ರಾಯಚೂರು | ಅಕಾಲಿಕ ಮಳೆಗೆ ಭತ್ತದ ಬೆಳೆ ಹಾನಿ; ಎಕರೆಗೆ 25 ಸಾವಿರ ನೀಡಲು ರೈತ ಸಂಘಟನೆ ಒತ್ತಾಯ

ರಾಯಚೂರು: ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಗೆ ದೇವದುರ್ಗ, ಸಿಂಧನೂರು ಸೇರಿ ಜಿಲ್ಲೆಯ ಹಲವೆಡೆ ಅಪಾರ ನಷ್ಟವಾಗಿದ್ದು, ಅಧಿಕಾರಿಗಳು ಸರಿಯಾದ ಸಮೀಕ್ಷೆ ಮಾಡದ ಕಾರಣ ಅನೇಕ ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಆರೋಪಿಸಿದರು.
ಅವರಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಅಕಾಲಿಕ ಸುರಿದ ಮಳೆಗೆ ಜಿಲ್ಲೆಗೆ ರೈತರು ಬೆಳೆದ ಭತ್ತ, ಸಜ್ಜೆ ಹಾನಿಯಾಗಿದೆ. ಬೆಳೆನಷ್ಟದ ಸಮೀಕ್ಷೆ ನಡೆಸಿದ ಅಧಿಕಾರಿಗಳ ತಂಡ ಸರಿಯಾಗಿ ಮಾಹಿತಿ ಕಲೆ ಹಾಕದೇ ಎ ಸಿ ಕೊಠಡಿಯಲ್ಲಿ ಕೂತು ವರದಿ ತಯಾರಿಸಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಎನ್ ಡಿಆರ್ ಎಫ್ ನಿಂದ ಪರಿಹಾರ ನೀಡಲು ಶೇಕಡಾ 35 ರಷ್ಟು ಬೆಳೆ ಹಾನಿಯಾಗಬೇಕು.ಆದರೆ ಶೇ 20ರಿಂದ ಶೇ 100 ರಷ್ಟು ಅನೇಕ ರೈತರ ಬೆಳೆ ಹಾನಿಯಾಗಿದ್ದು ಕಡಿಮೆ ಸರಿಯಾದ ಪರಿಹಾರ ಸಿಗುತ್ತಿಲ್ಲ. ವೈಜ್ಞಾನಿಕವಾಗಿ ಪರಿಹಾರ ನೀಡಲು ಮಾನದಂಡಗಳನ್ನು ಬದಲಾಯಿಸಬೇಕಿದೆ ಎಂದು ಒತ್ತಾಯಿಸಿದರು.
ಬೆಳೆ ನಷ್ಟವಾದ ರೈತರ ಪರ ಧ್ವನಿ ಎತ್ತಬೇಕಾದ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹಾಗೂ ವಿರೋಧ ಪಕ್ಷದ ನಾಯಕರು ಸ್ವಾರ್ಥ,ರಾಜಕೀಯ ಹೋರಾಟದಲ್ಲಿ ಮುಳುಗಿದ್ದಾರೆ. ಜನಾಕ್ರೋಶಯಾತ್ರೆ ಮಾಡುವ ಬಿಜೆಪಿ ರೈತರ ಸಮಸ್ಯೆ ಬಗ್ಗೆ ಮಾತನಾಡಲಿ ಎಂದು ಆಗ್ರಹಿಸಿದರು.
ನಮ್ಮ ಸಂಘದ ಹೋರಾಟದ ಫಲವಾಗಿ ಜೋಳ ಖರೀದಿ ಕೇಂದ್ರ ತೆರೆಯಲಾಗಿದ್ದು, ಸಕಾಲಕ್ಕೆ ಖರೀದಿ ಮಾಡದೇ ಖರೀದಿ ಕೇಂದ್ರಗಳಲ್ಲಿ ರೈತರ ಜೋಳವನ್ನು ಮೂರ್ನಾಲ್ಕು ದಿನ ಕಾಯುವಂತೆ ಮಾಡುತ್ತಿದ್ದಾರೆ. ವಿಳಂಬ ನೀತಿಯ ಬಗ್ಗೆ ಪ್ರಶ್ನೆ ಮಾಡಿದರೆ ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಬಲಾಡ್ಯರು ಹೇಳಿದಂತೆ ಅಧಿಕಾರಿಗಳು ಕೆಲಸ ಮಾಡ್ತಿದಾರೆ. ನೋಂದಣಿ ಪ್ರಕಾರ ಖರೀದಿ ಮಾಡುತ್ತಿಲ್ಲ. ಜಿಲ್ಲಾಧಿಕಾರಿಗೆ ರೈತರ ಸಮಸ್ಯೆ ತಿಳಿಸಿದ್ದು ಕೂಡಲೇ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.
ಈ ಮುಖಂಡರಾದ ಅಮರೇಶ ಅಲ್ದಾಳ,ಬೂದಯ್ಯಸ್ವಾಮಿ, ಲಿಂಗಾರೆಡ್ಡಿ ಗೌಡ, ನರಸಿಂಹಲು ಉಪಸ್ಥಿತರಿದ್ದರು.