ಜೆಡಿಎಸ್ನವರು ಕಣ್ಣೀರಿನಿಂದ ಕೆರೆ ತುಂಬಿಸುತ್ತಿದ್ದಾರೆ : ಡಿ.ಕೆ.ಸುರೇಶ್ ವ್ಯಂಗ್ಯ
ಸುರೇಶ್
ಚನ್ನಪಟ್ಟಣ : ರೈತರಿಗೆ, ಜನರಿಗೆ, ಜಾನುವಾರುಗಳಿಗೆ ಉಪಯೋಗವಾಗಲಿ ಎಂದು ಸಿ.ಪಿ.ಯೋಗೇಶ್ವರ್ ಕ್ಷೇತ್ರದ ಕೆರೆಗಳನ್ನು ತುಂಬಿಸಿದರು. ಬೇರೆಯವರು ನಿಖಿಲ್ ಕುಮಾರಸ್ವಾಮಿಗೆ ಅನ್ಯಾಯವಾಗಿದೆ ಎಂದು ಕಣ್ಣೀರಿನಿಂದ ಕೆರೆಗಳನ್ನು ತುಂಬಿಸುತ್ತಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದರು.
ಬುಧವಾರ ಚನ್ನಪಟ್ಟಣದ ಬೇವೂರಿನಲ್ಲಿ ನಡೆದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ದಳದ ನಾಯಕರು ನಿಖಿಲ್ ಕುಮಾರಸ್ವಾಮಿಗೆ ಅನ್ಯಾಯವಾಗಿದೆ ಎಂದು ಕ್ಷೇತ್ರದ ಉದ್ದಕ್ಕೂ ಪ್ರಚಾರ ಮಾಡುತ್ತಿದ್ದಾರೆ. ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರದ ಜನ ನಿಖಿಲ್ ಕುಮಾರಸ್ವಾಮಿಗೆ ಅನ್ಯಾಯ ಮಾಡಿದ್ದಾರೆಯೇ? ಇವರಿಗೆ ಅನ್ಯಾಯ ಮಾಡಿದವರು ಯಾರು? ಯಾರಿಗೆ ಅನ್ಯಾಯವಾಗಿದೆ ಎಂಬುದು ಜನರಿಗೆ ತಿಳಿದಿದೆ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, ಚನ್ನಪಟ್ಟಣ ನಾಡು ಚಿನ್ನದ ನಾಡಾಗುತ್ತದೆ ಎಂದು ಕ್ಷೇತ್ರದ ಜನರು ದೂರದ ಬೆಟ್ಟ ನುಣ್ಣಗಿದೆ ಎಂದು ನಂಬಿದರು. ಇದರಿಂದ ರೈತರ ಬದುಕನ್ನು ಹಸನು ಮಾಡಿದ, ಕೆರೆಗಳನ್ನು ತುಂಬಿಸಿದ, ನಿಮ್ಮ ಕಣ್ಣೀರನ್ನು ಒರೆಸಬೇಕು ಎಂದುಕೊಂಡಿದ್ದ ಯೋಗೇಶ್ವರ್ಗೆ ಎರಡು ಬಾರಿ ಅನ್ಯಾಯವಾಗಿದೆ ಎಂದು ಸುರೇಶ್ ಹೇಳಿದರು.
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಅನ್ಯಾಯವಾಗಿದೆ ಎಂದು ಭಾವನಾತ್ಮಕವಾಗಿ ಕುಮಾರಸ್ವಾಮಿ ಮಾತನಾಡಿ ಲೋಕಸಭಾ ಚುನಾವಣೆ ಗೆದ್ದು ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಹಾಗಾದರೆ ಇಲ್ಲಿ ಯಾರಿಗೆ ಅನ್ಯಾಯವಾಗಿದೆ. ನಿಖಿಲ್ ಕುಮಾರಸ್ವಾಮಿ ಸೋತ ಕಾರಣಕ್ಕೆ ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗಿರುವುದು ಎಂದು ಸುರೇಶ್ ಟೀಕಿಸಿದರು.
