ಪ್ರಸಾದವಾದ ಕಾರಂತರ ಬುತ್ತಿಗಂಟು
‘‘35 ವರ್ಷಗಳ ಮೈಸೂರು ರಂಗಾಯಣದಲ್ಲಿನ ಅನುಭವ ನಟರ ಪರಂಪರೆಗಾಗಿ ಊರೂರು ಸುತ್ತುತ್ತಾ, ನಟರ ಒಳಮನೆ, ಹೊರಜಗುಲಿ ಸ್ವಚ್ಛ ಮಾಡಿಕೊಂತ ಕೆಲಸ ಮಾಡುತ್ತಿರುವೆ. ಸಾಕಷ್ಟು ಕೆಲಸ ಇದೆ’’ ಎಂದು ಹುಲಗಪ್ಪ ಕಟ್ಟಿಮನಿ ಒಂದೇ ಉಸಿರಿಗೆ ಹೇಳಿದರು.
ಅವರು ರಂಗ ರತ್ನ ಪ್ರಶಸ್ತಿ ಪುರಸ್ಕೃತರು.
ಮೈಸೂರಿನ ರಂಗರತ್ನ ಸಂಸ್ಥೆಯು ಡಾ. ನ. ರತ್ನರ ಅವರ ಹೆಸರು ಕನ್ನಡ ರಂಗಭೂಮಿಯಲ್ಲಿ ಅಜರಾಮರವಾಗಿ ಉಳಿಯಬೇಕೆಂಬ ಹಂಬಲದಿಂದ ಕೆನಡಾದ ಯೋಗ ಧ್ಯಾನ ಗುರುಗಳಾದ ತರ್ನೀವ್ ಮತ್ತು ಇಂಜಿನಿಯರ್ ಎನ್.ಎಸ್. ಆನಂದ್ ಅವರು ಸೇರಿಕೊಂಡು ಕಟ್ಟಿದ ಸಂಸ್ಥೆಯೇ ‘ರಂಗರತ್ನ’. ರಂಗಭೂಮಿಯಲ್ಲಿ ಗಣನೀಯವಾದ ಸೇವೆ ಸಲ್ಲಿಸುತ್ತಿರುವ ನಿರ್ದೇಶಕರಿಗೆ, ನಾಟಕಕಾರರಿಗೆ, ಸಂಗೀತಗಾರರಿಗೆ ಕಲಾವಿದರಿಗೆ (ನಟ ಮತ್ತು ನಟಿಗೆ), ರಂಗ ವಿನ್ಯಾಸಕಾರರಿಗೆ ಹೀಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಮಹನೀಯರುಗಳನ್ನು ಗುರುತಿಸಿ ಅವರಿಗೆ ಗೌರವ ಕೊಡುವ ಕಾರ್ಯ ಈ ರಂಗರತ್ನ ತಂಡದ್ದು. ಈ ಬಾರಿ ನಟ ನಿರ್ದೇಶಕ ಹುಲಗಪ್ಪ ಕಟ್ಟಿಮನಿ ಅವರಿಗೆ ರಂಗರತ್ನ ಗೌರವ ಲಭಿಸಿದೆ. ನಿನ್ನೆ (ಡಿಸೆಂಬರ್ 12) ಮೈಸೂರಿನ ಮಾನಸ ಗಂಗೋತ್ರಿಯ ಗಾಂಧಿ ಭವನದಲ್ಲಿ ರಂಗರತ್ನ ಪ್ರಶಸ್ತಿ ಸಮಾರಂಭದಲ್ಲಿ ಕಟ್ಟಿಮನಿ ಅವರು ರಂಗರತ್ನರಾದರು.
