ದೇವೇಗೌಡರ ಕುಟುಂಬದವರು ಒಂದು ಗುಂಟೆ ಜಾಗ ದಾನ ಮಾಡಿದ್ದಾರಾ? : ಡಿ.ಕೆ.ಶಿವಕುಮಾರ್ ವಾಗ್ದಾಳಿ
ಡಿ.ಕೆ.ಶಿವಕುಮಾರ್ | PC:x/@DKShivakumar
ಚನ್ನಪಟ್ಟಣ : ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂಬ ಕಾರಣಕ್ಕೆ ನಾವು ಕನಕಪುರದ ಮೂರು ಕಡೆಗಳಲ್ಲಿ ದೊಡ್ದ ಆಲಹಳ್ಳಿ ಕೆಂಪೇಗೌಡರ 25 ಎಕರೆ ಜಮೀನು ದಾನ ಮಾಡಿದ್ದೇವೆ. ದೇವೇಗೌಡರ ಕುಟುಂಬದವರು ಹಾಸನ, ರಾಮನಗರ, ಚನ್ನಪಟ್ಟಣದಲ್ಲಿ ಒಂದೇ ಒಂದು ಗುಂಟೆ ಜಾಗ ದಾನ ಮಾಡಿದ್ದಾರಾ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರವಾಗಿ ಚಕ್ಕೆರೆ, ಹೊನ್ನನಾಯಕನಹಳ್ಳಿ ಸೇರಿದಂತೆ ಇನ್ನಿತರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ದೇವೇಗೌಡರು ನಿನ್ನೆ ಚುನಾವಣೆ ಪ್ರಚಾರ ಮಾಡುತ್ತಾ ಡಿ.ಕೆ.ಸಹೋದರರು ಜಮೀನು ಕಬ್ಜ ಮಾಡಿಕೊಂಡಿದ್ದು, ಶಾಲೆ ಕಟ್ಟಲು ಜಾಗ ನೀಡುತ್ತಿಲ್ಲ. ಜಾಗ ಕೇಳಿದರೆ ದುಡ್ಡು, ದುಡ್ಡು ಅಂತಾರೆ ಎಂದು ಆರೋಪ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ನಿಮಗೆ ಕನಕಪುರದಲ್ಲಿ ಸಂಬಂಧಿಕರಿದ್ದರೆ ಕೇಳಿ ನೋಡಿ. ಹಳ್ಳಿಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂದು ಶಾಲೆಗಳ ನಿರ್ಮಾಣಕ್ಕೆ ನಾವು ಮೂರು ಕಡೆ ನಮ್ಮ ತಂದೆ ದೊಡ್ಡಆಲಹಳ್ಳಿ ಕೆಂಪೇಗೌಡರಿಗೆ ಸೇರಿದ 25 ಎಕರೆ ಜಾಗವನ್ನು ದಾನ ಮಾಡಿದ್ದೇವೆ. ಯಾರು ಬೇಕಾದರೂ ಹೋಗಿ ನೋಡಬಹುದು ಎಂದು ಅವರು ತಿರುಗೇಟು ನೀಡಿದರು.
ಕುಮಾರಸ್ವಾಮಿ ಹಾಗೂ ದೇವೇಗೌಡರೇ, ನೀವು ಎಲ್ಲಾದರೂ ಒಂದು ಎಕರೆ ಜಾಗ ದಾನ ಮಾಡಿದ್ದೀರಾ? ನಾನು ನಿಮ್ಮ ಹಾಗೂ ನಿಮ್ಮ ಜಮೀನಿನ ವಿಚಾರಗಳನ್ನು ಈಗ ಮಾತನಾಡಲು ಹೋಗುವುದಿಲ್ಲ. ಚುನಾವಣೆಗಾಗಿ ನಿಮ್ಮನ್ನು ಟೀಕಿಸುವುದಿಲ್ಲ. ನಿಮ್ಮ ವಯಸ್ಸಿಗೆ ನಾನು ಗೌರವ ನೀಡುತ್ತೇನೆ. ಬಡವರಿಗೆ ಆಗಿರುವ ಮೋಸದ ಬಗ್ಗೆ ಧ್ವನಿ ಎತ್ತಲು ನಾನು ಈ ಪ್ರಶ್ನೆ ಕೇಳಬೇಕಾಗಿದೆ. ಹಾಸನ, ರಾಮನಗರ, ಚನ್ನಪಟ್ಟಣದಲ್ಲಿ ನೀವು ಹಾಗೂ ನಿಮ್ಮ ಕುಟುಂಬದವರು ಒಂದು ಗುಂಟೆ ಜಮೀನನ್ನು ನೀಡಿದ್ದೀರಾ? ಎಂದು ಶಿವಕುಮಾರ್ ಪ್ರಶ್ನಿಸಿದರು.
