ಶೇಖರ್‌ಗೆ ‘ಹೂಲಿ ರಂಗ ಶಿಖರ’
ಹಿರಿಯ ರಂಗಕರ್ಮಿ ಹೂಲಿ ಶೇಖರ ಅವರು ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿಯ ಕೊಂಡಿ. ವೃತ್ತಿ ರಂಗಭೂಮಿಯ ನಾಟಕಗಳನ್ನು ನೋಡುತ್ತ ಬೆಳೆದ ಅವರು, ಆಮೇಲೆ ಹವ್ಯಾಸಿ ರಂಗಭೂಮಿಯತ್ತ ಹೊರಳಿದರು. ಅಲ್ಲಿಂದ ಧಾರಾವಾಹಿಗಳಿಗೆ ಸಂಭಾಷಣೆಗಳನ್ನು ಬರೆದರು. ನಾಡಿದ್ದು ಅಂದರೆ ರವಿವಾರ ಅವರಿಗೆ ರಂಗಾಭಿನಂದನೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ಶೇಖರ ಅವರ ಊರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ (ಜನನ: 1.6.1951). ಅಲ್ಲಿಯೇ ಪ್ರಾಥಮಿಕ ಶಾಲೆಯಲ್ಲಿ ಓದು. ಅವರ ತಂದೆ ಬಸಪ್ಪ ದೊಡ್ಡಾಟ, ಸಣ್ಣಾಟಗಳ ಕಲಾವಿದರು. ಅವರ ಪ್ರಭಾವದಿಂದ ಸಣ್ಣಾಟಗಳಿಗೆ ಶೇಖರ ಅವರೂ ಬಣ್ಣ ಹಚ್ಚಿದರು. ಆಮೇಲೆ ಜಾತ್ರೆ, ಉತ್ಸವಗಳಲ್ಲಿ ಅವರ ಊರಲ್ಲಾಗುತ್ತಿದ್ದ ನಾಟಕಗಳನ್ನು ನೋಡಿ ಪ್ರಭಾವಿತರಾದರು. ಜೊತೆಗೆ ಪಿ.ಬಿ.ಧುತ್ತರಗಿ ಅವರ ‘ತಾಯಿಕರುಳು’ ನಾಟಕದಲ್ಲಿ ಬಣ್ಣ ಹಚ್ಚಿದರು. ಕೆಳದಿ ‘ಚೆನ್ನಮ್ಮ ನಾಟಕ’ದಲ್ಲಿ ಚೆನ್ನಮ್ಮಳ ಪಾತ್ರ ನಿರ್ವಹಿಸಿದರು. ಆರನೇ ತರಗತಿಯಲ್ಲಿ ಓದುವಾಗಲೇ ‘ಬಡತನದ ಭೂತ’ ನಾಟಕ ರಚಿಸಿದರು. ಇದನ್ನು ಅವರ ಶಿಕ್ಷಕರು ಆಡಿಸಿದರು. ಆಮೇಲೆ ಬೆಳಗಾವಿಯಲ್ಲಿದ್ದು ಹೈಸ್ಕೂಲಿನಲ್ಲಿ ಓದುವಾಗ ಏಣಗಿ ಬಾಳಪ್ಪ ಅವರ ಕಲಾವೈಭವ ನಾಟ್ಯ ಸಂಘದ ನಾಟಕಗಳನ್ನು ನೋಡಿದರು. ಒಂಭತ್ತನೆಯ ತರಗತಿಯಲ್ಲಿ ಓದುವಾಗ ‘ಜೈ ಜವಾನ್ ಜೈ ಕಿಸಾನ್’ ನಾಟಕ ರಚಿಸಿದರು. ಇದನ್ನು ಕವಿಗಳಾದ ಎಸ್.ಡಿ. ಇಂಚಲ ಅವರು ಪ್ರಕಟಿಸಿದರು. ಹೀಗೆ ಓದಿನೊಂದಿಗೆ ನಾಟಕದ ನಂಟು ಬೆಳೆಯಿತು. ಬಿ.ಎ. ಪದವಿ ಪಡೆದ ನಂತರ ಕರ್ನಾಟಕ ವಿದ್ಯುತ್ ನಿಗಮದಲ್ಲಿ 32 ವರ್ಷಗಳವರೆಗೆ ವಿವಿಧ ಹುದ್ದೆಗಳನ್ನು ನಿರ್ವಹಿಸಿ ನಿವೃತ್ತರಾದರು. ಉತ್ತರ ಕನ್ನಡ ಜಿಲ್ಲೆಯ ಸೂಫಾದಲ್ಲಿದ್ದಾಗ ದಾಂಡೇಲಿಗೆ ಬಂದ ಸೂಡಿಯ ಭಾರತಿ ನಾಟ್ಯ ಸಂಘದ ಮಾಲಕರನ್ನು ಭೇಟಿಯಾಗಿ ‘ನಿರಪರಾಧಿ ಕಳ್ಳ’ ನಾಟಕವನ್ನು ಕೊಟ್ಟರು. ನಾಟಕ ಆಡಿಸುವ ಭರವಸೆ ಸಿಕ್ಕಿತು. ಆಮೇಲೆ ಆ ಕಂಪೆನಿ ಬೇರೆ ಊರಿಗೆ ಹೋಯಿತು. ನಾಟಕದ ಬೇರೊಂದು ಪ್ರತಿ ಇರಲಿಲ್ಲ. ಆಮೇಲೆ ‘ವೀರಕೇಸರಿ ಅಮಟೂರು ಬಾಳಪ್ಪ’ ನಾಟಕವನ್ನು ಬೈಲಹೊಂಗಲ ತಾಲೂಕಿನ ಅಮಟೂರು ಗ್ರಾಮದಲ್ಲಿ ಆಡಿಸಿದರು. ಈ ಅಮಟೂರು ಬಾಳಪ್ಪ ಎಂದರೆ ಕಿತ್ತೂರು ಚೆನ್ನಮ್ಮನ ಭಂಟ. ದೊಡ್ಡ ಗುರಿಕಾರ ಜೊತೆಗೆ ಥ್ಯಾಕರೆಯನ್ನು ಕೊಂದವನು. ನಂತರ ಅವರು ಬರೆದ ‘ಮೌನತಪಸ್ವಿ’ ನಾಟಕವನ್ನು ಕಂಪೆನಿಯೊಂದು ಹೊಸಪೇಟೆಯಲ್ಲಿ ಆಡಿತು. ಹೀಗೆ ಗ್ರಾಮೀಣ ರಂಗಭೂಮಿ ಹಾಗೂ ವೃತ್ತಿ ರಂಗಭೂಮಿ ನೋಡುತ್ತಿದ್ದ ಅವರು, ಹವ್ಯಾಸಿ ರಂಗಭೂಮಿಯತ್ತ ಹೊರಳಿದರು. ಬೆಂಗಳೂರಿನ ರಂಗಸಂಪದ ತಂಡವು ಏರ್ಪಡಿಸಿದ ನಾಟಕ ರಚನಾ ಸ್ಪರ್ಧೆಗೆ ‘ಕಲ್ಯಾಣದಲ್ಲೊಂದು ಕ್ರಾಂತಿ’ ನಾಟಕವನ್ನು ಶೇಖರ ಕಳಿಸಿಕೊಟ್ಟರು. ಇದಕ್ಕೆ ಮೂರನೆಯ ಬಹುಮಾನ ಬಂತು. ಮರುವರ್ಷ ‘ಬಂಟ ಅಮಟೂರು ಬಾಳಪ್ಪ’ ಎಂಬ ಸಣ್ಣಾಟ ರೂಪದ ನಾಟಕವನ್ನು ರಂಗಸಂಪದದ ನಾಟಕ ರಚನಾ ಸ್ಪರ್ಧೆಗೆ ಕಳಿಸಿದಾಗ ಮೊದಲ ಬಹುಮಾನ ಬಂತು. ಕಾಸರಗೋಡಿನ ಯವನಿಕಾ ತಂಡವು ಏರ್ಪಡಿಸಿದ ನಾಟಕ ರಚನಾ ಸ್ಪರ್ಧೆಯಲ್ಲಿ ಶೇಖರ ಅವರ ‘ಹಾವು ಹರಿದಾಡತಾವ’ ನಾಟಕಕ್ಕೆ ಮೊದಲ ಬಹುಮಾನ ಬಂತು. ಈ ನಾಟಕವನ್ನು ಬಿ.ಜಯಶ್ರೀ ಅವರು ಮೈಸೂರಿನ ಅಮರಕಲಾ ಸಂಘಕ್ಕೆ ನಿರ್ದೇಶಿಸಿದರು. ಹೀಗೆಯೇ ಶರಣ ಸಾಹಿತ್ಯ ಪರಿಷತ್ತು ಏರ್ಪಡಿಸಿದ ನಾಟಕ ರಚನಾ ಸ್ಪರ್ಧೆಯಲ್ಲಿ ಶೇಖರ ಅವರ ‘ಸುಳಿವಾತ್ಮ ಎನ್ನೊಳಗೆ’ ನಾಟಕವು ಮೊದಲ ಬಹುಮಾನ ಪಡೆಯಿತು.
