ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್ ಬಿಜೆಪಿಗೆ ಬಿಟ್ಟುಕೊಡಲಿ: ಅಶ್ವತ್ಥ ನಾರಾಯಣ ಒತ್ತಾಯ
ರಾಮನಗರ : ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ ಸಂಸದರು ಇದ್ದಂತಹ ಕೋಲಾರ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಂತೆ, ಈ ಉಪ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್ ಪಕ್ಷವು ಬಿಜೆಪಿಗೆ ಬಿಟ್ಟುಕೊಡಲಿ ಎಂಬುದು ನಮ್ಮ ಒತ್ತಾಯ ಎಂದು ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಶನಿವಾರ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರದ ಬಿಜೆಪಿ ಸಂಸದರಾಗಿದ್ದ ಮುನಿಸ್ವಾಮಿ, ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯಲ್ಲಿ ತಮ್ಮ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟರು. ಅಲ್ಲದೇ, ಪಕ್ಷದ ಸೂಚನೆಯಂತೆ ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡಿದರು ಎಂದು ಹೇಳಿದರು.
ಅದೇ ರೀತಿ, ಈಗ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಸಿ.ಪಿ.ಯೋಗೇಶ್ವರ್ ಗೆ ಬಿಟ್ಟುಕೊಡಲಿ. ಈ ಉಪ ಚುನಾವಣೆಯಲ್ಲಿ ಯೋಗೇಶ್ವರ್ ಗೆಲುವು ಗೋಡೆ ಮೇಲಿನ ಬರಹದಷ್ಟೇ ಸತ್ಯ. ಅವರ ಹೆಸರೇ ಅಂತಿಮವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಕ್ಷೇತ್ರದಲ್ಲಿ ಯೋಗೇಶ್ವರ್ ಹೊರತುಪಡಿಸಿದರೆ ಗೆಲ್ಲುವ ಸಾಮಥ್ಯವಿರುವುದು ಕುಮಾರಸ್ವಾಮಿಗೆ ಮಾತ್ರ. ಈ ವಿಚಾರ ಉಭಯ ಪಕ್ಷಗಳ ನಾಯಕರಿಗೂ ಗೊತ್ತು, ಕಾರ್ಯಕರ್ತರಿಗೂ ಗೊತ್ತು. ಯೋಗೇಶ್ವರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.