ಲಿಂಗಸುಗೂರು : ನರೇಗಾದಡಿ ಅವ್ಯವಹಾರ ಪ್ರಕರಣ; ಇಬ್ಬರು ಅಧಿಕಾರಿಗಳು ಅಮಾನತು

ರಾಯಚೂರು: ಲಿಂಗಸುಗೂರು ತಾಲೂಕಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ಅವ್ಯವಹಾರ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷಿ ಇಲಾಖೆ ಅಧೀನ ಕಾರ್ಯದರ್ಶಿ ಇಂದ್ರ ಎಂ ಅವರು ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಲಿಂಗಸುಗೂರು ತಾಲೂಕಿನ ಆನೆಹೊಸುರ ಗ್ರಾಮ ಪಂಚಾಯತಿ, ತಾಲ್ಲೂಕಿನ ಇನ್ನಿತರ ಗ್ರಾಮ ಪಂಚಾಯತ್ ಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬಾರಿ ಅವ್ಯವಹಾರ ನಡೆದಿದ್ದು ದೂರು ಆಧರಿಸಿ ಸಮಗ್ರ ತನಿಖೆ ನಡೆಸಿ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆನೆಹೋಸುರು ಗ್ರಾ.ಪಂ, ಸೇರಿ ವಿವಿಧ ಗ್ರಾ.ಪಂಗಳಲ್ಲಿ 2024-25 ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಅನುಷ್ಠಾನಗೊಂಡ 2 ಕೋಟಿ 75 ಲಕ್ಷ 73 ಸಾವಿರ 707 ರೂಗಳ ಅವ್ಯವಹಾರದ ದೂರು ಆಧರಿಸಿ ಪ್ರಾಥಮಿಕ ತನಿಖೆ ಕಡತ ಪರಿಶೀಲನೆಗೆ ತನಿಖಾ ತಂಡ ರಚಿಸಲಾಗಿತ್ತು.
ಆನೆಹೋಸುರ ಗ್ರಾ.ಪಂ, ಉ.ಖಾ ಯೋಜನೆಯಡಿ ಎಂಐಎಸ್ ವರದಿಯನ್ವಯ 173 ಕಾಮಗಾರಿಗಳು ಚಾಲ್ತಿಯಲ್ಲಿದ್ದು 150 ಕಾಮಗಾರಿ ಪರಿಶೀಲನೆಗೆ ಒದಗಿಸಲಾಗಿದೆ. ಜಿ.ಪಂ.ನಿಂದ ಅನುಮೋದನೆ ಪಡೆಯದೇ 170 ಕಾಮಗಾರಿಗಳ ನೊಂದಣಿ ಮಾಡಿ 67.11 ಲಕ್ಷದ ಪಾವತಿಗೆ ಕ್ರಮವಹಿಸಿದ್ದು ಕಾಮಗಾರಿಗಳ ಭೌತಿಕ ಸ್ಥಳ ಪರಿಶೀಲನೆಯಲ್ಲಿ ಅನುಷ್ಠಾನವಾಗದಿರುವುದು ಸರಿಯಾಗಿ ದಾಖಲೆ ಕ್ರಮಬದ್ದವಾಗಿರುವುದಿಲ್ಲ. ಪರಿಶೀಲನೆ ಹಾಜರುಪಡಿಸದಿರುವ ಕುರಿತು ತನಿಖಾ ತಂಡ ವರದಿ ನೀಡಲಾಗಿತ್ತು.
ವಿವಿಧ ಕಾಮಗಾರಿಗಳ 417 ಕಂದಕ ಬದು ಮತ್ತು ಕೋಡಿ ನಿರ್ಮಾಣ ಕಾಮಗಾರಿಗಳಲ್ಲಿ ಗ್ರಾ.ಪಂ.ನಲ್ಲಿ ಅನುಷ್ಠಾನವಾಗದೆ 1 ಕೋಟಿ 58 ಲಕ್ಷ 54 ಸಾವಿರದ 485 ರೂಗಳ ಮೊತ್ತದ ಮಾನವ ದಿನಗಳನ್ನು ಪಾವತಿಸಿ ಸರಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿ ಹಣ ದುರುಪಯೋಗದ ಆರೋಪ ಸ್ಪಷ್ಟವಾಗಿ ಕಂಡು ಬಂದಿರುವುದರಿಂದ ಇಬ್ಬರ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮ 1957 ರ ನಿಯಮ 11 ಅನ್ವಯ ಶಿಸ್ತು ಕ್ರಮ ಜರುಗಿಸಲು ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡದಂತೆ ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತು ಆದೇಶ ಹೊರಡಿಸಿದ್ದಾರೆ.