ರಾಮನಗರ ಜಿಲ್ಲೆಯ ಜನರು ದೇವೇಗೌಡರು, ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ಅವರಿಗೆ ಅನ್ಯಾಯ ಮಾಡಿಲ್ಲ. ಅನ್ಯಾಯವಾಗಿರುವುದು ಮನೆ ಮಗ ಯೋಗೇಶ್ವರ್ಗೆ ಇವರು ಸತ್ತರೆ ಮಣ್ಣು ಮಾಡುವುದು ಚನ್ನಪಟ್ಟಣದ ಚಕ್ಕೆರೆಯಲ್ಲಿ ಎಂದ ಅವರು, ಬಿಜೆಪಿ ಹಾಗೂ ಜನತಾ ದಳದವರು ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆರೋಪಿಯನ್ನಾಗಿಸಬೇಕು ಎಂದು ಪ್ರಯತ್ನ ಪಡುತ್ತಿವೆ. ಈ ಎಲ್ಲ ಆರೋಪಗಳಿಗೆ ಚನ್ನಪಟ್ಟಣ ತಾಲೂಕಿನ ಜನತೆ ಕಾಂಗ್ರೆಸ್ ಗೆ ಮತ ನೀಡಿ ಉತ್ತರ ನೀಡಬೇಕು ಎಂದು ಮನವಿ ಮಾಡಿದರು.
ಕುಮಾರಸ್ವಾಮಿ ಕ್ಷೇತ್ರದ ಜನರ ಕಷ್ಟ ಆಲಿಸಲಿಲ್ಲ. ಕ್ಷೇತ್ರದ ಅನೇಕ ಊರುಗಳ ರಸ್ತೆಗಳೇ ಗೊತ್ತಿಲ್ಲ. ಸಿದ್ದರಾಮಯ್ಯ ವಾರಕ್ಕೊಮ್ಮೆಯಾದರೂ ಮೈಸೂರಿನ ತಮ್ಮ ಕ್ಷೇತ್ರಕ್ಕೆ ಹೋಗುತ್ತಿರುತ್ತಾರೆ. ಅವರು ಸಂಸಾರದ ಜೊತೆ ಕಾಲ ಕಳೆಯಲು ಹೋಗುವುದಿಲ್ಲ. ಕ್ಷೇತ್ರದ ಜನರ ಕಷ್ಟಗಳನ್ನು ಆಲಿಸಲು ಹೋಗುತ್ತಾರೆ. ಜನರ ಕಷ್ಟವನ್ನು ನಿವಾರಿಸಬೇಕು ಎಂದು ಕ್ಷೇತ್ರಕ್ಕೆ ಹೋಗುತ್ತಾರೆ ಹೊರತು, ಬೂಟಾಟಿಕೆಗಲ್ಲ ಎಂದು ಸುರೇಶ್ ಹೇಳಿದರು.
ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಈ ಪ್ರಶ್ನೆಗೆ ಉತ್ತರವನ್ನು ನೀಡಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನೀವು ಅವರನ್ನು ಭೇಟಿ ಮಾಡಿ ನಿಮ್ಮ ಕಷ್ಟ ಸುಖ ಹೇಳಿಕೊಂಡಿದ್ದೀರಾ? ಎಂದು ಪ್ರಶ್ನಿಸಿದ ಅವರು, ಅಧಿಕಾರದಲ್ಲಿ ಇದ್ದಾಗ ನಿಮ್ಮ ಕಷ್ಟ ಕೇಳದವರು ಈಗ ನಿಮ್ಮ ಊರುಗಳನ್ನು ಹುಡುಕಿಕೊಂಡು ಬರುತ್ತಿದ್ದಾರೆ ಎಂದು ಜೆಡಿಎಸ್ ನಾಯಕರ ವಿರುದ್ಧ ಕಿಡಿಗಾರಿದರು.
ಕುಮಾರಸ್ವಾಮಿ ರಾಜೀನಾಮೆ ಕೊಟ್ಟ ನಂತರ, ಡಿಸಿಎಂ ಡಿ.ಕೆ.ಶಿವಕುಮಾರ್ ಸುಮಾರು 500 ಕೋಟಿ ರೂ.ಗಳಷ್ಟು ಅನುದಾನವನ್ನು ಈ ಕ್ಷೇತ್ರಕ್ಕೆ ತಂದಿದ್ದಾರೆ. ಸತ್ತೇಗಾಲ ಯೋಜನೆ ನನ್ನ ನೇತೃತ್ವದಲ್ಲಿ ಆಗಿದೆ. ಮುಂದಿನ ಒಂದು ವರ್ಷದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಸುರೇಶ್ ಭರವಸೆ ನೀಡಿದರು.