ʼಕಾಂಗ್ರೆಸ್ ಕುತಂತ್ರದಿಂದ ನಾನು ಎರಡು ಬಾರಿ ಸೋತಿದ್ದೇನೆʼ : ಭಾಷಣದ ಮಧ್ಯೆ ಭಾವುಕರಾಗಿ ಕಣ್ಣೀರಿಟ್ಟ ನಿಖಿಲ್ ಕುಮಾರಸ್ವಾಮಿ
ರಾಮನಗರ : "ಎರಡು ಬಾರಿ ನಾನು ಚುನಾವಣೆಯಲ್ಲಿ ಸೋತಿದ್ದೇನೆ. ನಾನು ಏನು ತಪ್ಪು ಮಾಡಿದ್ದೇನೆ ಗೊತ್ತಿಲ್ಲ. ಮಾಜಿ ಪ್ರಧಾನಿ ಮತ್ತು ಮಾಜಿ ಮುಖ್ಯಮಂತ್ರಿ ಮಗನಾಗಿ ಹುಟ್ಟಿರುವುದೇ ನನ್ನ ದುರದೃಷ್ಟವೆನೋ ಗೊತ್ತಿಲ್ಲ" ಎಂದು ಕಣ್ಣೀರು ಹಾಕಿದರು.
ಕನ್ನಮಂಗಲ ಗ್ರಾಮದ ಪ್ರಚಾರ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಭಾವುಕರಾದರು. ʼಈ ಚುನಾವಣೆಯಲ್ಲಿ ನಾನು ಕಣ್ಣೀರು ಹಾಕಬಾರದು ಅಂದುಕೊಂಡಿದ್ದೆ. ಆದರೆ ಸಾಕಷ್ಟು ನೋವುಗಳಿವೆʼ ಎಂದು ಭಾಷಣದ ವೇಳೆ ಕಣ್ಣೀರಾದರು.
ʼಕಾಂಗ್ರೆಸ್ ಷಡ್ಯಂತ್ರದಿಂದ ನಾನು ಎರಡು ಚುನಾವಣೆಯಲ್ಲೂ ಪೆಟ್ಟು ತಿಂದಿದ್ದೇನೆ. ಜನ ನನ್ನ ಪರವಾಗಿ ಮತ ಹಾಕಿದ್ದಾರೆ. ಆದರೆ ರಾಜಕೀಯ ಷಡ್ಯಂತ್ರಕ್ಕೆ ನಾನು ಬಲಿಯಾಗಿದ್ದೇನೆ. ಬಹಳ ನೋವಿನಲ್ಲಿ ಇದ್ದೇನೆ. ಇವತ್ತು ಪಕ್ಷದ ಕಾರ್ಯಕರ್ತರಿಗೆ ಬೆಲೆ ಕೊಡಬೇಕೆಂದು ಈ ಚುನಾವಣೆಯಲ್ಲಿ ನಿಂತಿದ್ದೇನೆ. ದಯವಿಟ್ಟು ಈ ಬಾರಿ ಈ ಯುವಕನನ್ನು ಗೆಲ್ಲಿಸಿʼ ಎಂದು ಮನವಿ ಮಾಡಿದರು.
ʼಪಕ್ಷದ ಸಂಘಟನೆ ದೃಷ್ಟಿಯಿಂದ ಇಡೀ ರಾಜ್ಯಾದ್ಯಂತ ಪ್ರವಾಸ ಮಾಡುತಿದ್ದೇನೆ. ಪಕ್ಷದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಬೇಕೆಂಬುವುದು ನನ್ನ ಅಭಿಲಾಷೆ. ಪ್ರಾದೇಶಿಕ ಪಕ್ಷ ಕಟ್ಟುವುದು ಕಷ್ಟ ಇದೆ. ನಿಮ್ಮೆಲ್ಲರ ಆಶೀರ್ವಾದದಿಂದ ಈ ಪಕ್ಷ ರಾಜ್ಯದಲ್ಲಿ ಉಳಿದುಕೊಂಡಿದೆʼ ಎಂದರು.
ʼರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಚನ್ನಪಟ್ಟಣ ತಾಲ್ಲೂಕು ಅತ್ಯಂತ ಮಹತ್ವ ಪಡೆದುಕೊಂಡಿದೆ. ಅದಕ್ಕೆ ಕಾರಣ ಕುಮಾರಣ್ಣ ಸ್ಪರ್ಧೆ ಮಾಡಿದಂತ ಕ್ಷೇತ್ರ. ನಾನು ಪ್ರತಿ ಹಳ್ಳಿ ಹಳ್ಳಿಗೂ ಭೇಟಿ ನೀಡುತ್ತಿದ್ದೇನೆ. ದಯಮಾಡಿ ನಿಮ್ಮೆಲ್ಲರ ಸಹಕಾರ ವಿಶ್ವಾಸ ನನ್ನ ಮೇಲಿರಲಿ. ದೇವೇಗೌಡರು ಮತ್ತು ಕುಮಾರಣ್ಣನ ಕಾಲದಲ್ಲಿ ಚನ್ನಪಟ್ಟಣದಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದಾರೆʼ ಎಂದರು.