ರಾಯಚೂರು ವಿವಿಯ ಖಾಸಗಿ ಕ್ಯಾಂಟೀನ್ ನ ಆಹಾರದಲ್ಲಿ ಹುಳ ಪತ್ತೆ: ದೂರು

ರಾಯಚೂರು: ಇಲ್ಲಿನ ಮಹರ್ಷಿ ವಾಲ್ಮೀಕಿ ( ರಾಯಚೂರು ವಿಶ್ವವಿದ್ಯಾಲಯ) ವಿವಿ ಆವರಣದ ಖಾಸಗಿ ಕ್ಯಾಂಟೀನ್ ನಲ್ಲಿ ಗ್ರಾಹಕರಿಗೆ ಸ್ವಚ್ಛ, ಸರಿಯಾದ ಊಟ, ಉಪಹಾರ ನೀಡುತ್ತಿಲ್ಲ, ಪ್ಲೇಟ್ ಗಳಲ್ಲಿ ಹಲವು ಬಾರಿ ಹುಳ ಬಿದ್ದಿದೆ ಎಂದು ಆರೋಪಿಸಿ ವಿವಿಯ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ವಿವಿಯ ಕುಲಪತಿಗೆ ದೂರು ನೀಡಿರುವ ಬಗ್ಗೆ ವರದಿಯಾಗಿದೆ.
ಕ್ಯಾಂಟೀನ್ ನಲ್ಲಿ ಸ್ವಚ್ಛತೆ ಇಲ್ಲ, ಗುಣಮಟ್ಟದ ಆಹಾರ ನೀಡುತ್ತಿಲ್ಲ, ಹೋಟೆಲ್ ಮಾಲೀಕರು ಗ್ರಾಹಕರ ಜೊತೆ ಸರಿಯಾಗಿ ವರ್ತಿಸದೇ ಉಡಾಫೆಯಾಗಿ ಮಾತನಾಡುತ್ತಾರೆ. ಹೋಟೆಲ್ ನಲ್ಲಿ ಕೆಲಸ ಮಾಡುವವರಿಲ್ಲದ ಕಾರಣ ಹೋಟೆಲ್ ಗೆ ಹೋದಾಗ ಊಟಕ್ಕೆ ತಾಸುಗಟ್ಟಲೇ ಕಾಯಿಸಲಾಗುತ್ತಿದೆ. ಬೇಗ ನೀಡುವಂತೆ ಹೇಳಿದಾಗ ಬೇಕಿದ್ದರೆ ತಿನ್ನು ಇಲ್ಲದಿದ್ದರೆ ಬೇರೆಡೆ ಹೋಗು ಎಂದು ಏರು ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿವಿಯ ಆವರಣದಲ್ಲಿ ಒಂದೇ ಕ್ಯಾಂಟೀನ್ ಇದ್ದು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಉಪನ್ಯಾಸಕರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಹೊರವಲಯದಲ್ಲಿ ಇರುವ ಕಾರಣ ಸುತ್ತಮುತ್ತಲೂ ಯಾವುದೇ ಹೋಟೆಲ್ ಗಳಿಲ್ಲ. ಹೀಗಾಗಿ ವಿವಿಯರು ಅಲ್ಲಿಗೇ ಅನಿವಾರ್ಯವಾಗಿ ಹೋಗಬೇಕಿದೆ. ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಹೋಟೆಲ್ ಮಾಲೀಕ, ತಮಗೆ ಇಷ್ಟಬಂದಂತೆ ನಡೆದುಕೊಳ್ಳುತ್ತಿದ್ದಾನೆ ಎಂದು ಉಪನ್ಯಾಸಕರು, ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.
ಈ ಬಗ್ಗೆ ಹೋಟೆಲ್ ಮಾಲೀಕ ಶಿವಕುಮಾರ್ ಪ್ರತಿಕ್ರಿಯಿಸಿ, ಹೋಟೆಲ್ ನಲ್ಲಿ ಸ್ವಚ್ಛತೆ ಕಾಪಾಡುತ್ತಿದ್ದೇನೆ. ಒಂದು ಬಾರಿ ಒಬ್ಬ ಗ್ರಾಹಕನಿಗೆ ಹುಳ ಬಿದ್ದಿತ್ತು. ಅದು ಹೊರಗಿನಿಂದ ಬಿದ್ದಿರಬಹುದು. ಅನೇಕರು ದಿನಾಲು ಬರುತ್ತಾರೆ. ಒಳ್ಳೆಯ ಅಭಿಪ್ರಾಯವಿದೆ. ದೂರು ಕೊಟ್ಟಿರುವವರ ಬಗ್ಗೆ ಗೊತ್ತಿಲ್ಲ. ಅವರ ಉದ್ದೇಶ ಬೇರೆಯದು ಇರಬಹುದು. ನಾಲ್ಕು ವರ್ಷಗಳಿಂದ ನಾನು ಹೋಟೆಲ್ ನಡೆಸುತ್ತಿದ್ದೇನೆ.ಇದುವರೆಗೆ ಯಾರೂ ಇಂತಹ ಆರೋಪ ಮಾಡಿರಲಿಲ್ಲ ಎಂದರು.