ಅರ್ಧ ಪರದೇಶಿ ಕಲಾವಿದೆಯರು...
ಅದೊಂದು ಊರಲ್ಲಿ ನಾಟಕ ಕಂಪೆನಿಯು ನಾಟಕವಾಡಲು ಮುಕ್ಕಾಮು ಮಾಡಿತ್ತು.
ಆಗ ಪ್ರತೀ ಊರಿನಲ್ಲಿ ಕಲಾವಿದರ ಮೇಲೆ ಕರುಣೆ ತೋರಿಸುವ ಡಾಕ್ಟರ್ ಒಬ್ಬರಾದರೂ ಸಿಗುತ್ತಿದ್ದರು. ಒಂದು ಊರಿನಿಂದ ಮತ್ತೊಂದು ಊರಿಗೆ ಕಲಾವಿದರು ಹೋದಾಗ ನೀರಿನ ಬದಲಾವಣೆಯಿಂದ ಸಹಜವಾಗಿ ಜ್ವರ, ಕೆಮ್ಮು, ನೆಗಡಿ ಬರುವುದು ಸ್ವಾಭಾವಿಕ. ಕಲಾವಿದರೊಬ್ಬರಿಗೆ ಪರಿಚಯವಾದ ಡಾಕ್ಟರ್ ನಂತರ ಕಂಪೆನಿಗೆ ಚಿರಪರಿಚಿತರಾಗಿ, ಆತ್ಮೀಯರಾಗಿ ಎಲ್ಲರಿಗೂ ಉಚಿತವಾಗಿ ಔಷಧಿ ಕೊಡುತ್ತಿದ್ದರು. ಆ ಕಂಪೆನಿಯಲ್ಲಿದ್ದ ಪುಟ್ಟ ಕಲಾವಿದೆಯ ಅಜ್ಜಿಗೆ ನೆಗಡಿ, ಜ್ವರ ಬಂದಿತ್ತು. ಡಾಕ್ಟರ್ ಹತ್ತಿರ ಅಜ್ಜಿಗೆ ಔಷಧಿಗೆಂದು ಹೋದಾಗ ಅಲ್ಲಿ ವ್ಯಕ್ತಿಯೊಬ್ಬರು ಡಾಕ್ಟರ್ ಹತ್ತಿರ ಮಾತಾಡುತ್ತ ಕೂತಿದ್ದರು. ಬಿಳಿ ಧೋತ್ರ, ನೆಹರೂ ಅಂಗಿ, ಮೇಲೊಂದು ವೇಸ್ಟ್ ಕೋಟು, ಗಾಂಧಿ ಟೋಪಿ, ಕೈಯಲ್ಲಿ ಛತ್ರಿ. ನೋಡುವುದಕ್ಕೆ ಬಹಳ ಆದರ್ಶವಾದ ಮುಖ. ಒಂದು ಕ್ಷಣ ಅವರು ಬಾಲಕಿಯನ್ನು, ಬಾಲಕಿಯು ಅವರನ್ನು ನೋಡಿದರು. ಡಾಕ್ಟರ್ ಹತ್ತಿರ ಸರತಿ ಬಂದಾಗ ‘‘ಅಜ್ಜಿಗೆ ಹುಷಾರಿಲ್ಲ. ನೆಗಡಿ, ಕೆಮ್ಮು’’ ಎಂದಳು ಬಾಲಕಿ. ಔಷಧಿ ಕೊಟ್ಟ ಡಾಕ್ಟರ್ ‘‘ನಿನ್ನೆ ನಾಟಕಕ್ಕೆ ಜನ ಇದ್ರಾ?’’ ಕೇಳಿದರು.
