ಕನಕಪುರ| ದೇವಾಲಯಕ್ಕೆ ದಲಿತರಿಗೆ ಪ್ರವೇಶ ನಿರಾಕರಣೆ ಆರೋಪ: ಶಾಂತಿಸಭೆ ವಿಫಲ
ಎರಡು ಗುಂಪುಗಳ ನಡುವೆ ಗಲಾಟೆ: ದೂರು
ಕನಕಪುರ: ತಾಲೂಕಿನ ಕಸಬಾ ಹೋಬಳಿ ಕೂನೂರು ಗ್ರಾಮದಲ್ಲಿ ಬಸವೇಶ್ವರ ಹಾಗು ಮಾರಮ್ಮ ದೇವಿಯ ದೇವಾಲಯಗಳಿಗೆ ಪರಿಶಿಷ್ಟ ಜನರಿಗೆ ಪ್ರವೇಶ ನಿರಾಕರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಕನಕಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಶಾಂತಿಸಭೆ ವಿಫಲವಾಗಿ, ಗದ್ದಲ-ಗಲಾಟೆಯ ನಡುವೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿರುವುದು ವರದಿಯಾಗಿದೆ.
ಕಳೆದ ವಾರ ಗ್ರಾಮದಲ್ಲಿ ದೇವಾಲಯ ಪ್ರವೇಶ ನಿರಾಕರಣೆ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಆಗ ತಾಲೂಕು ಆಡಳಿತ, ಸಮಾಜ ಕಲ್ಯಾಣ, ಪೊಲೀಸ್ ಅಧಿಕಾರಿಗಳು ಗ್ರಾಮದಲ್ಲಿ ಶಾಂತಿಸಭೆ ನಡೆಸಿ ಜಾಗೃತಿ ಮೂಡಿಸಿದ್ದರು. ಆದರೂ ದೇವಾಲಯಗಳಿಗೆ ದಲಿತರಿಗೆ ಪ್ರವೇಶಿಸಲಾಗದೇ ಅಧಿಕಾರಿಗಳು ವಾಪಸ್‌ಆಗಿ ಶಾಂತಿಸಭೆ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮಂಜುನಾಥ್ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎಲ್.ಕೃಷ್ಣ ಅವರ ನೇತೃತ್ವದಲ್ಲಿ ಗುರುವಾರ ತಾಲೂಕು ಕಚೇರಿಯಲ್ಲಿ ನಡೆದ ಶಾಂತಿ ಸಭೆ ಪ್ರಾರಂಭವಾಗುತ್ತಿದ್ದಂತೆ ದಲಿತರಿಗೆ ದೇವಾಲಯ ಪ್ರವೇಶ ಕುರಿತು ಪರ-ವಿರೋಧದ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ್ ಮಾತನಾಡಿ ಸಂವಿಧಾನದ ಪ್ರಕಾರ ಪ್ರತಿಯೊಬ್ಬ ಮನುಷ್ಯನಿಗೂ ದೇಗುಲ ಪ್ರವೇಶ ಮಾಡುವ ಹಕ್ಕಿದೆ. ಯಾರೂ ಮೂಢನಂಬಿಕೆ, ಅಸ್ಪಶ್ಯತೆ ಆಚರಣೆ ಮಾಡಬಾರದು ಎಂದು ತಿಳುವಳಿಕೆ ನೀಡಿದರು. ಇದಕ್ಕೆ ಮೇಲ್ವರ್ಗದ ಕೆಲ ಮುಖಂಡರು ಪ್ರತಿಕ್ರಿಯಿಸಿ ತಲತಲಾಂತರದಿಂದ ನಡೆದುಬಂದಿರುವ ಪದ್ಧತಿಯನ್ನೇ ಅನುಸರಿಸಬೇಕೇ ವಿನಃ ಬೇರೆಬೇರೆ ಸಂಪ್ರದಾಯಗಳು ಗ್ರಾಮದಲ್ಲಿ ನಡೆಯುವುದು ಬೇಡವೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಮಧ್ಯೆ ಪರ-ವಿರೋಧ ಚರ್ಚೆಯ ನಡುವೆ ಮೇಲ್ವರ್ಗದ ಮುಖಂಡರು ಸಭೆಯಿಂದ ಹೊರನಡೆದರು.
