ಜವಾರಿ ಕಲಾವಿದರ ಜವಾರಿಯ ‘ತಿಂಡಿಗೆ ಬಂದ ತುಂಡೇರಾಯ’
ಅದು ಬ್ರೆಕ್ಟ್‌ನ ನಾಟಕ ಆಧಾರಿತ. ಆದರೆ ಉತ್ತರ ಕರ್ನಾಟಕದ ಜವಾರಿ ಕಲಾವಿದರ ಜವಾರಿ ಮಾತಿನಿಂದ ದೇಸಿ ನಾಟಕವಾಗಿದೆ. ಅದು ‘ತಿಂಡಿಗೆ ಬಂದ ತುಂಡೇರಾಯ’ ನಾಟಕ. ಕಳೆದ ವಾರ (ನವೆಂಬರ್ 21) ರಾಯಚೂರಿನ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪ್ರದರ್ಶನಗೊಂಡ ಈ ನಾಟಕವನ್ನು ರಾಯಚೂರಿನ ಮುಖಾಮುಖಿ ರಂಗ ಸಂಸ್ಥೆಯ ಅಧ್ಯಕ್ಷ ವೇಣುಗೋಪಾಲ ಹಾಗೂ ಕಾರ್ಯದರ್ಶಿ ನಿರ್ಮಲಾ ದಂಪತಿ ಆಯೋಜಿಸಿದ್ದರು. ಈ ನಾಟಕವನ್ನು ಪ್ರಸ್ತುತಪಡಿಸಿದ್ದು ನಟ ಪ್ರಕಾಶ್ ರೈ ಅವರ ನಿರ್ದಿಗಂತ ತಂಡ.
ಜರ್ಮನ್ ನಾಟಕಕಾರ ಬರ್ಟೋಲ್ಡ್ ಬ್ರೆಕ್ಟ್‌ನ The resistible rise of arthuro ui ನಾಟಕವನ್ನು ಆಧರಿಸಿದೆ. ಅದು ಎರಡನೆಯ ವಿಶ್ವಯುದ್ಧಕ್ಕೂ ಮೊದಲು, ಜರ್ಮನಿಯಲ್ಲಿ ಹಿಟ್ಲರ್ ಮತ್ತು ನಾಝಿ ಪಕ್ಷದ ಬೆಳವಣಿಗೆಯ ಸಂಕೇತವಾಗಿ ಹುಟ್ಟಿದ ವಿಡಂಬನಾತ್ಮಕ ನಾಟಕ. ಈ ನಾಟಕದ ಎಲ್ಲಾ ಪಾತ್ರಗಳು ಹಾಗೂ ಘಟನೆಗಳು, ನಾಝಿ ಜರ್ಮನಿಯ ಇತಿಹಾಸದಲ್ಲಿ ನಡೆದ ಘಟನೆಗಳನ್ನು ಆಧರಿಸಿವೆ.