‘‘ಓಹೋ, ಬಹಳ ಜನ ಇದ್ದರು’’ ಎಂದಳು ಬಾಲಕಿ. ತಕ್ಷಣ ಡಾಕ್ಟರ್ ಪಕ್ಕದಲ್ಲಿ ಕುಳಿತಿದ್ದ ಆ ವ್ಯಕ್ತಿ ಜಾಗೃತರಾದರು. ‘‘ಡಾಕ್ಟರೆ, ಈ ಹುಡುಗಿ ಯಾರ ಮಗಳು?’’ ಕೇಳಿದರು. ಅದಕ್ಕೆ ಡಾಕ್ಟರ್ ‘‘ಇಲ್ಲಿ ಒಂದು ನಾಟಕ ಕಂಪೆನಿ ಬಂದಿದೆ. ಅದರಲ್ಲಿ ಇಂಥ ನಟಿ ಇದ್ದಾರೆ. ಅವರ ಮಗಳು ಈಕೆ. ಬಾಲಪಾತ್ರಗಳನ್ನು ಮಾಡುತ್ತಾಳೆ’’ ಎಂದರು. ಇದನ್ನು ಕೇಳಿದ ಆ ವ್ಯಕ್ತಿ ಬಹಳ ಸಂತೋಷದಿಂದ ಬಾಲಕಿಯನ್ನು ಕರೆದು, ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು, ತಲೆ ಮೇಲೆ ಕೈ ಆಡಿಸಿ ಪ್ರೀತಿ ತೋರಿದರು. ಥಟ್ಟನೆ ಬಾಲಕಿಯ ಕಣ್ಣಲ್ಲಿ ನೀರಾಡಿದವು. ಆ ವಯಸ್ಸಿನಲ್ಲಿ ಅಷ್ಟು ಪ್ರೀತಿಯಿಂದ ಮಾತನಾಡಿಸಿದವರನ್ನು ಬಾಲಕಿ ಕಂಡಿರಲಿಲ್ಲ. ನಾಟಕದಲ್ಲಿ ತನ್ನ ಪಾತ್ರ ನೋಡಿರಬೇಕು, ಅದಕ್ಕೆ ಪ್ರೀತಿ, ಕಾಳಜಿ ತೋರಿಸುತ್ತಿದ್ದಾರೆ ಎಂದು ತಿಳಿದು ‘‘ನಿನ್ನೆ ನಾಟಕ ನೋಡಿದ್ರಿ?’’ ಕೇಳಿದಳು. ‘‘ಇಲ್ಲ ಮಗಳೆ’’ ಎಂದರು.
‘‘ಹೌದಾ, ಹಾಗಾದ್ರೆ ಇವತ್ತು ಬರ್ರಿ. ನನ್ನ ಪಾತ್ರ ನೋಡಿದರೆ ಹೆಚ್ಚು ಪ್ರೀತಿ ತೋರಸ್ತೀರಿ. ಆದರೆ ನೀವು ಮುಂದಿನ ಸೀಟಿನಲ್ಲಿ ಕೂಡಬೇಕು ಅಂದರೆ ನೀವು ಬಂದಿದ್ದು ಗೊತ್ತಾಗುತ್ತೆ’’ ಎಂದಳು.
‘‘ಆಗಲಿ’’ ಎಂದ ಅವರು, ಪಕ್ಕದಲ್ಲಿದ್ದ ಹಣ್ಣಿನ ಅಂಗಡಿಯಿಂದ ದ್ರಾಕ್ಷಿ ತಂದುಕೊಟ್ಟು ‘‘ನಿನ್ನ ತಾಯಿ, ಅಜ್ಜಿ ಹೇಗಿದ್ದಾರೆ? ನೀನು ಶಾಲೆಗೆ ಹೋಗ್ತೀಯಾ? ಈಗ ಎಷ್ಟನೆ ಕ್ಲಾಸು?’’ ಇತ್ಯಾದಿ ಎಲ್ಲ ವಿಷಯ ಕೇಳಿ ತಿಳಿದುಕೊಂಡು ಮತ್ತೆ ತಿಂಡಿ ಕೊಡಿಸಿದರು. ಖುಷಿಯಾದ ಬಾಲಕಿಯು ಕಥೆ ಹೇಳಿ, ಹಾಡು ಕೂಡಾ ಹಾಡಿ ‘‘ರೀ ನಾನು ಹೋಗ್ಬೇಕು. ಮಧ್ಯಾಹ್ನದ ಊಟ ನಾನ ತರಬೇಕು’’ ಅಂದಳು. ಅವರಿಗೆ ಆಕೆಯನ್ನು ಬಿಡಲು ಮನಸ್ಸಿಲ್ಲ.
‘‘ಅವ್ವ ಕಾಯ್ತಾ ಇರತಾಳ. ಹೋಗ್ತೀನಿ. ರಾತ್ರಿ ನಾಟಕಕ್ಕ ಬರ್ರಿ. ಮುಂದಿನ ಸೀಟಿನ್ಯಾಗ ಕೂಡ್ರಿ’’ ಎಂದಳು. ಅವರು ಎಲ್ಲದಕ್ಕೂ ‘ಹೂಂ’ ಅಂದರು.
