ವಿಜಯಪುರದಲ್ಲಿ ಕಾರ್ಮಿಕರ ಮೇಲೆ ಅಮಾನವೀಯ ಹಲ್ಲೆಗೈದವರ ವಿರುದ್ಧ ಕಠಿಣ ಕ್ರಮ: ಸಚಿವ ಸಂತೋಷ್ ಲಾಡ್

ರಾಯಚೂರು: ವಿಜಯಪುರದದಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಮೂವರು ಕಾರ್ಮಿಕರನ್ನು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಅಮಾನವೀಯ. ಮನುಷ್ಯತ್ವ ಇದ್ದವರು ಯಾರೂ ಈ ರೀತಿ ಮಾಡಲು ಸಾಧ್ಯವಿಲ್ಲ. ತಪ್ಪಿತಸ್ಥರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಕಾರ್ಮಿಕ ಸಚಿವ ಸಂತೊಷ್ ಲಾಡ್ ಹೇಳಿದ್ದಾರೆ.
ಅವರಿಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ವಿಜಯಪುರದ ಇಟ್ಟಿಗೆ ಭಟ್ಟಿ ಕಾರ್ಮಿಕರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡನೀಯ. ಅದು ನಾಗರಿಕ ಸಮಾಜ ಬೆಚ್ಚಿ ಬೀಳುವಂತಹ ಕೃತ್ಯವಾಗಿದೆ. ಮಾಲಕರಿಗೆ ಕಾರ್ಮಿಕರ ಬಗ್ಗೆ ಕಾಳಜಿ ಇರಬೇಕು. ಮನುಷ್ಯತ್ವ ಇಲ್ಲದವರೇ ಇಂತಹ ಕೃತ್ಯ ಎಸಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಕಾಯ್ದೆ, ಕಾನೂನುಗಳಿದ್ದರೆ ಅಪರಾಧ ಚಟುವಟಿಕೆಗಳು ಕಡಿಮೆಯಾಗುತ್ತಿಲ್ಲ ಎಂದರೆ ಜನರಿಗೆ ಕಾನೂನುಗಳ ಬಗ್ಗೆ ಅರಿವಿಲ್ಲ ಎಂದರ್ಥವಲ್ಲ, ಕಾನೂನುಗಳು ಬಿಗಿಗೊಳಿಸಿದರೆ ಅಪರಾಧ ಚಟುವಟಿಕೆಗಳು ನಿಯಂತ್ರಣಕ್ಕೆ ಬರುತ್ತವೆ ಎನ್ನುವುದು ತಪ್ಪು, ಜನರಿಗೆ ಮಾನವೀಯತೆ ಇರಬೇಕು. ಜನರ ಮನಸ್ಥಿತಿ ಬದಲಾದರೆ ಇಂತಹ ಕೃತ್ಯ ನಿಯಂತ್ರಣ ಸಾದ್ಯ ಎಂದು ಅಭಿಪ್ರಾಯ ಪಟ್ಟರು.