ರಾಮನಗರ: ದಲಿತ ಯುವಕನ ಕೈ ಕಡಿದ ಪ್ರಕರಣ; ಆರೋಪಿಗಳ ಕಾಲಿಗೆ ಪೊಲೀಸ್ ಗುಂಡೇಟು
ಹರ್ಷ | ಕರುಣೇಶ್
ರಾಮನಗರ: ಕಳೆದ ಮೂರು ದಿನಗಳ ಹಿಂದೆ ಕನಕಪುರ ತಾಲ್ಲೂಕಿನ ಮಳಗಾಳು ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ಮಾಡಿ ಓರ್ವನ ಕೈ ಕಡಿದ ಪ್ರಕರಣದ ಆರೋಪಿಗಳನ್ನು ಪೊಲೀಸರು ರವಿವಾರ ಬೆಳಿಗ್ಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಕಗ್ಗಲಿಪುರ ಬಳಿಯ ವ್ಯಾಲಿ ಸ್ಕೂಲ್ ರಸ್ತೆ ಬಳಿ ನಡೆದಿದೆ.
ಬಂಧಿತ ಆರೋಪಿಗಳನ್ನು ಹರ್ಷ ಅಲಿಯಾಸ್ ಕೈಮ, ಕರುಣೇಶ್ ಅಲಿಯಾಸ್ ಕಣ್ಣ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಕೃತ್ಯದ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿಗಳು, ಕಗ್ಗಲಿಪುರ ಬಳಿಯ ವ್ಯಾಲಿ ಸ್ಕೂಲ್ ರಸ್ತೆ ಬಳಿ ತಿರುಗಾಡುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ರವಿವಾರ ಮುಂಜಾನೆ 5 ಗಂಟೆ ಸುಮಾರಿಗೆ ಕನಕಪುರ ಟೌನ್ ಠಾಣೆ ಇನ್ಸ್ಪೆಕ್ಟರ್ ಮಿಥುನ್ ಶಿಲ್ಪಿ, ಗ್ರಾಮಾಂತರ ಇನ್ಸ್ಪೆಕ್ಟರ್ ಕೃಷ್ಣ ಲಮಾಣಿ, ಪಿಎಸ್ಐಗಳಾದ ಮನೋಹರ್, ರವಿಕುಮಾರ್, ಕಾನ್ಸ್ಟೆಬಲ್ಗಳಾದ ರಾಜಶೇಖರ್ ಹಾಗೂ ಶಿವಕುಮಾರ್ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಪೋಲಿಸರ ಮೇಲೆ ಹಲ್ಲೆಗೆ ಯತ್ನ ನಡೆಸಲಾಗಿದೆ ಎನ್ನಲಾಗಿದ್ದು, ಆತ್ಮರಕ್ಷಣೆಗಾಗಿ ಹರ್ಷ ಕಾಲಿಗೆ ಮಿಥುನ್ ಶಿಲ್ಪಿ ಮತ್ತು ಕರುಣೇಶ್ ಕಾಲಿಗೆ ಪಿಎಸ್ಐ ಮನೋಹರ್ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.
‘ಆರೋಪಿಗಳ ವಿರುದ್ದ ಕನಕಪುರ ಟೌನ್, ಗ್ರಾಮಾಂತರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕೊಲೆ ಯತ್ನ, ಪರಿಶಿಷ್ಟರ ಮೇಲೆ ದೌರ್ಜನ್ಯ ಸೇರಿದಂತೆ ಐದು ಪ್ರಕರಣಗಳಿವೆ. ಆಸ್ಪತ್ರೆಯಲ್ಲಿರುವ ಆರೋಪಿಗಳು ಚೇತರಿಸಿಕೊಂಡ ಬಳಿಕ ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುವುದು. ಕೃತ್ಯದಲ್ಲಿ ಒಟ್ಟು 7 ಮಂದಿ ಭಾಗಿಯಾಗಿದ್ದು, ಘಟನೆ ನಡೆದ ಮಾರನೇ ದಿನವೇ ಐವರನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡಿರುವ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ರ