‘‘ಈ ಬ್ರೆಡ್, ಬಿಸ್ಕತ್, ಹಣ್ಣು ಯಾರು ಕೊಡಿಸಿದ್ದು ಅಂತ ಅವ್ವ ಕೇಳ್ತಾಳ. ನೀವು ಯಾರು? ನಿಮ್ಮ ಹೆಸರೇನು? ಹೇಳ್ರಿ’’ ಕೇಳಿದೆ. ಅದಕ್ಕೆ ಅವರು ‘‘ನಾನೂ ನಾಟಕ ಕಂಪೆನಿ ಮಾಲಕ. ನಿನ್ನ ಅವ್ವ ಮೆಳ್ಳಿಗೆ ಹೇಳು ಇಂಥವ್ರ ಕೊಡಿಸಿದ್ದಾರೆ’’ ಎಂದು. ಬಾಲಕಿಯ ಅವ್ವನ ಕಣ್ಣು ಮೆಳ್ಳಗಣ್ಣಿದ್ದು, ಎಲ್ಲರಿಗೂ ಗೊತ್ತಿರುವ ವಿಷಯ. ಅದನ್ನು ಅವರು ಡಾಕ್ಟರ್ ಎದುರು ತನ್ನ ಅವ್ವಳನ್ನು ಹೀಯಾಳಿಸುವ ರೀತಿ ಹೇಳಿದರು ಎಂದು ಅನ್ನಿಸಿ ಅವರು ಕೊಡಿಸಿದ ಹಣ್ಣು, ಬ್ರೆಡ್, ಬಿಸ್ಕತ್, ಪೆಪ್ಪರ್‌ಮೆಂಟ್ ಎಲ್ಲ ಕಹಿ ಅನ್ನಿಸಿದವು. ‘‘ಪ್ರೀತಿಯಿಂದ ಮಾತಾಡಿ, ಇದನ್ನೆಲ್ಲ ಕೊಡಿಸಿ ನನ್ನವ್ವನಿಗೆ ಮೆಳ್ಳಗಣ್ಣು ಅಂತ ತಮಾಷೆ ಮಾಡ್ತೀರಿ? ನೀವು ಕೊಡಿಸಿದ್ದು ನೀವೇ ತಿನ್ನಿ’’ ಎಂದು ಎಲ್ಲ ಅಲ್ಲೇ ಬಿಸಾಕಿ ಔಷಧಿ ಬಾಟಲಿ, ಮಾತ್ರೆಗಳನ್ನು ಮಾತ್ರ ತೆಗೆದುಕೊಂಡು ಹೊರಟಳು. ಅವರು ‘‘ಮಗು... ಮಗು...’’ ಎಂದು ಕರೆದರೂ ತಿರುಗಿ ಸಹ ನೋಡದೆ ಅಳುತ್ತ ಓಡಿ ಮನೆಗೆ ಹೋದಳು. ಮನೆಗೆ ಹೋದರೂ ಅಳು ನಿಂತಿರಲಿಲ್ಲ. ಆಕೆಯ ತಾಯಿಗೆ ಗಾಬರಿಯಾಗಿ ‘‘ಯಾಕ? ಏನಾಯ್ತು? ಯಾರು ಏನಂದ್ರು ಹೇಳು?’’ ಕೇಳಿದಳು.
‘‘ಅವ್ವ, ಬಡವರಾಗಿ ಹುಟ್ಟಬಾರದವ್ವ. ಯಾರೋ ನಾಟಕ ಕಂಪೆನಿ ಮಾಲಕನಂತ. ಮೊದಲು ಎಷ್ಟು ಪ್ರೀತಿಯಿಂದ ಮಾತಾಡಿ ಹಣ್ಣು, ಬ್ರೆಡ್, ಬಿಸ್ಕತ್ ಕೊಡಿಸಿದ್ರು. ವಾಪಸ್ ಬರುವಾಗ ನಿನಗ ಅದೂ ಡಾಕ್ಟರ್ ಎದುರು ಮೆಳ್ಳಿ ಅಂದ. ಬೇಜಾರಾಗಿ ಅಳ್ತಾ ಬಂದೆ’’ ಎಂದೆ.