ಸಣ್ಣಪುಟ್ಟ ಕೊಲೆ, ದರೋಡೆಗಳನ್ನು ಮಾಡಿಕೊಂಡು ಬದುಕಿದ್ದ ತುಂಡೇರಾಯನ ಹೆಸರು, ರಾಜ್ಯದ ಆರ್ಥಿಕ ಸಂಕಷ್ಟದಿಂದಾಗಿ, ಸಮಾಜದ ಭಯರಹಿತ ವಾತಾವರಣದಿಂದಾಗಿ, ಜನರ ಮನಸ್ಸಿನಿಂದ ಮರೆಯಲಾರಂಭಿಸುತ್ತದೆ. ಸರಕಾರದ ಆಸ್ತಿಯನ್ನು ಖಾಸಗೀಕರಣಗೊಳಿಸುವುದರಲ್ಲಿ ಲಂಚ ಪಡೆದ ಭ್ರಷ್ಟ ರಾಜಕಾರಣಿಯ ಕಥೆ ಕಿವಿಗೆ ಬೀಳುತ್ತಿದ್ದಂತೆ ಅವನ ಮಹತ್ವಾಕಾಂಕ್ಷೆಯ ಕನಸಿಗೆ ರೆಕ್ಕೆ ಮೂಡಲಾರಂಭಿಸುತ್ತವೆ. ಇದನ್ನೇ ಮೆಟ್ಟಿಲನ್ನಾಗಿಸಿಕೊಳ್ಳುವ ತುಂಡೇರಾಯ ತನ್ನದೇ ಆದ ಪ್ರತ್ಯೇಕ ಗುಂಪು ಕಟ್ಟಿಕೊಂಡು, ದೊಂಬಿ-ಗಲಭೆಗಳನ್ನು ಸೃಷ್ಟಿಸುತ್ತಾ, ತನ್ನ ಬುದ್ಧಿ ಹಾಗೂ ಬಲಪ್ರಯೋಗದಿಂದ ಅಧಿಕಾರದ ಗದ್ದುಗೆ ಹಿಡಿಯುತ್ತಾನೆ. ಬಯಸಿದ್ದನ್ನು ಪಡೆಯಲು ಏನು ಮಾಡಲೂ ಹಿಂಜರಿಯದ ಈತ ಮೋಡಿ ಮಾಡುವ ಮಾತುಗಳಿಂದ ಹಾಗೂ ತನ್ನ ಹಿಂಸಾತ್ಮಕ ನೀತಿಗಳಿಂದ ಒಬ್ಬ ಸರ್ವಾಧಿಕಾರಿಯಾಗಿ ಬೆಳೆಯುತ್ತಾನೆ. ದುರಾಸೆ ಮತ್ತು ಅಧಿಕಾರದ ದಾಹ ಹೆಚ್ಚಾದಂತೆ ಅದನ್ನು ಸಾಧಿಸುವ ಮಾರ್ಗ ಇನ್ನೂ ಹೆಚ್ಚು ಹೆಚ್ಚು ಕ್ರೂರವಾಗುತ್ತಾ ಹೋಗುತ್ತದೆ. ಜನರನ್ನು ಮರುಳು ಮಾಡುತ್ತಾ, ಮರುಳಾಗದಿದ್ದವರನ್ನು ಕೊಲ್ಲುತ್ತಾ ಒಂದಾದ ಮೇಲೊಂದರಂತೆ ಎಲ್ಲ ರಾಜ್ಯಗಳನ್ನು ಕಬಳಿಸುತ್ತಾ ಅನಭಿಷಿಕ್ತ ದೊರೆಯಾಗಿ ಮೆರೆಯುತ್ತಾನೆ... ಇದು ನಾಟಕದ ಕುರಿತು ತಂಡ ಹೊರತಂದಿರುವ ಭಿತ್ತಿಪತ್ರದಲ್ಲಿರುವ ಟಿಪ್ಪಣಿ.