ಕುಮಾರಸ್ವಾಮಿ ಕ್ಷೇತ್ರಕ್ಕೆ ಏನು ಮಾಡಿದ್ದಾರೆ? :
ಯೋಗೇಶ್ವರ್ 4-5 ಕೋಟಿ ರೂ.ವೆಚ್ಚ ಮಾಡಿ ಬಿಸಿಲಮ್ಮ ದೇವಾಲಯ, ಮಹದೇಶ್ವರ ದೇವಾಲಯ ಅಭಿವೃದ್ಧಿ ಮಾಡಿದ್ದಾರೆ. ಕುಮಾರಸ್ವಾಮಿ ರಾಮನಗರ, ಚನ್ನಪಟ್ಟಣ ಕ್ಷೇತ್ರದಲ್ಲಿ ಒಂದು ದೇವಾಲಯ ಅಭಿವೃದ್ಧಿ ಮಾಡಿದ್ದಾರಾ? ಒಂದೇ ಒಂದು ಶುದ್ಧ ಕುಡಿಯುವ ನೀರಿನ ಘಟಕ ನೀಡಿದ್ದಾರಾ? ಇಲ್ಲವಾದರೆ, ಮತ್ತೆ ಯಾಕೆ ನೀವು ಮತ ಕೇಳುತ್ತಿದ್ದೀರಿ? ಎಂದು ಪ್ರಶ್ನಿಸಿದ ಶಿವಕುಮಾರ್, ನೀವು ಒಂದೊಂದು ಮತಕ್ಕೆ 2-3 ಸಾವಿರ ಹಣ ನೀಡಬಹುದು. ಆದರೆ ನಮ್ಮ ಸರಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡವರು ಬದುಕು ಕಟ್ಟಿಕೊಳ್ಳಲು ದಾರಿದೀಪವಾಗಿದೆ. ಇದಕ್ಕಾಗಿ 56 ಸಾವಿರ ಕೋಟಿ ರೂ. ನೀಡುತ್ತಿದ್ದೇವೆ ಎಂದರು.
ಕುಮಾರಸ್ವಾಮಿ ಅವರೇ ನೀವು ಹಾಗೂ ನಿಮ್ಮ ಧರ್ಮಪತ್ನಿ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಶಾಸಕರಾಗಿದ್ದವರು. ನೀವು ಕೋವಿಡ್ ಸಮಯದಲ್ಲಿ ಜನರಿಗೆ ನೆರವಾಗಿದ್ದೀರಾ? ಡಿ.ಕೆ.ಸುರೇಶ್ ಜನರಿಗೆ ನೆರವಾಗಲಿಲ್ಲವೇ? ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡಲಿಲ್ಲವೇ? ಇಂತಹ ಒಂದು ಕೆಲಸವನ್ನು ನೀವು ಮಾಡಲಿಲ್ಲ. ಮನೆಯಲ್ಲಿ ಅವಿತು ಕುಳಿತ್ತಿದ್ರಿ. ಯಾರಿಗೂ ಸಹಾಯ ಮಾಡಲಿಲ್ಲ. ಕಷ್ಟಕ್ಕೆ ಆಗಲಿಲ್ಲವಾದರೆ ಮತ್ತೆ ಯಾವಾಗ ಜನರ ಜೊತೆ ನಿಲ್ಲುತ್ತೀರಾ? ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.