ಹೀಗಿದ್ದಾಗ ಉತ್ತರ ಕನ್ನಡ ಜಿಲ್ಲೆಯ ಅಂಬಿಕಾನಗರದಲ್ಲಿ ಜೋಕುಮಾರಸ್ವಾಮಿ ಕಲಾ ಬಳಗವನ್ನು ಕಟ್ಟಿ, ಅದರ ಅಧ್ಯಕ್ಷರಾದರು. ಬಳಿಕ ಬೀದಿನಾಟಕಗಳನ್ನು ರಚಿಸಿದರು. ರಂಗಶಿಬಿರಗಳನ್ನು, ನಾಟಕೋತ್ಸವವನ್ನು ಆಯೋಜಿಸಿದರು. ಅಲ್ಲದೆ ರಾಕ್ಷಸ, ಗುದಮುರಗಿ, ಉರಿಮಾರಿ, ಕಲ್ಯಾಣದಲ್ಲಿ ಒಂದು ಕ್ರಾಂತಿ, ಹಲಗಲಿ ಬೇಡರು, ದಫನ್, ಬೆಕುವ, ಮಹಾನ್ ಭಾರತ, ದುರ್ಯೋಧನ, ಚಂಡಕ ಪಿಂಡಕ ಪುರಾಣ ಹೀಗೆ ನಲವತ್ತಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದರು. ನಾಯಿ, ಬೇಲಿ, ಕಳ್ಳಮಳ್ಳಿ, ಕರೆಂಟ್-ಕರೆಂಟ್, ನೀರು, ಮನೆ, ಮಿಂಚು, ಮಹಾಭಾರತ, ಅಆಇಈ ಅಕ್ಷರ, ಕುಡಿತ ಮೊದಲಾದ ಬೀದಿನಾಟಕಗಳು. ವಿದ್ಯುತ್ ಇಲಾಖೆಯ ಸುಧಾರಣಾ ಕ್ರಮಕ್ಕಾಗಿ ಅವರು ರಚಿಸಿದ ಬೀದಿನಾಟಕಗಳನ್ನು ಐದು ತಂಡಗಳು ರಾಜ್ಯದಾದ್ಯಂತ 700ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿವೆ. ಆರೋಗ್ಯ ಇಲಾಖೆ, ವಾರ್ತಾ ಇಲಾಖೆಗೆ ಅವರು ರಚಿಸಿದ ಬೀದಿನಾಟಕಗಳು ನೂರಾರು ಪ್ರದರ್ಶನಗಳನ್ನು ಕಂಡಿವೆ. ಆಕಾಶವಾಣಿಗೂ ಅವರು ನಾಟಕಗಳನ್ನು ರಚಿಸಿದ್ದಾರೆ. ಬಾಲಬಸವ, ಇಮ್ಮಡಿ ಪುಲಿಕೇಶಿ, ಟಿಪ್ಪು, ಭೂತ ಬಂತು ಭೂತ, ಅಕ್ಕಮಹಾದೇವಿ, ಶಿಶುನಾಳ ಶರೀಫ, ನರಗುಂದ ಬಂಡಾಯ, ಭಕ್ತಿ ಕರ್ನಾಟಕ ಮೊದಲಾದ ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ಸೆರಗಿನ ಕೆಂಡ, ಕದಡಿದ ಕೆರೆ, ಅವ್ವ, ಕಪ್ಪು ಕಡಲು, ಪಾತರದವರ ದಿಬ್ಬ, ಒಂದು ರಾತ್ರಿಯ ಪಯಣ, ಗುದಮುರಗಿ, ಜನುಮ ಜನುಮಕೂ ಕಾದಂಬರಿಗಳನ್ನು ರಚಿಸಿದ್ದಾರೆ. ಕೆಟ್ಟುಹೋದ ರಸ್ತೆಗಳು ಹಾಗೂ ಕಣ್ಣು ಅವರ ಪ್ರಕಟಿತ ಕಥಾಸಂಕಲನಗಳು.
