ಹಾಸನದಲ್ಲಿ ನಿಮ್ಮ ಮೊಮ್ಮಗನಿಂದ ನೂರಾರು ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ : ಸಿದ್ದರಾಮಯ್ಯ ತಿರುಗೇಟು
PC : x/@siddaramaiah
ಚನ್ನಪಟ್ಟಣ : ಮಾಜಿ ಪ್ರಧಾನಿ ದೇವೇಗೌಡರು ನಿನ್ನೆ ಭಾಷಣ ಮಾಡುವಾಗ ಹೇಳಿದ್ರು ‘ಕಟುಕರಿಗೆ ಕಣ್ಣೀರು ಬರಲ್ಲ’ ಎಂದು. ‘ಹಾಸನದಲ್ಲಿ ನಿಮ್ಮ ಮೊಮ್ಮಗನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ನೂರಾರು ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಅಲ್ಲಿ ಹೋಗಿ ಕಣ್ಣೀರು ಹಾಕಿ ಗೌಡರೇ, ಇಲ್ಲಿ ಅತ್ತರೆ ಏನು ಪ್ರಯೋಜನ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಬುಧವಾರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕುಡ್ಲೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರವಾಗಿ ಆಯೋಜಿಸಿದ್ದ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಸೋತಿದ್ದ, ನಂತರ ರಾಮನಗರದಲ್ಲಿ ಸೋತಿದ್ದ ನಿಖಿಲ್ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಅಳು ನಮ್ಮ ಪರಂಪರೆ, ನೀನು ಅಳೋಕೆ ಶುರು ಮಾಡು ಎಂದು ನಿಖಿಲ್ಗೆ ಹೇಳಿಕೊಟ್ಟಿದ್ದಾರೆ. ಸೋಲಿನ ಭಯ ಕಾಡುತ್ತಿದೆ ಅದಕ್ಕೆ ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ ಎಂದು ಸಿದ್ದರಾಮ್ಯಯ ಟೀಕಿಸಿದರು.
ಯೋಗೇಶ್ವರ್ ಗೆಲ್ಲುವುದು ಶತಸಿದ್ಧ. ದೇವೇಗೌಡರು ಮೂರ್ನಾಲ್ಕು ದಿನ ರಾಮನಗರದಲ್ಲಿ ಠಿಕಾಣಿ ಹೂಡಿದ್ದಾರೆ. ಏನಾದ್ರೂ ಮಾಡಿ ಮೊಮ್ಮಗನ್ನ ಗೆಲ್ಲಿಸಬೇಕಂತ ಹೊರಟಿದ್ದಾರೆ. ಯೋಗೇಶ್ವರ್ಗೆ ಜನರ ಕಷ್ಟಸುಖ ಗೊತ್ತು. ದೇವೇಗೌಡರ ಕುಟುಂಬಕ್ಕೆ ಇದು ಗೊತ್ತಿಲ್ಲ. ಅವರಿಗೆ ಭಾವನಾತ್ಮಕವಾಗಿ ಮಾತಾಡೋದು, ಅಳೋದು ಮಾತ್ರ ಗೊತ್ತು ಎಂದು ಮುಖ್ಯಮಂತ್ರಿ ಹೇಳಿದರು.
ಚನ್ನಪಟ್ಟಣದ ಅಭಿವೃದ್ಧಿಗೆ ಯೋಗೇಶ್ವರ್ ಗೆಲ್ಲಬೇಕು. ನಾನು ಈಗಾಗಲೇ ಕ್ಷೇತ್ರಕ್ಕೆ 500 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ಕೊಟ್ಟಿದ್ದೇನೆ. ಯೋಗೇಶ್ವರ್ ಗೆದ್ದ ಮೇಲೆ ಮತ್ತಷ್ಟು ಅನುದಾನ ಕೊಡುತ್ತೇನೆ. ಇನ್ನೂ ಮೂರುವರೆ ವರ್ಷ ನಮ್ಮ ಸರಕಾರವೇ ಇರುತ್ತೆ, ಕುಮಾರಸ್ವಾಮಿ ಸರಕಾರ ಬರಲ್ಲ. ಅನುದಾನ ಕೊಡೋದು ನಾನು ಹಾಗೂ ಡಿ.ಕೆ.ಶಿವಕುಮಾರ್ ಎಂದು ಸಿದ್ದರಾಮಯ್ಯ ತಿಳಿಸಿದರು.