ಬಾಲಕಿಯ ತಾಯಿಯ ಮುಖವೇ ಬದಲಾಯಿತು. ಆದರೂ ಆಕೆಗೆ ಸಮಾಧಾನ ಮಾಡ್ತಾ ‘‘ನೀನು ಹುಟ್ಟುವುದಕ್ಕೆ ಮುಂಚೆ ಅವರ ಕಂಪೆನಿಯಲ್ಲಿ ಪಾತ್ರ ಮಾಡ್ತಾ ಇದ್ದೆ. ಆಗಲೂ ಹಾಗೆ ಕರಿತಾ ಇದ್ರು. ನಿನ್ನ ಅವ್ವನ ಕಣ್ಣು ಮೆಳ್ಳಗಣ್ಣು ಇರೋದು ಸತ್ಯ ತಾನೆ? ಸತ್ಯವನ್ನು ಯಾರು ಹೇಳಿದ್ರೂ ನಾವು ಒಪ್ಪಿಕೊಳ್ಳಬೇಕು. ಎಷ್ಟೇ ಆಗಲಿ ಅವರು ಮಾಲಕರು’’ ಎಂದಳು.
ಅದಕ್ಕೆ ‘‘ಮಾಲಕರಾದರೇನು? ನೀನು ದುಡಿತಿಯಾ ಅವನು ಪಗಾರ ಕೊಟ್ಟಾನ’’ ಅಂದಳು ಬಾಲಕಿ.
‘‘ಹಿರಿಯರಿಗೆ ಹಾಗೆ ಮಾತನಾಡಬಾರದು. ಅವರು ನನಗೆ ಪಾತ್ರ ಹೇಳಿಕೊಟ್ಟವರು. ಅವರಿಗೆ ನನ್ನ ಹೊಡೆಯುವ ಹಕ್ಕಿದೆ. ಮೆಳ್ಳಗಣ್ಣು ಅಂದದ್ದು ಏನು ಮಹಾ ಅಲ್ಲ. ನೀನು ಅದನ್ನೆಲ್ಲ ಮನಸ್ಸಿಗೆ ಹಚ್ಚಿಕೊಳ್ಳಬೇಡ’’ ಸಮಾಧಾನ ಮಾಡಿ ಬೋರ್ಡಿಂಗ್‌ಗೆ ಊಟ ತರಲು ಕಳಿಸಿದಳು. ಆದರೂ ಬಾಲಕಿಯಲ್ಲಿ ಅವರು ಅಂದಿದ್ದು ಕೊರೆಯುತ್ತಿತ್ತು.
ರಾತ್ರಿ ಎಂದಿನಂತೆ ನಾಟಕವಿತ್ತು. ಬಾಲಕಿಯ ಪ್ರವೇಶವಾದೊಡನೆ ಎದುರು ನಗುತ್ತಾ ಕುಳಿತಿದ್ದ ಆ ವ್ಯಕ್ತಿಯನ್ನು ಕಂಡಳು. ಆದರೆ ಆಕೆಗೆ ನಗು ಬರಲಿಲ್ಲ. ತಕ್ಷಣ ಅವರಿಗೆ ಬೆನ್ನು ಹಾಕಿ ಮಾತು ಹೇಳಿದಳು. ಆ ದೃಶ್ಯ ಮುಗಿಸಿ ಒಳಗೆ ಬಂದವಳೇ ‘‘ಅವ್ವಾ, ನಿನಗ ಮೆಳ್ಳಗಣ್ಣು ಅಂದ ಕಂಪೆನಿ ಮಾಲಕರು ನಾಟಕ ನೋಡಾಕ ಬಂದಾರ. ನನ್ನ ನೋಡಿ ನಕ್ರು. ನಾನು ಬೆನ್ನು ಹಾಕಿ ಪಾತ್ರ ಮಾಡಿದೆ’’ ಎಂದಳು. ಆಕೆಯ ತಾಯಿ ನಕ್ಕು ಸುಮ್ಮನಾದರು.