ವಿವರ: ದಲಿತ ಮುಖಂಡರಾದ ಪ್ರಶಾಂತ್, ಶಿವಲಿಂಗಯ್ಯ ಮಾತನಾಡಿ, ಕೂನೂರು ಗ್ರಾಮದಲ್ಲಿ ಪರಿಶಿಷ್ಟರಿಗೆ ಈ ಹಿಂದಿನಿಂದಲೂ ದೇವಾಲಯಕ್ಕೆ ಪ್ರವೇಶವಿರಲಿಲ್ಲ. 15 ವರ್ಷಗಳ ಹಿಂದೆ ಜಾತ್ರೆಯ ಸಂದರ್ಭದಲ್ಲಿ ದಲಿತ ಜನಾಂಗದ ಯುವಕನೊಬ್ಬ ನೂಕುನುಗ್ಗಲಿನಿಂದ ಆಯತಪ್ಪಿ ಮೆರವಣಿಗೆಯ ದೇವರನ್ನು ಸ್ಪರ್ಶಿಸಿದ ಘಟನೆ ಗ್ರಾಮಸ್ಥರನ್ನು ಕೆರಳಿಸಿ ದಲಿತರಿಗೆ ಹಲ್ಲೆ ಮಾಡಿದ್ದರು. ನಂತರ ಪ್ರತಿ ವರ್ಷದ ಜಾತ್ರೆಯಲ್ಲೂ ಪೂಜೆ-ಪುನಸ್ಕಾರಗಳಿಗೆ ನಿರ್ಬಂಧವನ್ನು ಹೇರಲಾಗಿತ್ತು ಎಂದು ವಿವರಿಸಿದರು.
ತಾಲೂಕು ಕಚೇರಿ ಎದುರೇ ಭುಗಿಲೆದ್ದ ಜಾತಿಸಂಘರ್ಷ: ತಾಲೂಕು ತಹಶೀಲ್ದಾರ್ ಮಂಜುನಾಥ್, ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಎರಡು ಸಮುದಾಯದ ಮುಖಂಡರ ಸಂಧಾನಸಭೆ ಅಪೂರ್ಣಗೊಂಡು ತಾಲೂಕು ಕಚೇರಿ ಬಾಗಿಲ ಬಳಿ ಹೊರಬರುತ್ತಿದ್ದ ವೇಳೆ ದೇಗುಲ ಪ್ರವೇಶದ ಹೆಸರಿನಲ್ಲಿ ಜಾತಿಸಂಘರ್ಷದ ಮಾತಿನ ಚಕಮಕಿ ನಡೆದು ಗಲಾಟೆ ವಿಕೋಪಕ್ಕೆ ತಿರುಗಿತು. ಪರಿಸ್ಥಿತಿ ಅರಿತ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಎರಡು ಗುಂಪುಗಳನ್ನು ಸಮಾಧಾನಪಡಿಸಿ ಅಲ್ಲಿಂದ ತೆರಳುವಂತೆ ಮಾಡಿದರು. ಇದರಿಂದ ಬೇಸರಗೊಂಡ ದಲಿತ ಮುಖಂಡರಾದ ಶ್ರೀನಿವಾಸಮೂರ್ತಿ, ಮುನಿಯಪ್ಪ, ಮಾದೇಶ್, ರಾಮು, ಪ್ರದೀಪ್ ಹಲವರು ತಾಲೂಕು ಕಚೇರಿ ಎದುರೇ ಜಾತಿಸಂಘರ್ಷಕ್ಕೆ ಎಡೆಮಾಡಿಕೊಟ್ಟ ಗ್ರಾಮದ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಮುಖಂಡರಾದ ಶಿವಣ್ಣ, ರಘುಅರಸ್, ಗಾಡ್‌ರಾಜು, ನಾಗರಾಜು ಸೇರಿದಂತೆ ಸಭೆಯಲ್ಲಿ ಹಲವರು ಹಾಜರಿದ್ದರು.
ಕನಕಪುರ ನಗರ ಠಾಣೆಗೆ ದೂರು: ಕನಕಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸಂಧಾನ ಸಭೆ ಹಾಗು ತಾಲೂಕು ಕಚೇರಿ ಬಳಿ ನಡೆದ ಜಾತಿ ಸಂಘರ್ಷದ ಬಗ್ಗೆ ದಲಿತ ಮುಖಂಡ ಶ್ರೀನಿವಾಸಮೂರ್ತಿ ಕನಕಪುರ ನಗರ ಠಾಣೆಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.