ತಾಲೂಕು ಮಟ್ಟದಲ್ಲಿರುವ ನಟರನ್ನು, ಹಳ್ಳಿಗಳಲ್ಲಿರುವ ನಟರನ್ನು ರೂಪಿಸಬೇಕಾದ ಅಗತ್ಯವಿದೆ. ಏಕೆಂದರೆ ಅವರ ಎನರ್ಜಿ, ಭಾವನೆಗಳು, ಬದುಕನ್ನು ಪ್ರೀತಿಸುವ ರೀತಿ ಮುಖ್ಯ. ಮಹಾನಗರಗಳಲ್ಲಿ ಬದುಕುವವರಿಗೆ ಅದರಲ್ಲೂ ಐಟಿ/ಬಿಟಿಯವರಿಗೆ ಕಂಪ್ಯೂಟರ್, ಪಿಜ್ಜಾ, ಇನ್ನೊಬ್ಬರ ಸಲುವಾಗಿ ನಿದ್ದೆಗೆಡುವುದು, ವಾರಾಂತ್ಯಕ್ಕೆ ಅಲ್ಲಿ ಇಲ್ಲಿ ಹೋಗಿ ಎಂಜಾಯ್ ಮಾಡಿಬನ್ನಿ ಎಂದು ಕೂಪನ್ ಕೊಡುತ್ತಾರೆ. ಸೋಮವಾರದಿಂದ ಯಥಾಪ್ರಕಾರ ಕಂಪ್ಯೂಟರ್ ಮುಂದೆ... ಇಂಥ ಕಾರ್ಪೊರೇಟ್ ಸಂಸ್ಕೃತಿಯ ಯುವತಲೆಮಾರಿಗೆ ಬದುಕನ್ನು, ನಾಟಕವನ್ನು ಕಲಿಸಬೇಕಿದೆ. ಗುರುಗಳಾದ ಬಿ.ವಿ. ಕಾರಂತರು ಹೇಳುತ್ತಿದ್ದರು-ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ, ದಕ್ಷಿಣ ಕರ್ನಾಟಕದಲ್ಲಿನ ಕನ್ನಡ ಭಾಷೆ ಭಿನ್ನ. ಅಲ್ಲಿನ ಮಣ್ಣಿನ ವಾಸನೆಗೆ ತಕ್ಕಂಗ ಭಾಷೆ ಹುಟ್ಟುತ್ತದೆ. ಕನ್ನಡವೇ ಆದರೂ ಅದೂ ಕನ್ನಡ. ಕರಾವಳಿ, ಚಾಮರಾಜನಗರ, ಧಾರವಾಡ, ಬೀದರದಲ್ಲಿ ಆಡುವುದೂ ಕನ್ನಡವೇ. ಇದಕ್ಕಾಗಿ ರಂಗಾಯಣಗಳು ಹೆಚ್ಚಬೇಕೆಂದು ಹೇಳುತ್ತಿದ್ದರು. ಅವರಿಂದ ಕಲಿತ ಅನುಭವದ ಬುತ್ತಿಗಂಟನ್ನು ಬಿಚ್ಚಿ ಪ್ರಸಾದವಾಗಿ ಕೊಡ್ತಾ ಇದ್ದೀನಿ. ನಮ್ಮ ತಲೆಮಾರಿನವರು ಕಾರಂತರ ಪರಂಪರೆ ಉಳಿಸಿ, ಬೆಳೆಸಬೇಕಿದೆ ಎನ್ನುವ ಕಾಳಜಿ ಅವರದು.
ಅವರು ನಟನೆ ಕುರಿತು ಹೇಳಿದ ಮಾತುಗಳು ಹೀಗಿವೆ...
‘‘ಈಸು ದಿನದಾಗ ಒಂದೈದು ಕಡಿ ‘ನಾಟ್ಯಶಾಸ್ತ್ರ’ ಅನುಕೋಂತ, ‘ನಟರ ಮನೋಧರ್ಮ’ ಅನುಕೋಂತ ಹೀಂಗ ಊರೂರು ಸುತ್ತಿದೆ. ಇದರ ನಡುವ ನಾಕೂರಿನ ನಾಕು ತಂಡಗಳಿಗೆ ನಾಕು ನಾಟಕ ಆಡಿಸಿದೆ. ಹೊಸ ಮನಿ ಕಟ್ಟಿದಾಂಗನಾ ಆತು. ಇದೊಂದು ಚೆಂದದ ಸುತ್ತಾಟ. ಹೋದೋದ ಕಡೀ ಆ ಊರಿನ ಜನ-ದನ, ಊರು-ಕೇರಿ ನೋಡಿದಾಗ ಕಣ್ಣು ತುಂಬಿಕೊಳ್ತವ, ಕೆಲವು ಕಡೀ ‘ಅಯ್ಯೋ ಶಿವನಾ ಇದು ಹೀಂಗಾ?’ ಅಂತ ಅನುಸ್ತದ. ಅಂದರಾ ಬರೀ ಮುಖವಾಡದ ಮಂದೀನಾ ಕಾಣ್ತಾರ. ತಾಲೀಮಿಗೆ ಅಂತ ರಂಗದ ಮ್ಯಾಲೆ ಬಂದು ನಿಂತಾಗನೂ ಮುಖವಾಡ ಕಳಚೂದಿಲ್ಲ. ಅವರು ಹಾಕಿದ ಮುಖವಾಡವನ್ನ ಕಳಚಿಸಬೇಕಾಗ್ತದ. ಎಲ್ಲೋ ನೋಡಿದ್ದನ್ನ, ಯಾರೋ ಮಾಡಿದ್ದನ್ನ ನೋಡಿ ಅದಾ ನಟನೆ ಅಂತ ತಿಳಿತಾರ ಮತ್ತ ಅದನ್ನ ಮಾಡ್ತಾರ. ಅಂತಾನ ರಂಗದ ಮ್ಯಾಗ ಸುಳ್ಳ ಸುಳ್ಳ ಬೀಗೋದು ಬಡಬಡಿಸೋದು ಮಾಡತಾರ. ಇದನ್ನ ಬಂದ್ ಮಾಡಿಸಿ, ಅವರೊಳಗಿನ ‘ಅವರನ್ನು’ ಹೊರತಂದು ನಿಲ್ಲಿಸಿ, ಅವರ ನಿಜದ ಎದಿಮಾತಿನಲ್ಲಿ ಅವರು ಮಾತಾಡುವಂಗ ಮಾಡಬೇಕಾಗ್ತದ.
ನೀ ಇರೋದು ಹೀಂಗಲ್ಲಾ... ಹೀಂಗಿದ್ದೀ...ಅಂತ ಅವರನ್ನ ಪೂರಾ ಬೆತ್ತಲು ಮಾಡಬೇಕಾಗ್ತದ. ಬೆತ್ತಲಾದಮ್ಯಾಲ ಅವರವರ ಒಳ ಕೋಣಿಗಳು ಶೆಗಣಿಯಿಂದ ಸಾರಿಸಿದ ನೆಲದಾಂಗ ಧೂಪ ದೀಪ ಹಚ್ಚಿಟ್ಟ ಗೂಡುಗಳಾಂಗ ಕಾಣ್ತಾವ.
ಆಗ ಅವರಿಗೆ ಗೊತ್ತಾಗ್ತದ ನಟಿಸೋದಂದ್ರ.... ಬದುಕನ್ನ ಅರ್ಥಮಾಡಿಕೊಳ್ಳೋದು. ನಟಿಸೋ ದಂದ್ರ.....ಅರ್ಥಪೂರ್ಣವಾಗಿ ಬದುಕೋದು. ನಟಿಸೋದಂದ್ರ...... ತನ್ನದಲ್ಲದ ಬದುಕಿನೊಳಗ ಯಾತ್ರಿ ಮಾಡೋದು. ಅಲ್ಲಿ ಇಲ್ಲಿ ಎರವಲಾಗಿ ಪಡೆದದ್ದನ್ನ ಅಥವಾ ತಿರುಪೆ ಎತ್ತಿ ತಂದದ್ದನ್ನ ಪೂರ ತನ್ನದಾ ಅಂತ ತಿಳಿದು ಹಂಚಿಬಿಡೋದು.
ಅದಕ್ಕಾ ಅಂತೀನಿ ಒಳ್ಳೆ ನಟ ಆಗಬೇಕಂದ್ರ ಅವ ಒಳ್ಳೆ ಮನುಷ್ಯನೂ ಆಗಿರಬೇಕು. ಅವ ದಡ್ಡನೂ ಆಗಿರಬೇಕು. ಜಾಣನೂ ಆಗಿರಬೇಕು. ಮುಗ್ಧನಿಗಿರುವಷ್ಟು ದಡ್ಡತನ ಇರಬೇಕು.
ಹಿಂಗಾದ್ರ ಹಂಗಾದೀತು, ಹಂಗಾದ್ರ ಹಿಂಗಾದೀತು ಅಂತ ತಿಳಿಯುವಷ್ಟು ಜಾಣತನಾನೂ ಇರಬೇಕು.