ಆಗ ಕಂಪೆನಿಯ ಕಲಾವಿದೆಯರೆಲ್ಲ ಸೇರಿ ಬಾಲಕಿಯ ತಾಯಿಯ ಜತೆ ಏನೋ ಚರ್ಚೆ ಮಾಡುತ್ತಿದ್ದರು. ಆಕೆಯ ತಾಯಿ ಅಳುತ್ತಿದ್ದಳು. ಬಾಲಕಿ ಹೋದ ತಕ್ಷಣ ಸುಮ್ಮನಾಗುತ್ತಿದ್ದಳು. ಏನೋ ನಡೆಯುತ್ತಾ ಇದೆ. ಅದನ್ನು ಅರ್ಥ ಮಾಡಿಕೊಳ್ಳುವ ವಯಸ್ಸು ಬಾಲಕಿಯದಲ್ಲ. ಅಷ್ಟರಲ್ಲಿ ಬಾಲಕಿಯನ್ನು ಕಲಾವಿದೆಯೊಬ್ಬರು ಕರೆದು ‘‘ನೋಡು ಮರಿ, ನಿನಗೆ ನಿನ್ನ ತಂದೆಯನ್ನು ನೋಡಬೇಕು, ಮಾತನಾಡಿಸಬೇಕು ಅನ್ನೋ ಆಸೆ ಇದೆಯಾ?’’ ಕೇಳಿದರು. ಹುಟ್ಟಿದಾಗಿನಿಂದ ಅಪ್ಪನ ಮುಖ ನೋಡಿಲ್ಲ. ಆದರೆ ಅಪ್ಪನನ್ನು ನೋಡಬೇಕು, ಮಾತಾಡಿಸಬೇಕು ಅನ್ನೋ ಆಸೆ ಸುಪ್ತವಾಗಿ ಮನಸ್ಸಿನಲ್ಲಿ ಬೇರು ಬಿಟ್ಟಿತ್ತು. ಅಪ್ಪ ಬದುಕಿದ್ದಾನಾ? ಸತ್ತಿದ್ದಾನಾ? ಈ ಪ್ರಶ್ನೆ ಯಕ್ಷಪ್ರಶ್ನೆಯಾಗಿ ಕಾಡುತ್ತಿತ್ತು. ಕೇಳಿದರೆ ಅವ್ವ ಎಂದೂ ಸರಿ ಉತ್ತರ ಕೊಟ್ಟಿರಲಿಲ್ಲ. ಹಟ ಮಾಡಿ ಕೇಳಿದಾಗ, ‘‘ಬದುಕಿದ್ದಾರೆ ನಮ್ಮ ಪಾಲಿಗೆ ಸತ್ತಿದ್ದಾರೆ’’ ಎಂದು ಹೇಳಿದ ನೆನಪಿತ್ತು. ಅಪ್ಪ ಯಾರು? ಅವರ ಹೆಸರೇನು? ಎಲ್ಲಿ ಇದ್ದಾರೆ? ಹೇಗಿದ್ದಾರೆ? ಇದೆಲ್ಲ ಎಂಟು ವರ್ಷದ ಹುಡುಗಿಯಾದರೂ ತಿಳಿದಿರಲಿಲ್ಲ. ಅವ್ವ ಎಷ್ಟೇ ಪ್ರೀತಿ ತೋರಿದರೂ ಅಪ್ಪಾ ಎನ್ನುವ ಕಂದಕ ತುಂಬಿರಲಿಲ್ಲ. ಈಗ ಎಲ್ಲರೂ ಸೇರಿ ‘‘ನಿನ್ನ ಅಪ್ಪನನ್ನು ನೋಡಬೇಕಾ? ಮಾತಾಡಬೇಕಾ?’’ ಅಂದರೆ ‘‘ಹೌದು, ಒಂದು ಸಾರಿ ನೋಡುವ ಆಸೆ ಇದೆ’’ ಅಂದಳು.
‘‘ಮುಂದೆ ಕೂತಿದ್ದಾರಲ್ಲ, ಬೆಳಗ್ಗೆ ಡಾಕ್ಟರ್ ಆಸ್ಪತ್ರೆಯಲ್ಲಿ ಸಿಕ್ಕಿದ್ದರಲ್ಲ ಅವರೇ ನಿನ್ನ ಅಪ್ಪ’’ ಎಂದಳು ಕಲಾವಿದೆ.
