ರಾಮನಗರ | ‘ಡಿ ಬಾಸ್’ ಎಂದು ಕೂಗಾಡಬೇಡಿ ಎಂದಿದ್ದಕ್ಕೆ ವ್ಯಕ್ತಿಗೆ ಚಾಕು ಇರಿತ : ಆರೋಪ
ಸಾಂದರ್ಭಿಕ ಚಿತ್ರ
ಬೆಂಗಳೂರು/ರಾಮನಗರ : ಮದ್ಯದ ಅಮಲಿನಲ್ಲಿ ‘ಡಿ ಬಾಸ್, ಡಿ ಬಾಸ್’ ಎಂದು ಕೂಗುತ್ತಿದ್ದ ಇಬ್ಬರು ಗಾರೆ ಕೆಲಸಗಾರರನ್ನು ಗದರಿದ್ದಕ್ಕೆ ಮೇಸ್ತ್ರಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿ ಸೂಲಿಕೆರೆ ಪಾಳ್ಯದ ಲೇಬರ್ ಶೆಡ್ನಲ್ಲಿ ವರದಿಯಾಗಿದೆ.
ರಾಮನಗರ ತಾಲೂಕಿನ ಕಸಬಾ ಹೋಬಳಿ ದೊಡ್ಡಮಣ್ಣುಗುಡ್ಡೆ ಗ್ರಾಮದ ನಿವಾಸಿ ವೆಂಕಟಸ್ವಾಮಿ ಎಂಬಾತ ಗಾಯಗೊಂಡಿದ್ದು, ಐಜೂರು ಬಡಾವಣೆ ನಿವಾಸಿಗಳಾದ ಕಿರಣ್, ಮಹದೇವ ಕೃತ್ಯ ಎಸಗಿದವರು ಎಂದು ಗುರುತಿಸಲಾಗಿದೆ.
ವೆಂಕಟಸ್ವಾಮಿಯು ಸುರೇಶ್ ಎನ್ನುವವರ ಬಳಿ ಗುತ್ತಿಗೆ ತೆಗೆದುಕೊಂಡಿದ್ದ ಜಾಗದಲ್ಲಿ ಮೇಸ್ತ್ರಿ ಕೆಲಸ ಮಾಡಲು ಗ್ರಾಮದ ಕಾಳಯ್ಯ ಅವರೊಂದಿಗೆ ಕೆಂಗೇರಿ ಹೋಬಳಿ ಸೂಲಿಕೆರೆ ಪಾಳ್ಯಕ್ಕೆ ತೆರಳಿದ್ದಾರೆ. ಅವರ ಜೊತೆಯಲ್ಲಿ ಪರಿಚಯವಿರುವ ಕಿರಣ್ ಹಾಗೂ ಮಹದೇವ ಅವರನ್ನು ಕೆಲಸಕ್ಕಾಗಿ ಕರೆದುಕೊಂಡು ಹೋಗಿದ್ದಾರೆ. ಆ ಸ್ಥಳದಲ್ಲಿಯೇ ಶೆಡ್ ನಿರ್ಮಾಣ ಮಾಡಿಕೊಂಡು ಎಲ್ಲರೂ ವಾಸವಾಗಿದ್ದರು ಎನ್ನಲಾಗಿದೆ.
ಸೆ.26ರಂದು ರಾತ್ರಿ ಶೆಡ್ಡಿನಲ್ಲಿ ಕಿರಣ್ ಮತ್ತು ಮಹದೇವ ಮದ್ಯ ಕುಡಿದು ನಟ ದರ್ಶನ್ ವಿಚಾರವಾಗಿ ಮಾತನಾಡುತ್ತಾ ‘ಡಿ ಬಾಸ್, ಡಿ ಬಾಸ್’ ಎಂದು ಕೂಗಾಡಲು ಆರಂಭಿಸಿದ್ದಾರೆ. ಇದಕ್ಕೆ ವೆಂಕಟಸ್ವಾಮಿ, ಅಕ್ಕಪಕ್ಕದಲ್ಲಿ ಮನೆಗಳಿವೆ ಕೂಗಾಡಬೇಡಿ ಎಂದು ಎಚ್ಚರಿಸಿದ್ದಾರೆ. ಆದರೂ, ನಿಲ್ಲಿಸದ ಇಬ್ಬರೂ ‘ಡಿ ಬಾಸ್, ಡಿ ಬಾಸ್’ ಎಂದು ಜೋರಾಗಿ ಕೂಗಿದ್ದಾರೆ. ಈ ವೇಳೆ ಅವರ ವಿರುದ್ಧ ಗದರಿದ ವೆಂಕಟಸ್ವಾಮಿಯ ಕುತ್ತಿಗೆಗೆ ಇಬ್ಬರೂ ಆರೋಪಿಗಳು ಚಾಕುವಿನಿಂದ ಇರಿದಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಗೊತ್ತಾಗಿದೆ.