ಗಣೇಶೋತ್ಸವಕ್ಕೆ ಬಿಜೆಪಿ ಶಾಸಕರಿಗೆ ನಾವು ಸ್ವಾಗತ ಕೋರಿ ಬ್ಯಾನರ್ ಹಾಕಿಲ್ಲ : ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಸ್ಪಷ್ಟನೆ
ರಾಯಚೂರು : ಮಾನ್ವಿಯಲ್ಲಿ ಅನುಮತಿ ಇಲ್ಲದೆ ನಮ್ಮ ಭಾವಚಿತ್ರಗಳನ್ನು ಬಳಸಿ ಬ್ಯಾನರ್ ಅಳವಡಿಸಿರುವುದು ಗಮನಕ್ಕೆ ಬಂದಿದ್ದು, ಬಿಜೆಪಿ ಶಾಸಕರನ್ನು ಗಣೇಶೋತ್ಸವಕ್ಕೆ ಆಹ್ವಾನಿಸುತ್ತಿರುವುದಾಗಿ ಬ್ಯಾನರ್ನಲ್ಲಿ ತಪ್ಪು ಮಾಹಿತಿ ಹರಿಬಿಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಗುರುವಾರ ಸ್ಪಷ್ಟನೆ ನೀಡಿದ್ದಾರೆ.
ರಾಯಚೂರಿನ ಮಾನ್ವಿಯಲ್ಲಿ ಶ್ರೀ ಛತ್ರಪತಿ ಶಿವಾಜಿ ಯುವಕರ ಸೇನೆ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರನ್ನು ಸ್ವಾಗತಿಸುವ ಕಾಂಗ್ರೆಸ್ ಸಚಿವರು, ಶಾಸಕರುಗಳ ಫೋಟೋ ಇರುವ ಬ್ಯಾನರ್ ವಿವಾದಕ್ಕೆ ಕಾರಣವಾಗಿತ್ತು.
ಬಿಜೆಪಿ ಶಾಸಕ ಹರೀಶ್ ಪೂಂಜಾರನ್ನು ಮುಖ್ಯ ಅತಿಥಿಯಾಗಿ ಆಮಂತ್ರಿಸಿ ಭರ್ಜರಿಯಾಗಿ ಸ್ವಾಗತಿಸಿ ಹಾಕಿದ್ದ ಬ್ಯಾನರ್ ನಲ್ಲಿ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾದ ಎನ್.ಎಸ್.ಬೋಸರಾಜು, ರಾಯಚೂರು ಜಿಲ್ಲೆಯ ಮಾನವಿಯ ಕಾಂಗ್ರೆಸ್ ಶಾಸಕ ಹಂಪಯ್ಯ ಸಾಹುಕಾರ, ಕಾಂಗ್ರೆಸ್ ಎಂ ಎಲ್ ಸಿ ಬಸನಗೌಡ ಬಾದರ್ಲಿ, ಸಚಿವ ಬೋಸರಾಜು ಅವರ ಪುತ್ರ ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಹಾಗು ಇನ್ನೋರ್ವ ಕಾಂಗ್ರೆಸ್ ಮುಖಂಡ ಆಲ್ದಾಳ್ ವೀರಭದ್ರಿಯ ಮಗ ಬಸವನ ಗೌಡ ಆಲ್ದಾಳ್ ಅವರ ಫೋಟೋಗಳಿದ್ದವು.
ದ್ವೇಷ ಭಾಷಣಕಾರ, ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೇ ಬೆದರಿಕೆ ಹಾಕಿರುವ ಬಿಜೆಪಿ ಶಾಸಕ ಪೂಂಜಾರನ್ನು ಹರೀಶ್ ಗಣೇಶೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಕರೆದು ಸ್ವಾಗತಿಸುತ್ತಿರುವುದು ಎಷ್ಟು ಸರಿ ಎಂಬ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲೇ ಅಸಮಾಧಾನ ಉಂಟಾಗಿತ್ತು. ಈ ಬಗ್ಗೆ ರಾಜ್ಯದ ವಿವಿಧೆಡೆಗಳಿಂದಲೂ ಕಾಂಗ್ರೆಸ್ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.