ಆಸ್ಪತೆಯಲ್ಲಿ ಸಿಕ್ಕಾಗ ಪ್ರೀತಿ ತೋರಿಸಿದ ಕಾರಣವು ಬಾಲಕಿಗೆ ಅರ್ಥ ಆಗತೊಡಗಿತು. ಬೆನ್ನು ತೋರಿಸಿ ಪಾತ್ರ ಮಾಡಿದ ಆಕೆ, ಸೈಡ್‌ವಿಂಗ್ ಪರದೆ ಸರಿಸಿ ಒಂದೇ ಕಣ್ಣಿನಲ್ಲಿ ಅವರ ಮುಖ ಕದ್ದು ನೋಡುತ್ತ ಹಾಗೆ ನಿಂತಳು. ಅಪ್ಪನ ಪ್ರತಿ ರೂಪ ಆಕೆ. ಯಾವ ಸಾಕ್ಷಿಯೂ ಬೇಡ. ನಾಟಕ ಬಿಡುವ ತನಕ ಆ ಪರದೆ ಬಿಟ್ಟು ಸರಿಯಲಿಲ್ಲ. ನಾಟಕ ಮುಗಿದ ಮೇಲೆ ಎಲ್ಲರೂ ‘‘ನಿನ್ನ ಅಪ್ಪನನ್ನು ಮನೆಗೆ ಬಾ ಅಂತ ಕರಿ’’ ಎಂದು ಹೇಳಿಕೊಟ್ಟರು. ಅವರು ಕಾರು ತಂದಿದ್ದರು. ಕಾರಿಗೆ ಒರಗಿ ಛತ್ರಿ ಹಿಡಿದು ನಿಂತೇ ಇದ್ದರು. ಅವ್ವ ಬಂದು ಮಾತನಾಡಲೆಂದು. ಹಟಮಾರಿ ಅವ್ವ ಮನೆ ದಾರಿ ಹಿಡಿದಳು. ಅವಳು ಬಾಲಕಿಯ ಕೈ ಹಿಡಿದು ಎಳೆದುಕೊಂಡು ಸ್ವಲ್ಪ ದೂರ ಹೋಗಿರಲಿಲ್ಲ, ಬಾಲಕಿ ಕೈ ಬಿಡಿಸಿಕೊಂಡವಳೇ ಓಡಿ ಹೋಗಿ ಅವರ ಎದುರು ನಿಂತಳು.
‘‘ಅಪ್ಪಾ...’’ ಅನ್ನುವ ಆಸೆ ಕುತ್ತಿಗೆ ತನಕ ಇದ್ದರೂ ಅಷ್ಟು ವರ್ಷ ಅನ್ನಲಾರದ ಶಬ್ದ. ಸಂತೋಷ, ನಾಚಿಕೆ, ಮುಜುಗರ ಎಲ್ಲ ಒಟ್ಟಿಗೆ ಬಂದು ಸುಮ್ಮನೆ ನಿಂತಳು.
‘‘ಏನಮ್ಮಾ?’’ ಕೇಳಿದರು.
‘‘ಮುಂಜಾನೆ ಮನಿಗೆ ಬರ್ರಿ’’ ಎಂದು ವಿಳಾಸ ಹೇಳಿ ಓಡಿ ಹೋದಳು. ಅವರು ಆಕೆಯ ಅವ್ವ ಹಾಗೆ ಹೇಳಿ ಕಳಿಸಿರಬಹುದು ಎಂದು ತಿಳಿದರು. ಆಕೆಗೆ ರಾತ್ರಿ ನಿದ್ದೆಯೇ ಇಲ್ಲ. ಬೆಳಗ್ಗೆ ಆರು ಗಂಟೆಗೆ ಎದ್ದು ಬಾಗಿಲ ಮುಂದೆ ಕುಳಿತಳು. ತನ್ನ ಅಪ್ಪನಿಗೆ ಮನೆ ಗುರುತು ಸಿಗದೆ ಹಾಗೆ ಹೋಗಿಬಿಡುತ್ತಾರೇನೋ ಎಂದು ಗೆಳತಿಯರಿಗೆ, ಅಕ್ಕಪಕ್ಕದವರಿಗೆ ಹೇಳಿದಳು. ತನಗೂ ಅಪ್ಪ ಇದ್ದಾರೆ ಎನ್ನುವ ಖುಷಿ. ಅಂತೂ ಅಪ್ಪ ಬಂದರು. ಓಡಿ ಹೋಗಿ ಕೈ ಹಿಡಿದು ಕರೆದುಕೊಂಡು ಮನೆ ಒಳಗೆ ಹೋದಳು. ಅಜ್ಜಿಯ ಪಕ್ಕದಲ್ಲಿ ಕುಳಿತರು. ಹಾಲು ತರಲು ಅವ್ವ ಕಳಿಸಿದಳು. ಹಾಲು ತರುವಷ್ಟರಲ್ಲಿ ವಾತಾವರಣ ತಿಳಿಯಾಗಿತ್ತು. ಮಾತಿನ ನಡುವೆ ಅಪ್ಪ ‘‘ನನ್ನ ಮಗಳನ್ನು ಕಳಿಸಿಕೊಡು’’ ಅಂದರು.