ಒಬ್ಬ ಸಂತನ ವೇಷ ಹಾಕೂದಂದ್ರ ವೇಷ ಹಾಕುವವ ಸಂತನಾ ಆಗಿರಬೇಕಂತಿಲ್ಲ. ಆ ಸಂತ ಸವೆಸಿದ ದಾರಿ, ಆ ದಾರಿಯಲ್ಲಿ ಅವನಿಗೆ ದೊರೆತ ಅರಿವಿನ ಅರಿವು ವೇಷಧಾರಿಗೆ ಇದ್ದರಾತು.ಅದಕ್ಕಾ ಅಂತೀನಿ ವೇಷಧಾರಿಯ ಸ್ವಂತ ಜಾತಕ ಅವನಿಗೆ ಉಪಯೋಗಕ್ಕ ಬರೂದಿಲ್ಲ. ಅವ ಬರೀ ಅವರಿವರ ಜಾತಕದಾಗ ಬದುಕತಿರ್ತಾನ.
ಅವರಿವರ ಜಾತಕದೊಳಗ ಬದುಕೋದಂದ್ರ ಅರಿವಿನ ದಾರಿಯನ್ನ ಹುಡುಕಿದಾಂಗ. ಈ ಅರಿವಿನದಾರಿ ಅಂದ್ರ ಶಿವ ನಡೆದಾಡಿದ ದಾರಿ. ಅಂದ್ರ ಅರಿವು- ಶಿವ ಎರಡೂ ಒಂದಾ ಆಗಿರತದ. ಅಂದ ಮ್ಯಾಲೆ ನಟನಿಗೆ ಇದಾ ಅಧ್ಯಾತ್ಮದ ದಾರಿ ಅಲ್ಲೇನು?.
ನಟಿಸೂದಂದ್ರ ಹುಡುಕಾಡುವುದು. ಬೇಕಾದದ್ದನ್ನ ಹೆಕ್ಕಿ ಹೆಕ್ಕಿ ತರೋದು. ಅರ್ಥಾತ್ ತಿಪ್ಪೆ ಸೋಸುವುದು.
ಇನ್ನು ನಟ ಅಂತ ಅನ್ನಿಸಿಕೊಳ್ಳೋನು ಹಳ್ಳ-ಕೊಳ್ಳದ ತಿಳಿನೀರಿನೊಳಗ ತಾಯಿ ಮೀನು ಮರಿ ಮೀನುಗಳನ್ನ ಕರಕೊಂಡು ಆಟ ಆಡಿದಾಂಗ, ಸಹ ನಟರೊಂದಿಗೆ ರಂಗದ ಮ್ಯಾಲೆ ಆಟ ಆಡಬೇಕಾಗ್ತದ. ತಾಯಿ ಕೋಳಿ ತಿಪ್ಪೆಯನ್ನ ಕೆದರಿ ಕೆದರಿ ಮರಿಕೋಳಿಗಳಿಗೆ ಹುಳಾ ಹುಪ್ಪಡಿ ಹುಡುಕಾಕ ಹಚ್ಚತಾದಲ್ಲ ಹಾಂಗ.’’
****
‘‘ನಾನಿನ್ನು ಸಣ್ಣಾವಿದ್ದೆ. ಸಣ್ಣವಾಂದ್ರ ಇಡೀ ನಮ್ಮ ಮನೀಗೇ ನಾನಾ ಸಣ್ಣವ. ನಮ್ಮವ್ವ ಏಳು ಮಕ್ಕಳ ತಾಯಿ. ಇನ್ನು ಮಕ್ಕಳು ಸಾಕವ್ವಾ.. ಮತ್ತೆ ಕೊಡಬ್ಯಾಡ ಅಂತ ಹುಲಿಗೆಮ್ಮಗ ಬೇಡಿಕೊಂಡ್ರುನೂ ಮತ್ತೆ ನಾ ಹುಟ್ಟಿದ್ನಂತ.(ಇದೊಂದು ಇರಲಿ ತೊಗೊಳವ್ವ ಕಡೀದು ಅಂತ ಹುಲಿಗೆಮ್ಮ ಕೊಟ್ಟಿರಬೇಕು.)
ಅಂದರ ಹೆಚ್ಚುವರಿ ಮನುಷ್ಯ ನಾನು. ಅಣ್ಣಂದಿರ ಹೆಗಲಿಂದ ಹೆಗಲಿಗೆ, ಅತ್ತಿಗೆಯರ ಸೊಂಟದಿಂದ ಸೊಂಟಕ್ಕ ನೇತಾಡಿಕೊಂಡಾ ದೊಡ್ಡವಾದಾವ.