ಆದರೆ ಇದಷ್ಟೇ ಅಲ್ಲ ಎಂಬುದು ಮುಖ್ಯ. ಇದು ಸಾರ್ವಕಾಲಿಕವಾಗಿ ಪ್ರಸ್ತುತವಾಗುವ ನಾಟಕ ಎಂಬುದು ಗಮನಾರ್ಹ. ಜಗತ್ತಿನ ಯಾವುದೇ ದೇಶದ, ರಾಜ್ಯದ, ಯಾವುದೇ ಊರಿನಲ್ಲಿ ಈ ನಾಟಕವಾಡಿದರೂ ಪ್ರಸ್ತುತವಾಗುತ್ತದೆ. ಸದ್ಯದ ನಮ್ಮ ದೇಶದ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತದೆ ಜೊತೆಗೆ ಸಮಕಾಲೀನವಾಗುತ್ತದೆ. ಹಿಟ್ಲರನ ಹೋಲಿಸಿ ಬ್ರೆಕ್ಟ್ ಬರೆದ ಈ ನಾಟಕವು ತನ್ನ ವಸ್ತುವಿನ ತಾಜಾತನದಿಂದ ಗಮನ ಸೆಳೆಯುತ್ತದೆ. ಇಲ್ಲಿನ ಬಂಡವಾಳಶಾಹಿತ್ವ, ರಾಜಕೀಯ ಹಾಗೂ ರೌಡಿಸಂ ನಡುವೆ ಇರುವ ಸಂಬಂಧಗಳ ಬಗ್ಗೆ ನಾಟಕ ಮಾತಾಡುತ್ತದೆ. ಇದರಿಂದ ಒಂದು ಇನ್ನೊಂದರ ಮೇಲೆ ಮೇಲ್ಗೈ ಸಾಧಿಸುತ್ತ ಹೋಗುತ್ತವೆ. ಈ ಮೂರೂ ಅಂಶಗಳು ಒಂದಕ್ಕೊಂದು ಪೂರಕವಾಗುತ್ತ, ಬೆಳೆಯುತ್ತ ಹೋಗುತ್ತವೆ. ಆದರೆ ಇನ್ನಷ್ಟು ಮನ ಮುಟ್ಟುವ ಹಾಗೆ ಸಂಭಾಷಣೆಯನ್ನು ಕಲಾವಿದರು ಹೇಳಬೇಕಿತ್ತು. ಈ ಸಣ್ಣ ಕೊರತೆಯನ್ನು ಹೊರತುಪಡಿಸಿದರೆ ನಾಟಕದ ನಿರ್ದೇಶನ, ವಿನ್ಯಾಸದಿಂದ ಶಕೀಲ್ ಅಹ್ಮದ್ ಗೆಲ್ಲುತ್ತಾರೆ. ಸಂಗೀತ, ಬೆಳಕು ಪೂರಕವಾಗಿದ್ದು, ಶ್ವೇತಾರಾಣಿ ಅವರ ಸರಳ ರಂಗಸಜ್ಜಿಕೆಯೂ ಚೆನ್ನಾಗಿದೆ.
ಕಲಾವಿದರಾದ ಸಿದ್ಧಪ್ಪ ಮಾದರ, ಮಂಜುನಾಥ ವನಕೇರಿ, ಪಂಪನಗೌಡ ಸಿಂಧನೂರು, ಹನುಮಂತ ನಾಯ್ಕರ್, ಸಂಭ್ರಮ ಸೊನ್ನದ, ವೈ.ಕೆ. ರೇಣುಕಾ, ಗಣಪತಿಗೌಡ ಹೊನ್ನಾವರ, ಜಿ.ಟಿ. ಹನುಮಂತ, ಯಲ್ಲಪ್ಪ ಹೆಳವರ ಹಾಗೂ ಮುರಳಿಕೃಷ್ಣ ಭಜಂತ್ರಿ ಅವರ ಅಭಿನಯ ಚೆನ್ನಾಗಿದೆ. ಆದರೆ ಇವರೆಲ್ಲ ಇನ್ನಷ್ಟು ನಿಧಾನವಾಗಿ ಮತ್ತು ಪರಿಣಾಮಕಾರಿಯಾಗಿ ಸಂಭಾಷಣೆಯನ್ನು ಪ್ರೇಕ್ಷಕರಿಗೆ ತಲುಪಿಸುವ ಅಗತ್ಯವಿದೆ.
