ಉಪ ಚುನಾವಣೆ ಬಳಿಕ ರಾಜ್ಯ ಸರಕಾರ ʼಗೃಹಲಕ್ಷ್ಮಿʼ ಬಂದ್ ಮಾಡಲಿದೆ : ಎಚ್.ಡಿ. ದೇವೇಗೌಡ
ಎಚ್.ಡಿ.ದೇವೇಗೌಡ | PC :x/@H_D_Devegowda
ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮುಗಿದ ನಂತರ ರಾಜ್ಯ ಸರಕಾರ ಗೃಹ ಲಕ್ಷ್ಮೀ ಯೋಜನೆ ಬಂದ್ ಮಾಡಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಟೀಕಿಸಿದ್ದಾರೆ.
ರವಿವಾರ ಚನ್ನಪಟ್ಟಣ್ಣ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರಕಾರ ಖಜಾನೆಯನ್ನು ದಿವಾಳಿ ಎಬ್ಬಿಸಿದೆ. ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮಿ ಹಣವಿಲ್ಲ, ಆದರೆ, ಚುನಾವಣೆ ದೃಷ್ಟಿಯಿಂದ ಚನ್ನಪಟ್ಟಣ ಕ್ಷೇತ್ರದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಮಾತ್ರ ಹಣ ಜಮೆ ಮಾಡಿದ್ದಾರೆ ಎಂದರು,
ಕಾಂಗ್ರೆಸ್ ಸರಕಾರ ಅಪರಿಮಿತವಾಗಿ ಚುನಾವಣಾ ಅಕ್ರಮಗಳನ್ನು ಎಸಗುತ್ತಿದೆ. ಅದಕ್ಕೆ ಗ್ಯಾರಂಟಿ ಯೋಜನೆಗಳನ್ನು ಕೂಡ ಬಳಕೆ ಮಾಡಿಕೊಳ್ಳುತ್ತಿದೆ. ಅದರಲ್ಲೂ, ಚುನಾವಣೆ ಮುಗಿದ ಮೇಲೆ ಹಣ ಜಮೆ ಮಾಡುವುದನ್ನು ಮತ್ತೆ ನಿಲ್ಲಿಸುತ್ತಾರೆ. ಐದು ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿ ಕಸಿದುಕೊಂಡು ಹೋಗಲಿದೆ ಎಂದರು.
ನಿಖಿಲ್ ಅವರನ್ನು ವಿಧಾನಸೌಧಕ್ಕೆ ಕಳಿಸಿ. ಆ ಹುಡುಗ ನಿಮ್ಮ ಪರವಾಗಿ ದನಿ ಎತ್ತುತ್ತಾನೆ. ಇದರಲ್ಲಿ ನಿಮಗೆ ಯಾವುದೇ ಸಂಶಯ ಬೇಡ ಎಂದ ಅವರು, ನಾನು ಒಬ್ಬ ರೈತನ ಮಗ, ನೀವು ರೈತನ ಮಕ್ಕಳು. ಇಗ್ಗಲೂರು ಅಣೆಕಟ್ಟು ಕಟ್ಟಿಸಿದ್ದು ಈ ದೇವೇಗೌಡ, ಬದುಕಿದ್ದಾನೆ ಎಂದು ನುಡಿದರು.
ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟ ಮೇಲೆ ಯಾರು ಅಭ್ಯರ್ಥಿಯಾಗಿ ನಿಲ್ಲಬೇಕು ಎಂದು ಚರ್ಚೆ ನಡೆಯಿತು. ಡಿ.ಕೆ.ಶಿವಕುಮಾರ್ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡಿದರು. ಹಾಗಂತ ಎಲ್ಲರನ್ನೂ ನಂಬಿಸಿದರು. ನಾಮಪತ್ರ ಸಲ್ಲಿಸುವ ಒಂದು ದಿನಕ್ಕೆ ಮೊದಲು ಇದ್ದಕ್ಕಿದ್ದ ಹಾಗೆ ತಮ್ಮ ತೀರ್ಮಾನ ಬದಲಾಯಿಸಿ ಮತ್ತೊಬ್ಬ ಸ್ನೇಹಿತರನ್ನು ನಿಲ್ಲಿಸಿದ್ದಾರೆ ಎಂದರು.