ರಾಜ್ಯ ಬಜೆಟ್ | ಜಿಲ್ಲೆಗೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ವರ್ತುಲ ರಸ್ತೆ, ವಿಮಾನ ನಿಲ್ದಾಣಕ್ಕೆ 53 ಕೋಟಿ ರೂ. ಘೋಷಣೆ

ರಾಯಚೂರು : ಸಿದ್ದರಾಮಯ್ಯನವರು ದಾಖಲೆಯ 16ನೇ ಬಜೆಟ್ ಮಂಡಿಸಿದ್ದು, ಜಿಲ್ಲೆಯ ಮಸ್ಕಿ, ಸಿರವಾರ ತಾಲೂಕಿನ ಪಿಎಚ್ ಸಿ ಸಮುದಾಯಗಳನ್ನು ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೆರಿಸಲಾಗಿದೆ.
ಶೈಕ್ಷಣಿಕ, ಸಾಮಾಜಿಕವಾಗಿ, ಆರೋಗ್ಯ ಕ್ಷೇತ್ರದಲ್ಲಿ ಹಿಂದುಳಿದ ಜಿಲ್ಲೆ ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಕ್ಯಾನ್ಸರ್ ವಿಭಾಗ ಸ್ಥಾಪನೆಗೆ ಘೋಷಣೆ ಮಾಡಿದೆ. ಅನೇಕ ವರ್ಷಗಳ ಬೇಡಿಕೆಯಾದ ರಾಯಚೂರು ವಿಮಾನ ನಿಲ್ದಾಣದ ಅಭಿವೃದ್ಧಿಗೆ ರೂ. 53 ಕೋಟಿ ಬಿಡುಗಡೆ ಮಾಡಿದ್ದಾರೆ.
ಜಿಲ್ಲೆಯ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಖಾತೆ ಸಚಿವರಾದ ಹಿನ್ನೆಲೆಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರ ಹಾಗೂ ಸಿಂಧನೂರು ತಾಲೂಕಿನಲ್ಲಿ ಉದ್ಯೋಗ ತರಬೇತಿ ಕೇಂದ್ರದ ಜಿಟಿಟಿಸಿ ಕಾಲೇಜು, ರಾಯಚೂರು ನಗರಕ್ಕೆ ವರ್ತುಲ ರಸ್ತೆ ನಿರ್ಮಾಣಕ್ಕೆ ಎಡದಂಡೆಕಾಲುವೆ ಕೊನೆ ಭಾಗಕ್ಕೆ ನೀರು ಒದಗಿಸಲು ನವಲಿ ಜಲಾಶಯ ನಿರ್ಮಾಣ, ರಾಯಚೂರು ಸಿಂಧನೂರು ರಸ್ತೆ ಅಭಿವೃದ್ಧಿಗೆ 1,696 ಕೋಟಿ ರೂ. ಕಾಮಗಾರಿ ವರ್ಷದೊಳಗೆ ಪೂರ್ಣಗೊಳಿಸಲು ಸೂಚನೆ ನೀಡಿದೆ.
ನೀರಾವರಿಗೆ ಆದ್ಯತೆ :
ಕಾಲುವೆ ಕೊನೆಭಾಗಕ್ಕೆ ನೀರೋದಗಿಸಲು ನವಲಿ ಬಳಿ ಜಲಾಶಯ, ಲಿಂಗಸೂಗೂರು ತಾಲೂಕು ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವುದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 5 ಸಾವಿರ ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದು, ಈ ಭಾಗದ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಕ್ಕೆ ಅಕ್ಷರ ಅವಿಷ್ಕಾರ ಯೋಜನೆಯಡಿ 200 ಕೋಟಿ ರೂ. ವೆಚ್ಚದಲ್ಲಿ ಕೆಪಿಎಸ್ ಶಾಲೆಗಳನ್ನಾಗಿ ನಿರ್ಮಾಣ ಮಾಡಲು 50 ಶಾಲೆಗಳ ಉನ್ನತೀಕರಣ ಮಾಡಲು ಘೋಷಣೆ ಮಾಡಲಾಗಿದೆ.
ಮಹರ್ಷಿ ವಾಲ್ಮೀಕಿ ವಿವಿಗಿಲ್ಲಅನುದಾನ :
ಜಿಲ್ಲೆಗೆ ಕೆಲ ಯೋಜನೆಗಳು ಘೋಷಣೆ ಮಾಡಿದರೂ, ವಾಲ್ಮಿಕಿ ವಿವಿಗೆ ಯಾವುದೇ ಅನುದಾನ ಘೋಷಣೆ ಮಾಡಿಲ್ಲ. ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಘೋಷಣೆ ಮಾಡಿದ್ದು, ಇದಕ್ಕೆ ಬಜೆಟ್ ನಲ್ಲಿ ಅನುದಾನ ಘೋಷಣೆ ಮಾಡದೆ ನಿರಾಸೆ ಮಾಡಿದ್ದಾರೆ ಎಂದು ಸಾರ್ವಜನಿಕರು ಟೀಕಿಸಿದ್ದಾರೆ.
ಶ್ಲಾಘನೆ : ಕರ್ನಾಟಕ ಸರಕಾರ 2025-26ನೇ ಸಾಲಿನ ಬಜೆಟ್ ಜನಪರ, ಮೂಲಭೂತ ಸೌಕರ್ಯಕ್ಕೆ ಒತ್ತು ನೀಡದೆ ಹಲವು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ, ಅಲ್ಲದೇ ರಾಯಚೂರು ಜಿಲ್ಲೆಗೆ ಕಿಡ್ವಾಯಿ ಕ್ಯಾನ್ಸರ್ ಚಿಕಿತ್ಸೆ ವಿಭಾಗ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಅರೋಗ್ಯ ಕೇಂದ್ರ, ಲಿಂಗಸ್ಗೂರು ತಾಲ್ಲೂಕು ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ, ಜಿಟಿಟಿಸಿ ಕಾಲೇಜು, ರಾಯಚೂರು ನಗರಕ್ಕೆ ವರ್ತುಲ ರಸ್ತೆ, ಎಡದಂಡೆಕಾಲುವೆ ಕೊನೆ ಭಾಗಕ್ಕೆ ನೀರು ಒದಗಿಸಲು ನವಲಿ ಜಲಾಶಯ ನಿರ್ಮಾಣ, ರಾಯಚೂರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹೆಚ್ಷಿನ ಅನುದಾನ ಒದಗಿಸಿರುವದು ಸ್ವಾಗತಾರ್ಹ ವಾಗಿದೆ ಎಂದು ಕೆಪಿಸಿಸಿ ಮಾದ್ಯಮ ವಿಭಾಗ ವಕ್ತಾರ ಡಾ.ರಝಾಕ್ ಉಸ್ತಾದ್ ಶ್ಲಾಘಿಸಿದ್ದಾರೆ.