ನಾ ಅತ್ತರ ತಗದ ಬಾಯಿ ತಗದಾಂಗ ಇರ್ತಿತ್ತಂತ. ಉಸುರು ಬಾಳ ಹೊತ್ತು ಹಿಡಿದು ಬಿಡುತಿದ್ದೆನಂತ. ಹಂಗಾಗಿ ನಮ್ಮವ್ವ ಹೆದರಿ ಒಟ್ಟ ಇದು ಅಳಾ ಬಾರದು ಅಂತ ಫುಲ್ ಚಾರ್ಜನ್ನ ನಮ್ಮ ಸಣ್ಣಕ್ಕಗ ವಹಿಸಿದ್ದಳಂತ. ನನ್ನ ದೆಸಿಯಿಂದ ಆಕಿ ಸಾಲಿ ಅರ್ಧಕ್ಕ ನಿಂತೋತಂತ.
ಮುಸ್ಸಂಜಿ ಹೊತ್ತಿನಾಗ ನಾ ಆಟ ಆಡುವಾಗ ನನ್ನ ಮುಕಳಿ ಮಣ್ಣಾಗಬಾರದೂ ಅಂತ ತಾನುಟ್ಟ ಲಂಗಾನ ನೆಲಕ್ಕಹಾಸಿ ಅದರ ಮ್ಯಾಗ ನನ್ನ ಕೂರಿಸಿಕೊಂಡು, ಎದುರು ಮನಿಯವರ ಬೇವಿನ ಮರ ತೋರಿಸಿ ‘ನೋಡಲ್ಲಿ ಮರದಾಗ ಏನೋ ಕುಂತೈತಿ’ ಅನುಕೋಂತ ನಾ ಕುಡಿಯಾಕ ವಲ್ಲೆಂದ ಹಾಲನ್ನ ಗಟಗಟ ಕುಡಿಯುವಾಂಗ ಮಾಡಿ ಬಿಡೋಳು. ನಾಟ್ಯಶಾಸ್ತ್ರದಾಗ ಭಯಾನಕ ರಸದ ಬಗ್ಗೆ ಹೇಳುವಾಗ ಇದು ನೆನಪಾಗೇ ಆಗ್ತದ.
ನಮ್ಮ ಸಣ್ಣವ್ವ ರಾತ್ರಿ ಹೊತ್ತ ಇನ್ನು ಉಣ್ಣಾಕಿನ ಮುಂಚೆ ಅಂಗಳದಾಗ ಚಾಪಿ ಹಾಸಿ, ಅದರ ಮ್ಯಾಗ ಕುಂತು ಆಕಾಶದಾಗಿನ ಚುಕ್ಕಿ ತೋರಿಸಿಕೋಂತ ‘ಇದು ಕೂರಿಗಿ ತಾಳ. ಅದು ಚೆನ್ನಮ್ಮನ ದಂಡು. ಅದೋ...ಅಲ್ಲಿ ಮಿಣುಕು ಮಿಣುಕು ಅಂತ ಮಿಣುಕತೈತಲ್ಲ ಅದು ಕುಳ್ಡು ಕುಂಬಾರ್ತಿ ಅವಳ ಗಂಡ ಬ್ಯಾಟಿಗೋಗ್ಯಾನ ಅದಕ್ಕಂತನಾ ವರುಳು ಕಲ್ಲಾಗ ಖಾರ ಕುಟ್ಟಾಕತ್ಯಾಳ ಅದಕ್ಕಾ ಮಿಣುಕು ಮಿಣುಕು ಅಂತೈತಿ’ ಅಂತ ನನ್ನನ್ನ ತೊಡಿಮ್ಯಾಲೆ ಕುಂಡರಿಸಿಕೊಂಡು ಚೆಂದ ಮಾಡಿ ಹೇಳತಿದ್ದಳು.
