ಅಕ್ರಮವಾಗಿ ಶುಲ್ಕ ಸಂಗ್ರಹಿಸುವ ಪ್ರಶ್ನೆಯೇ ಉದ್ಬವಿಸುವದಿಲ್ಲ ಎಂದರು.
ರಾಘವೇಂದ್ರ ಫತ್ತೇಪೂರು ಮಾತನಾಡಿ, ರಾಯಚೂರು ವಿಶ್ವವಿದ್ಯಾಲಯದೊಂದಿಗೆ ಸಂಯೋಜನೆ ಪಡೆದಿರುವ ಕಾಲೇಜುಗಳಿಗೆ ವಿಶ್ವವಿದ್ಯಾಲಯದ ಅಧಿಕಾರಿಗಳ ತಂಡ ಯಾದಗಿರಿ ಜಿಲ್ಲೆಗೆ ಭೇಟಿ ಮಾಡಿ ಬಂದಿದೆ. ಆದರೆ ಕಾಲೇಜುಗಳಲ್ಲಿ ಕನಿಷ್ಟ ಸೌಲಭ್ಯ ಇಲ್ಲದೇ ಇರುವುದು ಪತ್ತೆಯಾಗಿದೆ. ಕೆಲ ಪದವಿ ಕಾಲೇಜುಗಳ ಶೆಟ್ರ್ನಲ್ಲಿ ನಡೆಯುತ್ತಿದ್ದು, ಮತ್ತೆ ಕೆಲವು 600 ವಿದ್ಯಾರ್ಥಿಗಳ ಪ್ರವೇಶಾತಿಯಿದ್ದರೂ ವಿದ್ಯಾರ್ಥಿಗಳೇ ಇಲ್ಲದೇ ಇರುವುದು ಸಹ ಪತ್ತೆಯಾಗಿದೆ. ಕನಿಷ್ಟ ಸೌಲಭ್ಯ, ಕೋರ್ಸ್ ಗಳಿಗೆ ಅರ್ಹ ಉಪನ್ಯಾಸಕರು ಇಲ್ಲದೇ ಇರುವ ಮಾಹಿತಿ ಆಧಾರ ಮೇಲೆ ಕ್ರಮಕ್ಕೆ ಮುಂದಾಗಲಿದೆ ಹೊರತು ಕಿರುಕುಳ ನೀಡುವುದು, ಅಕ್ರಮ ಶುಲ್ಕ ಸಂಗ್ರಹಿಸುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.