ಈ ನಾಟಕವನ್ನು ನಿರ್ದೇಶಿಸಿದ ಶಕೀಲ್ ಅಹ್ಮದ್ ಅವರು ವಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಲೋಣಿ ಬಿ.ಕೆ. ಊರಿನವರು. ನೀನಾಸಂ ಹಾಗೂ ಸಿಂಗಾಪುರದ ಇಂಟರ್ ಕಲ್ಚರಲ್ ಥಿಯೇಟರ್ ಸಂಸ್ಥೆಯಲ್ಲಿ ಅಭಿನಯ ಕುರಿತು ತರಬೇತಿ ಪಡೆದವರು. ‘ಜನಮನದಾಟ’ ತಂಡದಲ್ಲಿ ನಟರಾಗಿ ಹಾಗೂ ಪ್ಯಾರಿಸ್‌ನ ಪಾ ದು ದ್ಯು, ಕ್ಯಾನೊಪೆ, ಕಾಜ್ ಹಾಗೂ ಇಪ್ಯಾಕ್ ಥಿಯೇಟರ್ ಕಂಪೆನಿಗಳಲ್ಲಿ, ರಾಜ್ಯದ ಹಲವು ತಂಡಗಳಲ್ಲಿ ಮತ್ತು ವಿವಿಧ ರಂಗಶಾಲೆಗಳಲ್ಲಿ ತರಬೇತುದಾರರಾಗಿ ಹಾಗೂ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಈ ನಾಟಕ ಕಟ್ಟುವಲ್ಲಿ ಅವರು ಮೂರೂವರೆ ತಿಂಗಳು ಶ್ರಮಿಸಿದ್ದಾರೆ. ‘‘ತರಬೇತಿಯಲ್ಲಿ ನಾಟಕ ಹುಟ್ಟಬೇಕು. ತರಬೇತಿಯಲ್ಲಿ ಐಡಿಯಾಲಜಿ ಬೆಳೆಯಬೇಕು. ಇದಕ್ಕಾಗಿ ನಿರ್ದಿಗಂತ ತಂಡವು ಹತ್ತು ಕಲಾವಿದರನ್ನು ಕೊಟ್ಟು ಮೂರು ತಿಂಗಳವರೆಗೆ ಅವಕಾಶ ನೀಡಿತು. ಇದರಿಂದ ತರಬೇತಿ ನೀಡಿ ಬ್ರೆಕ್ಟ್‌ನ ಈ ನಾಟಕ ಆಯ್ದುಕೊಂಡೆ. ಇದನ್ನು ಉತ್ತರ ಕರ್ನಾಟಕದ ಭಾಷೆಯಲ್ಲಿಯೇ ಮಾಡಬೇಕೆಂದು ನಿರ್ಧರಿಸಿದೆವು. ಇಂಗ್ಲಿಷಿನಲ್ಲಿರುವ ಸಂಭಾಷಣೆಗಳನ್ನು ಉತ್ತರ ಕರ್ನಾಟಕ ಭಾಷೆ ಮೂಲಕ ಹಿಡಿದಿಟ್ಟೆವು. ಹೀಗೆ ನಾಟಕ ರಚನೆಯಾದ ಮೇಲೆ ಪ್ರಯೋಗಿಸಿದ, ಪ್ರಯೋಗಾತ್ಮಕವಾಗಿ ಹುಟ್ಟಿಕೊಂಡ ನಾಟಕವಿದು. ಪಾತ್ರಗಳನ್ನು ಸೂಕ್ಷ್ಮವಾಗಿ ತರಬೇತಿ ಮೂಲಕ ಕಟ್ಟಿದೆವು’’ ಎನ್ನುವ ವಿವರ ಶಕೀಲ್ ಅವರದು.