ಕಾರ್ಯಕರ್ತರ ಪರಿಸ್ಥಿತಿ ಏನು? :
ನನ್ನ ಮೊಮ್ಮಗನ ಪಟ್ಟಾಭಿಷೇಕ ಮಾಡುವವರೆಗೂ ನಾನು ಬದುಕಿರುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ. ಬಹಳ ಸಂತೋಷ, ನೀವು ನಿಮ್ಮ ಮೊಮ್ಮಗನ ಪಟ್ಟಾಭಿಷೇಕ ಮಾಡಿ. ಆದರೆ ನಿಮಗಾಗಿ ದುಡಿದ ಕಾರ್ಯಕರ್ತರ ಪರಿಸ್ಥಿತಿ ಏನಾಗಬೇಕು?. ಕುಮಾರಸ್ವಾಮಿ ಕ್ಷೇತ್ರದ ಯಾವುದಾದರೂ ಒಬ್ಬ ಕಾರ್ಯಕರ್ತನಿಗೆ ಅಧಿಕಾರ ಕೊಟ್ಟಿದ್ದಾರಾ? ಇಲ್ಲ. ಈ ಕ್ಷೇತ್ರದ ಬಡವರನ್ನು ಮೇಲೆತ್ತಲು ನಾವಿದ್ದೇವೆ, ಯೋಗೇಶ್ವರ್ ಇದ್ದಾರೆ ಎಂದು ಅವರು ಹೇಳಿದರು.
ನಾನು ಈ ಕ್ಷೇತ್ರದಲ್ಲಿ ಉದ್ಯೋಗ ಮೇಳ ನಡೆಸಿದ ಬಳಿಕ, ಕುಮಾರಸ್ವಾಮಿ ಮಂಡ್ಯದಲ್ಲಿ ಉದ್ಯೋಗ ಮೇಳ ನಡೆಸಿದರು. ಅದೇ ಕೆಲಸವನ್ನು ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ ಯಾಕೆ ಮಾಡಲಿಲ್ಲ? ನಾವು ಕೈಗಾರಿಕೆ ಮಾಡಲು ಡಿ.ಕೆ.ಶಿವಕುಮಾರ್ ಜಮೀನು ನೀಡುತ್ತಿಲ್ಲ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ಶಿವಕುಮಾರ್ ಕಿಡಿಗಾರಿದರು.
ಕುಮಾರಸ್ವಾಮಿ ಕೇಂದ್ರದ ಮಂತ್ರಿಯಾಗಿ ಕೇವಲ ಆರು ತಿಂಗಳಾಗಿದೆ. ಅವರು ಯಾವತ್ತೂ ಇಂತಹ ಕಡೆ ಕಾರ್ಖಾನೆ, ಕೈಗಾರಿಕೆ ಮಾಡುತ್ತೇವೆ ಎಂದು ಹೇಳಲಿಲ್ಲ. ಒಂದು ವೇಳೆ ಅವರು ಕೈಗಾರಿಕೆ, ಕಾರ್ಖಾನೆ ಮಾಡಲು ಅನುಮತಿ ನೀಡಿದರೆ, ಕೇತಗಾನಹಳ್ಳಿಯಲ್ಲಿ 200-300 ಎಕರೆ ಸೇರಿದಂತೆ ಇತರೆ ಕಡೆಗಳಲ್ಲಿ ಜಮೀನಿದ್ದು, ಅವುಗಳನ್ನು ನೀಡಲು ಸಿದ್ಧರಿದ್ದೇವೆ. ಬಡವರಿಗೆ ಅನುಕೂಲ ಮಾಡುವ ಕೆಲಸಕ್ಕೆ ನಾವು ಎಂದಿಗೂ ಬೇಡ ಎನ್ನುವುದಿಲ್ಲ ಎಂದು ಅವರು ಹೇಳಿದರು.
ಯೋಗೇಶ್ವರ್ ಕೆರೆಗೆ ನೀರು ತುಂಬಿಸಿ ರೈತರಿಗೆ ನೆರವಾಗಿದ್ದಾರೆ. ಸತ್ತೇಗಾಲದಿಂದ ನೀರು ತರುವ ಯೋಜನೆ ಮಾಡುತ್ತಿದ್ದೇವೆ. ಇಂತಹ ಒಂದೇ ಒಂದು ಕಾರ್ಯಕ್ರಮವನ್ನು ಮಾಡಿದ್ದಾರಾ ಎಂದು ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಕೇಳಲು ಬಯಸುತ್ತೇನೆ. ಇಂತಹ ಕಾರ್ಯಕ್ರಮವನ್ನು ನಾವು ಕೊಟ್ಟಿದ್ದೇವೆ ಎಂದು ಅವರು ಹೇಳಿದರೇ ಈ ಕೂಡಲೇ ನಾನು ಈ ಚುನಾವಣಾ ಪ್ರಚಾರ ನಿಲ್ಲಿಸಿ ಇಲ್ಲಿಂದ ಹೊರಟು ಹೋಗುತ್ತೇನೆ ಎಂದು ಶಿವಕುಮಾರ್ ಸವಾಲು ಹಾಕಿದರು.