‘‘ಬಂದ್ರ ಕರಕೊಂಡು ಹೋಗ್ರಿ’’ ಅಂದಳು ಅವ್ವ. ತನ್ನನ್ನು ಬಿಟ್ಟು ಮಗಳು ಹೋಗುವುದಿಲ್ಲ ಎನ್ನುವ ಗಟ್ಟಿ ನಂಬಿಕೆಯಿಂದ.
‘‘ಬರ್ತೀಯಾ ಮಗಳೆ?’’ ಅಪ್ಪ ಕೇಳುವುದೇ ತಡ ‘‘ಬರ್ತೀನಿ ಅಪ್ಪಾ’’ ಅಂದಳು. ಇದನ್ನು ತಾಯಿ ನಿರೀಕ್ಷಿಸಿರಲಿಲ್ಲ. ಬಹಳ ಆಘಾತ ಆದವಳಂತೆ ‘‘ಅಪ್ಪ ಆದರೇನು? ಒಂದು ದಿನ ಬಂದು ಪ್ರೀತಿ ತೋರಿಸಿದ ತಕ್ಷಣ ಇಷ್ಟು ವರ್ಷ ಜೋಪಾನ ಮಾಡಿದ ನನ್ನ ಬಿಟ್ಟು ಅವರ ಜತೆ ಹೋಗ್ತೀಯಾ? ಅಪ್ಪನ ನೀಚ ಗುಣ ನಿನ್ನಲ್ಲೂ ಇದೆ. ನನ್ನ ಬಿಟ್ಟು ಇರೋದಕ್ಕೆ ನಿಂಗೆ ಮನಸ್ಸಾದರೂ ಹೆಂಗೆ ಬರುತ್ತೆ?’’ ಅವ್ವ ಕೇಳಿದಳು.
‘‘ನೋಡವ್ವ, ಅಪ್ಪನದು ಸ್ವಂತ ಕಂಪೆನಿ ಐತಿ. ಇಲ್ಲಿ ಇದ್ರ ಬರೀ ಸಖಿ ಪಾತ್ರ ಮಾಡಬೇಕಾಗ್ತದ. ಅಲ್ಲಿ ಹಾಗಲ್ಲ. ಅದಕ್ಕ ಹೋಗ್ತೀನಿ’’ ಅಂದಳು. ಹಾಗೆಂದು ತಕ್ಷಣ ಹೋಗುವ ಹಾಗಿರಲಿಲ್ಲ. ಎಲ್ಲ ನಾಟಕಗಳಲ್ಲಿ ಬಾಲಪಾತ್ರ ಆಕೆಯದೆ.
‘‘ಕಂಪೆನಿ ಮಾಲಕರಿಗೆ ಹೇಳಿ ಮುಂದಿನ ಕ್ಯಾಂಪಿಗೆ ಕಳಸ್ತೀನಿ, ಈಗ ಬೇಡ’’ ಎಂದು ಅವ್ವ ಹೇಳಿದಳು.
ಮಧ್ಯಾಹ್ನ ಊಟ ಮುಗಿಸಿ ಅಪ್ಪ ಹೊರಡುವ ಮುನ್ನ ‘‘ಮಗಳೇ, ನಿನಗೆ ಏನು ಬೇಕು? ಏನು ಕೊಡಿಸಿ ಹೋಗಲಿ ಹೇಳು?’’ ಕೇಳಿದರು.
‘‘ನಿಮ್ಮ ಹತ್ರ ದೌಡ ಕರೆಸಿಕೊಳ್ಳಿ ಸಾಕು’’ ಅಂದಳು.
‘‘ಮುಂದ ಬರುವಿಯಂತೆ. ಈಗ ಸದ್ಯ ಏನು ಕೊಡಿಸಲಿ ಹೇಳು’’ ಒತ್ತಾಯ ಮಾಡಿದರು.
‘‘ಏನೂ ಬೇಡ. ನಿಮ್ಮ ನೆನಪಿಗೆ ಈ ಛತ್ರಿ ಕೊಟ್ಟುಹೋಗ್ರಿ’’ ಅಂದಳು.