‘‘ನಾಟಕವೆಂದರೆ ಸಂಭಾಷಣೆಯನ್ನು ಕಂಠಪಾಠ ಮಾಡಿಸಿ ಕಟ್ಟುವುದಲ್ಲ. ತರಬೇತಿಯಲ್ಲಿ ಕಲಾವಿದರು ಅಭಿವ್ಯಕ್ತಿಸಿದ ಪರಿಣಾಮ ನಾಟಕವಾಗಿದೆ. ಹೀಗಾಗಿ ನಾಟಕವೆಂದರೆ ಸುಲಭವಲ್ಲ’’ ಎನ್ನುವ ಶಕೀಲ್ ಅವರು, ಕಲಾವಿದರು ಹೇಳುವ ಸಂಭಾಷಣೆಯನ್ನು ತಿದ್ದಿ, ತೀಡಿದ್ದರೆ ನಾಟಕ ಇನ್ನಷ್ಟು ಯಶಸ್ವಿಯಾಗುತ್ತಿತ್ತು. ಆದರೆ ಇತರ ನಿರ್ದೇಶಕರ ಹಾಗೆ ಅವಸರದಲ್ಲಿ ಶಕೀಲ್ ಅವರು ನಾಟಕ ಕಟ್ಟಿಲ್ಲ ಎನ್ನುವುದು ಮುಖ್ಯ. ಆದರೆ ಪಾತ್ರಗಳನ್ನು ಹಂಚಿ, ಸಂಭಾಷಣೆಗಳನ್ನು ಕಂಠಪಾಠ ಮಾಡಿಸಿ, ಹದಿನೈದು ದಿನದೊಳಗೆ ನಾಟಕ ನಿರ್ದೇಶಿಸಿದೆ ಎನ್ನುವ ಹೆಮ್ಮೆಗಿಂತ ಅದು ಅವಸರದ ಅಡುಗೆ ಎಂದು ನಿರ್ದೇಶಕರು ಅರಿಯಬೇಕಿದೆ. ಹೀಗೆಯೇ ಒಂದು ಕಡೆ ನಾಟಕ ಆರಂಭಿಸಿ, ಇನ್ನೊಂದು ಊರಿಗೆ ಹೋಗಿ ಅಲ್ಲಿ ನಾಟಕದ ನಿರ್ದೇಶನಕ್ಕೆ ತೊಡಗಿ ವಾರವಾದ ಮೇಲೆ ಮರಳಿ ಬಂದು ಬ್ಲಾಕಿಂಗ್ ಶುರು ಮಾಡಿ ನಾಟಕವನ್ನು ಪ್ರಯೋಗಕ್ಕೆ ನಿಲ್ಲಿಸುವ ನಿರ್ದೇಶಕರ ನಿಲುವು ಎಷ್ಟು ಸರಿ? ಇದಕ್ಕಾಗಿ ನಟರ ಮೇಲೆ ಅಂದರೆ ಅವರ ಅಭಿನಯ, ಸಂಭಾಷಣೆಯನ್ನು ತಿದ್ದಿ, ತೀಡಿ ಒಪ್ಪ ಮಾಡಬೇಕಾದ ಜರೂರತ್ತಿದೆ.
ಉಚಿತ ಪ್ರದರ್ಶನ
ಎರಡು ಗಂಟೆ ಅವಧಿಯ ‘ತುಂಡೇರಾಯ’ ನಾಟಕವನ್ನು ನಿರ್ದಿಗಂತ ತಂಡವು ಉಚಿತವಾಗಿ ಪ್ರದರ್ಶಿಸುತ್ತಿದೆ. ಅಂದರೆ ಸಂಭಾವನೆ ಪಡೆಯುವುದಿಲ್ಲ. ಆದರೆ ಊಟ, ವಸತಿ ಜೊತೆಗೆ ನಾಟಕವಾಡಲು ಬೇಕಾದ ವೇದಿಕೆ ಹಾಗೂ ಪ್ರೇಕ್ಷಕರನ್ನು ಸೇರಿಸುವ ಜವಾಬ್ದಾರಿಯನ್ನು ಸಂಘಟಕರು ಹೊತ್ತುಕೊಳ್ಳಬೇಕು. ಆಸಕ್ತರು ತಂಡದ ನಿರ್ವಾಹಕ ಗಣೇಶ ಭೀಮನಕೋಣೆ ಅವರನ್ನು 7259479331 ಸಂಪರ್ಕಿಸಬಹುದು.