ಇದರೊಂದಿಗೆ ಚಂದನ, ಉದಯ ಟಿವಿ, ಈಟಿವಿ, ಝೀ ಕನ್ನಡ, ಸುವರ್ಣ, ಕಸ್ತೂರಿ, ಕಾವೇರಿ ಮುಂತಾದ ವಾಹಿನಿಗಳ ಮಹಾ ಧಾರಾವಾಹಿಗಳಿಗೆ ಕತೆ-ಚಿತ್ರಕತೆ, ಸಂಭಾಷಣೆಕಾರರಾಗಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. ಅವುಗಳಲ್ಲಿ; ಮೂಡಲಮನೆ, ಮಹಾನವಮಿ, ಗೆಳತಿ, ಕಿಚ್ಚು, ಕಾವ್ಯಕಸ್ತೂರಿ, ಸೌಭಾಗ್ಯವತಿ, ಕಿನ್ನರಿ, ಕುಂತಿ, ಗಂಗಾ. ಮೂಡಲಮನೆ ಧಾರಾವಾಹಿಯ ಸಂಭಾಷಣೆಗೆ ಶ್ರೇಷ್ಠ ಸಂಭಾಷಣೆಕಾರ ಎಂದು ಆರ್ಯಭಟ ಪ್ರಶಸ್ತಿ ಪುರಸ್ಕತರಾಗಿದ್ದಾರೆ. ಕೆಲವು ವರ್ಷ ಕಸ್ತೂರಿ ವಾಹಿನಿಯಲ್ಲಿ ಫಿಕ್ಷನ್ ಹೆಡ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ರಾಜ್ಯ ವಾರ್ತಾ ಇಲಾಖೆಗೆ ಉತ್ತರ ಕನ್ನಡ ಜಿಲ್ಲೆಯ ಗೌಳಿಗರ ಕುರಿತು ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಚಂದನದಲ್ಲಿ ಪ್ರಸಾರವಾಗಿವೆ. ಏನೇ ಇದ್ದರೂ ಅವರ ಒಲವು-ನಿಲುವು ರಂಗಭೂಮಿಯೇ.
ಇಂಥ ಶೇಖರ ಅವರಿಗೆ ಈಗ 73 ವರ್ಷ ವಯಸ್ಸು. ಮೂರು ವರ್ಷಗಳ ಹಿಂದೆಯೇ ಅವರ ಎಪ್ಪತ್ತನೆ ವಯಸ್ಸಿಗೆ ಅಭಿನಂದನ ಗ್ರಂಥ ಪ್ರಕಟವಾಗಿ, ಅವರಿಗೆ ಗೌರವ ಸಲ್ಲಬೇಕಿತ್ತು. ಆದರೆ ಅವರಿಗೆ ಎರಡು ವರ್ಷ ಅನಾರೋಗ್ಯ ಕಾಡಿತ್ತು. ಇದೀಗ ಅವರ ಕುರಿತ ಅಭಿನಂದನೆಯ ಗ್ರಂಥ ಬಿಡುಗಡೆಗೊಳ್ಳುವಾಗ ಅವರ ರಂಗ ಗೆಳೆಯರು ಖುಷಿಯಲ್ಲಿದ್ದಾರೆ.