ಕೂಲಿ ಮಾಡಿದ್ದೀವಿ, ಓಟ್ ಕೊಡಿ ಅಂತಿದೀವಿ. 5 ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆ. ಪ್ರತಿ ತಿಂಗಳು ಎರಡು ಸಾವಿರ ರೂ.ದುಡ್ಡು ಕೊಡುತ್ತಿರೋದು ನಾನಲ್ವ? ನಿಮಗೆ ಉಚಿತವಾಗಿ ಬಸ್ ನಲ್ಲಿ ಓಡಾಡೊ ಹಾಗೆ ಮಾಡಿದ್ದು ನಮ್ಮ ಸರಕಾರ ಅಲ್ವಾ? ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಇದನ್ನಾ ಮಾಡಿದ್ರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಅಳ ಗಂಡಸನ್ನ ನಂಬಬಾರ್ದು ಅಂತ ನಮ್ಮ ಕಡೆ ಒಂದು ಗಾದೆ ಇದೆ. ಈ ಕುಮಾರಸ್ವಾಮಿ ಅಳುವ ಗಂಡಸು, ಯಾವತ್ತೂ ನಂಬಬೇಡಿ. ಅತ್ತರೆ ಜನರ ಸಮಸ್ಯೆ ಬಗೆಹರಿಯುತ್ತಾ? ಕೆರೆ ನೀರು ತುಂಬುತ್ತಾ? ಜಮೀನಿಗೆ ನೀರು ಹರಿಯುತ್ತಾ? ಎಂದು ಮುಖ್ಯಮಂತ್ರಿ ಕೇಳಿದರು.
ಯಾರೂ ನಮ್ಮನ್ನು ಆಮಂತ್ರಣ ಕೊಟ್ಟು ರಾಜಕೀಯಕ್ಕೆ ಬನ್ನಿ ಅಂತ ಕರೆದಿಲ್ಲ. ಸೇವೆ ಮಾಡಬೇಕು ಅಂತ ಬಂದಿದೀವಿ. ಗ್ಯಾರಂಟಿ ಯೋಜನೆ ಮೂಲಕ 1.69 ಕೋಟಿ ಕುಟುಂಬಗಳಿಗೆ ನೆರವಾಗುತ್ತಿದ್ದೇವೆ. ಸರಕಾರದ ಸಾಧನೆ ನೋಡಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಪತ್ರ ಬರೆದು ಶ್ಲಾಘಿಸಿದ್ದರು ಎಂದು ಇದೇ ವೇಳೆ ಮುಖ್ಯಮಂತ್ರಿ ಸ್ಮರಿಸಿದರು.
ಹಾಸನಾಂಬೆ ಜಾತ್ರೆಗೆ 21 ಲಕ್ಷ ಮಹಿಳೆಯರು ಹೋಗಿದ್ದಾರೆ. 12 ಕೋಟಿ ರೂ. ಆದಾಯ ಬಂದಿದೆಯಂತೆ. ಇದೊಂದು ದಾಖಲೆ. ಇದಕ್ಕೆ ಶಕ್ತಿ ಯೋಜನೆ ಕಾರಣ. ದುಡ್ಡು ಕೊಡುತ್ತೇವೆ ಎಂದರೂ ಕೇಂದ್ರದವರು ಅಕ್ಕಿ ಕೊಡಲಿಲ್ಲ. ಈಗಲೂ ಅವರು ಅಕ್ಕಿ ಕೊಟ್ಟರೆ ಜನರಿಗೆ ಅಕ್ಕಿ ಕೊಡುತ್ತೇವೆ. ಇದರಿಂದ ಬಡವರಿಗೆ ಅನುಕೂಲ ಆಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಗ್ಯಾರಂಟಿ ಯೋಜನೆಯನ್ನು ಪರಿಷ್ಕರಣೆ ಮಾಡುತ್ತಾರೆ ಎಂದು ಬಿಜೆಪಿ-ಜೆಡಿಎಸ್ ಸುಳ್ಳು ಹೇಳುತ್ತಿವೆ. ಕಾಂಗ್ರೆಸ್ ಸರಕಾರ ಇರುವವರೆಗೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ. ಏನೇ ಕೆಲಸ ಇರಲಿ ನ.13ರಂದು ಮತಗಟ್ಟೆಗೆ ಹೋಗಿ ಯೋಗೇಶ್ವರ್ ಗೆ ಮತ ಹಾಕಿ. ನಿಮ್ಮ ಆಶೀರ್ವಾದ ಯೋಗೇಶ್ವರ್ ಮೇಲಿರಲಿ ಎಂದು ಅವರು ಕರೆ ನಿಡಿದರು.
ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್, ಸಚಿವರಾದ ರಾಮಲಿಂಗಾರೆಡ್ಡಿ, ಡಾ.ಎಚ್.ಸಿ.ಮಹದೇವಪ್ಪ, ದಿನೇಶ್ ಗುಂಡೂರಾವ್, ಕೆ.ವೆಂಕಟೇಶ್, ಮಾಜಿ ಸಂಸದರಾದ ಡಿ.ಕೆ.ಸುರೇಶ್, ಎಲ್.ಆರ್.ಶಿವರಾಮೇಗೌಡ, ಶಾಸಕ ಬಾಲಕೃಷ್ಣ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.