‘‘ನಿನಗಿಂತ ಅದು ದೊಡ್ಡದಾಗಿದೆ. ಬೇಕಾದರೆ ಸಣ್ಣ ಛತ್ರಿ ಕೊಡಿಸಲಾ?’’ ಕೇಳಿದರು.
‘‘ಬೇಡ, ಅದು ಅಪ್ಪನ ಛತ್ರಿ ಅಲ್ಲ. ಅಂಗಡಿ ಛತ್ರಿ ಆಗ್ತದ. ನನಗ ಇದ ಬೇಕು’’ ಹಟ ಮಾಡಿದಳು.
‘‘ಸರಿ’’ ಎಂದು ಕೊಟ್ಟು ‘‘ನಮ್ಮ ಕಂಪೆನಿ ಇಂಥಲ್ಲಿದೆ, ಬಾ’’ ಎಂದು ಹೇಳಿ ಹೋದರು.
ಆ ದೊಡ್ಡ ಛತ್ರಿಯನ್ನು ಆ ಬಾಲಕಿ ಎಷ್ಟು ಪ್ರೀತಿಸುತ್ತಿದ್ದ ಳೆಂದರೆ ಒಂದು ದಿನ ಆಕೆಯ ಅವ್ವ ಥಿಯೇಟರಿನಲ್ಲಿ ಇಟ್ಟು ಮರೆತುಬಂದಿದ್ದಳು. ಸಂಜೆ ನೆನಪಾಗಿ ‘ತಗೊಂಡು ಬಾ’ ಎಂದು ಕಳಿಸಿದಳು. ಬರುವಾಗ ಬೆಳದಿಂಗಳ ಬೆಳಕಿತ್ತು. ಮಳೆ ಇಲ್ಲ, ಬಿಸಿಲಿಲ್ಲ. ಅಪ್ಪನ ಛತ್ರಿ ಎಂದು ಖುಷಿಯಿಂದ ಮೇಲೆ ಏರಿಸಿದಳು. ಇಳಿಸಲು ಬರ್ತಾ ಇಲ್ಲ. ಹಾಗೇ ಹಿಡಿದುಕೊಂಡಿದ್ದಳು. ದಾರಿಯಲ್ಲಿ ಹೋಗೋರು, ಬರೋರು ನಗುತ್ತಿದ್ದಾರೆ. ವಯಸ್ಸಾದವರೊಬ್ಬರು ಕೇಳಿದರು ‘‘ಮಗು, ಮಳೆ ಇಲ್ಲ, ಬಿಸಿಲಿಲ್ಲ. ಯಾಕೆ ಛತ್ರಿ ಹಿಡಿದಿದ್ದೀಯಾ?’’
‘‘ಅದು ನನಗೂ ಗೊತ್ತು. ಇದು ನನ್ನ ಅಪ್ಪನ ಛತ್ರಿ. ಏರಿಸಿಬಿಟ್ಟೆ. ಇಳಸಲಿಕ್ಕೆ ಬರ್ತಾ ಇಲ್ಲ’’ ಅಂದಳು. ಅವರು ನಕ್ಕು ಇಳಿಸಿಕೊಟ್ಟಾಗ ಮನೆಗೆ ತೆರಳಿದಳು.
‘‘ಬಾಲ್ಯದಲ್ಲಿ ತಾಯಿಯನ್ನು, ತಂದೆಯನ್ನು ಕಳೆದುಕೊಂಡರೆ ಪರದೇಶಿ ಅನ್ನುತ್ತಾರೆ. ತಾಯಿ ಪ್ರೀತಿ ಇದ್ದು, ತಂದೆ ಪ್ರೀತಿ ಇರದಿದ್ದರೆ? ಅರ್ಧ ಪರದೇಶಿ...’’
ಹೀಗೆ ಆ ಕಲಾವಿದರು ಹೇಳಿ ಮಾತು ನಿಲ್ಲಿಸಿದಾಗ, ನನ್ನಿಂದ ಮಾತೇ ಹೊರಡಲಿಲ್ಲ. ಅಪ್ಪ ಯಾರೆಂದು ಗೊತ್ತಿರದವರು ಅನೇಕರು. ತನ್ನ ಅಪ್ಪ ಯಾರೆಂದು ಗೊತ್ತಿದ್ದರೂ ಸಾರ್ವಜನಿಕವಾಗಿ ಕರೆಯಲಾಗದ ಅಸಹಾಯಕ ಸ್ಥಿತಿ ಕೆಲವರದು.