ಮಳೆಹಾನಿ: ಕೇಂದ್ರದಿಂದ 5 ಸಾವಿರ ಕೋಟಿ ರೂ. ನೆರವು ಕೋರಿದ ತಮಿಳುನಾಡು
Photo: PTI
ಹೊಸದಿಲ್ಲಿ: ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾದ ಚೆನ್ನೈ ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಹಾನಿಗೀಡಾದ ಮೂಲಸೌಕರ್ಯಗಳನ್ನು ಮರುನಿರ್ಮಿಸಲು 5 ಸಾವಿರ ಕೋಟಿ ರೂ. ಮಧ್ಯಂತರ ನೆರವು ನೀಡಬೇಕೆಂದು ತಮಿಳುನಾಡು ಮಂಗಳವಾರ ಕೇಂದ್ರ ಸರಕಾರವನ್ನು ಕೋರಿದೆ.
ರಾಜ್ಯಸಭಾ ಕಲಾಪದ ಶೂನ್ಯ ವೇಳೆಯಲ್ಲಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷದ ಸಂಸದ ತಿರುಚ್ಚಿ ಶಿವ ಅವರು ಮಾತನಾಡಿ ಮಿಚಾಂಗ್ ಚಂಡಮಾರುತದ ಪರಿಣಾಮವಾಗಿ ಚೆನ್ನೈ ಮತ್ತಿತರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಅಪಾರ ಅಸ್ತಿಪಾಸ್ತಿಗಳಿಗೆ , ಮೂಲ ಸೌರ್ಯಕಗಳಿಗೆ ಹಾನಿಯಾಗಿದೆ ಎಂದರು.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ನದಿಗಳಾಗಿ ಮಾರ್ಪಾಡುಗೊಂಡಿವೆ ಹಾಗೂ ನದಿಗಳು ಸಮುದ್ರಗಳಾಗಿ ಬಿಟ್ಟಿವೆ. ರಾಜ್ಯದ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿದ್ದು, ಕೆಲವೆಡೆ ಜಲಾಶಯಗಳು ಒಡೆದುಹೋಗಿವೆ ಎಂದು ತಿರುಚಿ ಶಿವಾ ತಿಳಿಸಿದರು.
ಮಳೆಯ ರೌದ್ರತೆಯಿಂದಾಗಿ ರಾಜ್ಯಾದ್ಯಂತ ರಸ್ತಗಳಿಗೆ ತೀವ್ರ ಹಾನಿಯಾಗಿದೆ. ಇದರಿಂದಾಗಿ ಅವಶ್ಯಕ ಸಾಮಾಗ್ರಿಗಳ ಪೂರೈಕೆಗೆ ಅಡಚಣೆಯುಂಟಾಗಿದೆ ಎಂದವರು ಹೇಳಿದರು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ಅವರ ಸಂಪುಟದ ಸದಸ್ಯರು, ನಗರಾಡಳಿತ ಅಧಿಕಾರಿಗಳು, ಅಗ್ನಿಶಾಮಕದಳ, ನೈರ್ಮಲ್ಯ ಕಾರ್ಮಿಕರು, ವೈದ್ಯರು, ರಕ್ಷಣಾ ತಂಡಗಳು ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿಗಳು ಮಳೆ ಹಾನಿಯಿಂದಾಗಿ ಸಂತ್ರಸ್ತರನ್ನು ರಕ್ಷಿಸಲು ಹಾಗೂ ಅವರಿಗೆ ಪರಿಹಾರ ಸಾಮಾಗ್ರಿಗಳನ್ನು ಒದಗಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ಅವರು ಹೇಳಿದರು.
ಮುನ್ನೆಚ್ಚರಿಕೆಯ ಕ್ರಮವಾಗಿ ವಿದ್ಯುತ್ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದವರು ಹೇಳಿದರು.
ತಮಿಳುನಾಡು ಸರಕಾರವು ಮಳೆಹಾನಿ ಸಂತ್ರಸ್ತರಿಗೆ ತನ್ನಿಂದ ಸಾಧ್ಯವಿರುವಂತಹ ಎಲ್ಲಾ ರೀತಿಯ ನೆರವನ್ನು ಒದಗಿಸಲು ಸಿದ್ಧವಿದೆ. ಮೂಲಸೌಕರ್ಯಕ್ಕೆ ಎಷ್ಟು ದೊಡ್ಡ ಮಟ್ಟದ ಹಾನಿಯಾಗಿದೆ ಎಂದರೆ ಅದು ತ್ವರಿತವಾಗಿ ಸರಿಪಡಿಸುವಂತಹವಲ್ಲ ಎಂದು ಡಿಎಂಕೆ ಸಂಸದ ಹೇಳಿದರು.
‘‘ರಾಜ್ಯ ಸರಕಾರವು 5 ಸಾವಿರ ಕೋಟಿ ರೂ.ಗಳ ಮಧ್ಯಂತರ ಪರಿಹಾರವನ್ನು ಕೋರಿದೆ. ತಮಿಳುನಾಡು ಹಾಗೂ ಇತರ ಐದು ಜಿಲ್ಲೆಗಳ ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಂಡು, ರಾಜ್ಯ ಸರಕಾರಕ್ಕೆ 5 ಸಾವಿರ ಕೋಟಿ ರೂ.ಗಳ ಮಧ್ಯಂತರ ಪರಿಹಾರವನ್ನು ಬಿಡುಗಡೆಗೊಳಿಸಬೇಕಿದ್ದು, ಇದರಿಂದ ತಮಿಳುನಾಡಿನ ಜನತೆಗೆ ನೆರವಾಗುವ ರಾಜ್ಯ ಸರಕಾರದ ಪ್ರಯತ್ನಗಳಿಗೆ ತುಂಬಾ ಉಪಕಾರವಾಗಲಿದೆ’’ ಎಂದು ತಿರುಚಿಶಿವ ತಿಳಿಸಿದರು.
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಮಿಚಾಂಗ್ ಚಂಡಮಾರುತದ ಪ್ರಭಾವದಿಂದಾಗಿ ಸೋಮವಾರ ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧೆಡೆ ಧಾರಾಕಾರ ಮಳೆಯಾಗಿದ್ದು, ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ಮಳೆ ಸಂಬಂಧಿ ದುರಂತಗಳಲ್ಲಿ ಒಂದು ಮಗು ಸೇರಿದಂತೆ ಕನಿಷ್ಠ 9 ಮಂದಿ ಸಾವಿಗೀಡಾಗಿದ್ದರು. ಅಪಾರ ಅಸ್ತಿ,ಪಾಸ್ತಿಗಳಿಗೆ ಹಾನಿಯಾಗಿತ್ತು.