ಘಟನೆ ಸಂಬಂಧ ಸ್ಪಷ್ಟನೆ ನೀಡಿರುವ ಸಚಿವ ಬೋಸರಾಜು ಅವರ ಪುತ್ರ, ಕಾಂಗ್ರೆಸ್ ಮುಖಂಡ ರವಿ ಬೋಸರಾಜು, "ಮಾನ್ವಿಯಲ್ಲಿ ನಮ್ಮ ಅನುಮತಿ ಇಲ್ಲದೆ ನಮ್ಮ ಭಾವಚಿತ್ರಗಳನ್ನು ಬಳಸಿ ಬ್ಯಾನರ್ ಅಳವಡಿಸಿರುವುದು ಗಮನಕ್ಕೆ ಬಂದಿದ್ದು, ಬಿಜೆಪಿ ಶಾಸಕರನ್ನು ಗಣೇಶೋತ್ಸವಕ್ಕೆ ಆಹ್ವಾನಿಸುತ್ತಿರುವುದಾಗಿ ಬ್ಯಾನರ್ನಲ್ಲಿ ತಪ್ಪು ಮಾಹಿತಿ ಹರಿಬಿಡಲಾಗಿದೆ. ಈ ಬ್ಯಾನರ್ ಅಳವಡಿಸಿದ ವ್ಯಕ್ತಿಗೆ ದ್ವೇಷ ಬಿತ್ತುವುದು, ವಿಭಜಕ ಕೃತ್ಯಗಳಲ್ಲಿ ಭಾಗಿಯಾಗುವುದೇ ಕಾಯಕವಾಗಿದೆ. ಈ ಕೃತ್ಯವನ್ನು ಕಾಂಗ್ರೆಸ್ ಸದಸ್ಯರಾದ ನಾವು ತೀವ್ರವಾಗಿ ಖಂಡಿಸುತ್ತೇವೆ. ಇದು ಸಾಮರಸ್ಯ, ಏಕತೆ ಮತ್ತು ಸೌಹಾರ್ದತೆಯ ಮೌಲ್ಯಗಳಿಗೆ ವಿರುದ್ಧವಾಗಿದೆ" ಎಂದು ತಿಳಿಸಿದ್ದಾರೆ.
"ತಕ್ಷಣ ಬ್ಯಾನರ್ ಅನ್ನು ತೆಗೆದುಹಾಕಲು ಕ್ರಮ ಕೈಗೊಳ್ಳಲಾಗಿದೆ ಹಾಗೂ ಬ್ಯಾನರ್ನಲ್ಲಿ ಚಿತ್ರಿಸಲಾದ ಯಾವುದೇ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಇಂತಹ ಸುಳ್ಳುಗಳಿಂದ ಕೂಡಿದ, ತಪ್ಪುದಾರಿಗೆ ಎಳೆಯುವ ಕೃತ್ಯಗಳಿಂದ ಜನರು ಅಂತರ ಕಾಯ್ದುಕೊಳ್ಳಬೇಕಿದೆ" ಎಂದು ಅವರು ಮನವಿ ಮಾಡಿದ್ದಾರೆ.
"ಎಲ್ಲಾ ಸಮುದಾಯಗಳ ಕಲ್ಯಾಣ ಮತ್ತು ಪ್ರಗತಿಗೆ ನಾವು ಬದ್ಧರಾಗಿದ್ದೇವೆ. ಇಂತಹ ಸಮಾಜ ವಿಭಜಕ ಹಾಗೂ ಸುಳ್ಳು ಸುದ್ದಿ ಹರಡುವ ಶಕ್ತಿಗಳ ವಿರುದ್ಧದ ಹೋರಾಟವನ್ನು ಮುಂದುವರಿಸುತ್ತೇವೆ" ಎಂದು ಅವರು ತಿಳಿಸಿದ್ದಾರೆ.