ಕನಕಪುರ| ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನಿರಾಕರಣೆ ಆರೋಪ; ತಹಶೀಲ್ದಾರ್ ನೇತೃತ್ವದಲ್ಲಿ ನಡೆದ ಶಾಂತಿ ಸಭೆ ಯಶಸ್ವಿ
ಕನಕಪುರ: ತಾಲೂಕಿನ ಕೂನೂರು ಗ್ರಾಮದಲ್ಲಿ ಬಸವೇಶ್ವರ, ಆಂಜನೇಯ, ಮಾರಮ್ಮ ದೇವಸ್ಥಾನಗಳಿಗೆ ಪರಿಶಿಷ್ಟ ಜನರಿಗೆ ಪ್ರವೇಶ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ತಹಶೀಲ್ದಾರ್ ಮಂಜುನಾಥ್, ಸಮಾಜ ಕಲ್ಯಾಣ ಅಧಿಕಾರಿ ಜಯಪ್ರಕಾಶ್, ಸರ್ಕಲ್ ಇನ್‌ಸ್ಪೆಕ್ಟರ್ ಕೃಷ್ಣ ಲಮಾಣಿ ನೇತೃತ್ವದಲ್ಲಿ ಕೂನೂರು ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಜಾಗೃತಿ ಮೂಡಿಸಲಾಯಿತು.
ನಂತರ ಬಸವೇಶ್ವರ, ಆಂಜನೇಯ ದೇವಸ್ಥಾನಗಳಿಗೆ ದಲಿತರೊಡನೆ ಪ್ರವೇಶಿಸಿದ ತಹಶೀಲ್ದಾರ್ ಮಂಜುನಾಥ್ ಹಾಗೂ ಇನ್ನಿತರ ಅಧಿಕಾರಿಗಳು ಗ್ರಾಮದ ಮಧಭಾಗದ ಮಾರಮ್ಮ ದೇವಸ್ಥಾನ ಪ್ರವೇಶಿಸಲಾಗದೆ ಹಿಂದಿರುಗಿದ ಘಟನೆ ನಡೆಯಿತು.
ಕೂನೂರು ಗ್ರಾಮದಲ್ಲಿ ಪರಿಶಿಷ್ಟರಿಗೆ ಹಿಂದಿನಿಂದಲೂ ದೇವಸ್ಥಾನಕ್ಕೆ ಪ್ರವೇಶವಿರಲಿಲ್ಲ. 15 ವರ್ಷಗಳ ಹಿಂದೆ ಜಾತ್ರೆಯ ಸಂದರ್ಭದಲ್ಲಿ ಪರಿಶಿಷ್ಟ ಜನಾಂಗದ ಹುಡುಗನೊಬ್ಬ ನೂಕುನುಗ್ಗಲಿನಿಂದ ಆಯತಪ್ಪಿ ಮರವಣಿಗೆಯ ದೇವರನ್ನು ಸ್ಪರ್ಶಿಸಿದ ಘಟನೆ ಗ್ರಾಮಸ್ಥರನ್ನು ಕೆರಳಿಸಿ ದಲಿತರಿಗೆ ಸಾಮೂಹಿಕವಾಗಿ ಥಳಿಸಿದ ಘಟನೆ ನಡೆದಿತ್ತು. ಅನಂತರ ಪ್ರತಿ ವರ್ಷದ ಜಾತ್ರೆಯಲ್ಲೂ ಸಹ ಪರಿಶಿಷ್ಟರ ಪೂಜೆಗೆ ನಿರ್ಬಂಧ ಹೇರಿದ್ದು, ಪರಿಶಿಷ್ಟರು ತಮಗೆ ಪರಿಚಯವಿರುವ ಮೇಲ್ವರ್ಗದ ಜನಾಂಗದವರಲ್ಲಿ ಕಾಡಿಬೇಡಿ ಪೂಜಾಸಾಮಗ್ರಿಗಳನ್ನು ನೀಡಿ ಅವರಿಂದ ಪೂಜೆ ಮಾಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ 2 ವರ್ಷದ ಹಿಂದೆ ಗ್ರಾಮದ ದಲಿತ ಯುವಕರಾದ ಶ್ರೀನಿವಾಸಮೂರ್ತಿ, ರಾಮು, ಮಾದೇಶ್ ನಾವೂ ಸಹ ನಿಮ್ಮಷ್ಟೆ ಹಣ ಪಾವತಿಸುತ್ತೇವೆ. ದೇವಸ್ಥಾನ ನಿರ್ಮಾಣಕ್ಕೆ ನಾವೂ ಹಣ ನೀಡಿದ್ದೇವೆ. ನಮಗೂ ಸಮಾನತೆಯಿದೆ. ನಮ್ಮ ಕಾಲನಿಗೂ ದೇವರ ಮೂರ್ತಿಯ ಮೆರವಣಿಗೆ ಬರಲಿ, ನಮ್ಮ ಪೂಜಾ ಸಾಮಾಗ್ರಿಗಳನ್ನು ಸ್ವೀಕರಿಸಿ ದೇವರ ಪೂಜೆ ಮಾಡಿ ಎಂದು ಮನವಿ ಮಾಡಿದರೆ, ಗ್ರಾಮದ ಮೆಲ್ವರ್ಗದ ನಾಯಕರು ಆಗುವುದಿಲ್ಲ. ಹಿಂದಿನಿಂದಲೂ ನಡೆದು ಬಂದ ಪದ್ದತಿಯನ್ನು ನಾವು ಬಿಡಲಾಗದು. ನಿಮ್ಮ ಪೂಜೆ ಸಾಮಾಗ್ರಿಗಳನ್ನು ನೀಡುವುದಾದರೆ ನಾವು ಜಾತ್ರೆಯನ್ನೇ ನಿಲ್ಲಿಸುತ್ತೇವೆ ಎಂದು ಬಹಿಷ್ಕರಿಸಿದ್ದರು ಎನ್ನಲಾಗಿದೆ.
ಈ ಬಗ್ಗೆ ಜಿಲ್ಲಾಡಳಿತಕ್ಕೆ ದಲಿತ ಯುವಕರು ದೂರು ನೀಡಿರುವುದರಿಂದ ಅಧಿಕಾರಿಗಳಿಂದ ವರದಿ ತರಿಸಿಕೊಂಡು ದೂರಿನಲ್ಲಿ ಸತ್ಯಾಂಶವಿರುವುದನ್ನು ಮನಗಂಡು ತಹಶೀಲ್ದಾರರಿಗೆ ಸಮಸ್ಯೆ ಬಗೆ ಹರಿಸುವಂತೆ ನಿರ್ದೇಶಿಸಿದ್ದರು.
ಇಂದು ಗ್ರಾಮಕ್ಕೆ ಬಂದ ತಾಲೂಕು ಆಡಳಿತಾಧಿಕಾರಿಗಳು ಸಭೆ ನಡೆಸಿ ದಲಿತರೊಡನೆ ಪ್ರವೇಶಿಸಿದರು. ಮುಂದೆ ಗ್ರಾಮದ ಮದ್ಯದ ಮಾರಮ್ಮ ದೇವಸ್ಥಾನ ದ ಬಳಿ ಬಂದಾಗ ಅಸ್ಪೃಶ್ಯತೆಯ ಕರಾಳತೆ ತಹಶೀಲ್ದಾರರಿಗೂ ಬಡಿಯಿತು. ದೇವಸ್ಥಾನದ ಬೀಗದ ಕೀ ಕೊಡಲು ನಿರಾಕರಿಸಿದ ಮಹಿಳೆಯೊರ್ವರು ಊರಗೌಡರು ಹೇಳಿದರೆ ಮಾತ್ರ ನೀಡುತ್ತೇನೆ ಎಂದರು. ಗ್ರಾಮದ ಮುಖಂಡರು ಮಾರಮ್ಮ ದೇವಸ್ಥಾನಕ್ಕೆ ದಲಿತರ ಪ್ರವೇಶ ನಿರಾಕರಿಸಿ ಊರು ತೊರೆದಿದ್ದರು. ಅರ್ಧ ತಾಸಿಗೂ ಹೆಚ್ಚು ಕಾಯ್ದ ತಹಶೀಲ್ದಾರ್ ಮಂಜುನಾಥ್ ಹತ್ತು ದಿನಗಳ ಗಡುವು ನೀಡಿ ಪ್ರವೇಶ ನಿರಾಕರಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ ಹಿಂದಿರುಗಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಜೆ.ಎಂ.ಶಿವಲಿಂಗಯ್ಯ, ಮಲ್ಲಿಕಾರ್ಜುನ್, ಪ್ರಶಾಂತ್ ಹೊಸದುರ್ಗ, ಗುರುಮೂರ್ತಿ, ನೀಲಿ ರಮೇಶ್, ನಟರಾಜ್, ಜೀವನ್, ಮಾದೇಶ್ ಮತ್ತಿತರಿದ್ದರು.