ರಾಯಚೂರು | ಯುವಜನರು ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು : ಈರೇಶ ನಾಯಕ
ರಾಯಚೂರು : ವಿವೇಕಾನಂದರ ಜಯಂತಿಯನ್ನು ದೇಶಾದ್ಯಂತ ರಾಷ್ಟೀಯ ಯುವ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದ್ದು, ಅವರ ಆದರ್ಶಗಳನ್ನು ಯುವಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಈರೇಶ ನಾಯಕ ಅವರು ಹೇಳಿದರು.
ಜ.15ರಂದು ನಗರದ ಕೃಷಿ ವಿಶ್ವವಿದ್ಯಾಲಯದ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟೀಯ ಸೇವಾ ಯೋಜನಾ ಹಾಗೂ ಕೃಷಿ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ 162ನೇ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ರಾಷ್ಟೀಯ ಯುವ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವಜನತೆಯ ಹೃದಯಮಂದಿರದಲ್ಲಿ ಶೌರ್ಯ ಮತ್ತು ಧೈರ್ಯದ ಪರಿಕಲ್ಪನೆಯನ್ನು ತುಂಬಲು ಸ್ವಾಮಿ ವಿವೇಕಾನಂದ ಅವರು ದೇಶದಾದ್ಯಂತ ಸಂಚರಿಸಿದರು. ಅಧ್ಯಾತ್ಮಿಕ ಸಂತ ಶ್ರೀರಾಮಕೃಷ್ಣ ಪರಮಹಂಸರು ಮತ್ತು ಶಾರದಾ ಮಾತೆಯರ ಪದತಲದಲ್ಲಿ ದಕ್ಷಿಣೇಶ್ವರದಲ್ಲಿ ಬೆಳೆದರು. ಅಂತಹ ಸಾಧಕರಾದ ವಿವೇಕಾನಂದರ ಜೀವನದ ಮಹತ್ವವನ್ನು ಯುವಜನತೆಗೆ ತಿಳಿಸಿಕೊಡುವ ಕೆಲಸ ಮಾಡಬೇಕಿದೆ ಎಂದರು.
1893ರಲ್ಲಿ ಅಮೆರಿಕದ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ಭಾರತದ ಉತ್ಕೃಷ್ಟ ಹಿಂದೂ ಸಂಸ್ಕೃತಿಯನ್ನು ತಮ್ಮ ಭಾಷಣದ ಮೂಲಕ ವಿಶ್ವಕ್ಕೆ ಪರಿಚಯಿಸಿದವರು ಸ್ವಾಮಿ ವಿವೇಕಾನಂದರು ಎಂದು ಬಣ್ಣಿಸಿದರು. ಈ ವೇಳೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಕೃಷಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧ್ಯಕ್ಷರಾದ ಡಾ.ರಾಜಣ್ಣ, ಕೃಷಿ ವಿಶ್ವ ವಿದ್ಯಾಲಯದ ಎನ್.ಎಸ್.ಎಸ್ ಸಂಯೋಜನಾಧಿಕಾರಿ ಆರ್.ವಿ.ಬೆಳದೊಡ್ಡಿ, ಭಾರತ ಸೇವಾ ದಳದ ವಿಭಾಗೀಯ ಸಂಘಟಣಾಧಿಕಾರಿ ವಿದ್ಯಾ ಸಾಗರ ಚಿಣ್ಣಮಗೇರಿ, ಸಂಪನ್ಮೂಲ ವ್ಯಕ್ತಿಗಳಾದ ಗಿರಿಧರ್ ಪೂಜಾರಿ, ಕೃಷಿ ವಿಶ್ವ ವಿದ್ಯಾಲಯದ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಸುಮಾ ಟಿ.ಸಿ, ಸೇರಿದಂತೆ ಇತರರು ಇದ್ದರು.