ಈ ಕತಿ ಕೇಳಿ 55 ವರ್ಷನಾರ ಆಗಿರಬೇಕು. ಈಗಲೂ ನನಗ ಕುಂಬಾರ್ತಿಯ ಸಣ್ಣ ಮನಿ, ಮೂಲ್ಯಾಗಿನ ವರಳು ಕಲ್ಲು, ಅವಳ ಕುರುಡು ಕಣ್ಣು, ರಾತ್ರಿ ಹೊತ್ತು ಆಗಿರೋದ್ರಿಂದ ಬುಡ್ಡಿ ದೀಪ ಹಚ್ಚಿಕೊಂಡು ಖಾರ ಕುಟ್ಟಕತ್ಯಾಳ, ಅವಳ ಗಂಡ ಬ್ಯಾಟಿಗೋದವ ಇನ್ನು ಬಂದಿಲ್ಲ. ಬರತಾನೋ ಇಲ್ಲೋ ಗೊತ್ತಿಲ್ಲ. ಈಕಿ ಕುಟ್ಟುತನಾ ಇರತಾಳ.ಇದನ್ನ ಕೇಳುವಾಗ ಉತ್ಪತ್ತಿ ಆಗುವ ರಸ ‘ಭಯ ಮಿಶ್ರಿತ ಕೌತುಕ’.ಇದನ್ನ ದೃಶ್ಯೀಕರಿಸಿದರ ಭಾಳ ಕೆಲಸ ಮಾಡಬೇಕಾಗ್ತದ. ಈ ಕುಂಬಾರ್ತಿ ಅಕಿರಕುರುಸೋವನ ‘ಥ್ರೋನ್ ಆಫ್ ಬ್ಲಡ್’ ಸಿನೆಮಾದೊಳಗಿನ ಜಕ್ಕಿಣಿನಾಸೈ.
ಇರಲಿ, ಮ್ಯಾಲೆ ನಮ್ಮೂರಾಗ ಶ್ರೀ ಕೃಷ್ಣಮಂದಿರ ಸಿನೆಮಾ ಟಾಕೀಸ್ ಇತ್ತು. ಅದು ಚಾಲೂ ಆಗುವಾಗ ‘ನಮೋ ವೆಂಟೇಶ ನಮೋ ತಿರುಮಲೇಶ’ ರೆಕಾರ್ಡ್ ಹಾಕೋರು. ನಮ್ಮವ್ವ ರಾಜಕುಮಾರನ ಸಿನೆಮಾ ಬಂತಂದ್ರ ಸಾಕು ನಮ್ಮಪ್ಪಗ ಗೊತ್ತಾಗದಾಂಗ ಸಣ್ಣಮಕ್ಕಳನ್ನಷ್ಟ ಕರಕೊಂಡು ಸೆಕೆಂಡ್ ಶೋಗ ಹೋಗಿ ಬಿಡೋಳು. ಸುತ್ತ ಮುತ್ತ ಹಳ್ಳೀಜನ ಬಂಡೀ ಕಟಿಗೊಂಡು ಬರೋರು. ಸಿನೆಮಾ ಚಾಲು ಆತು ಅಂದ್ರ ದೊಡ್ಡ ಪರದೆ ಮ್ಯಾಲೆ ಆರಂಭಕ್ಕ ಅದೇತಾನೆ ಕಾಯಿ ಒಡೆದು ಊದುಬತ್ತಿ ಹಚ್ಚಿದ ದೇವರ ಫೋಟೊ ಬರೋದು. ಭಕ್ತಿಯ ಸ್ತೋತ್ರ ಬರೋದು, ಸಿನೆಮಾದ ಹೆಸರು ಆಮ್ಯಾಲ ರಾಜಕುಮಾರನ ಹೆಸರು ಬರೋದು. ಬಂದ ಕೂಡಲೇ ಮಂದಿ ಕ್ಯಾಕಿ ಹೊಡಿಯೋರು. ಬರೋ ಅಕ್ಷರಗಳು ಅದಕ್ಕ ತಕ್ಕನಾಂಗ ಹುರುಪೇಳಿಸುವ ಮ್ಯೂಸಿಕ್.
ಈಗಲೂ ಮಯೂರ ಸಿನೆಮಾದ ಹಿನ್ನೆಲೆ ಸಂಗೀತ ನನ್ನ ಸ್ಮತಿಯೊಳಗ ಅಚ್ಚು ಹಾಕಿದಾಂಗ ಅದ. ಅಂದ್ರ ರಾಜಕುಮಾರ ಅದೆಷ್ಟರ ಮಟ್ಟಿಗೆ ಮೈ ದುಂಬುತಿದ್ದ ಅಂತ ಲೆಕ್ಕ ಹಾಕರಿ.
ಸಿನೆಮಾ ನಡೀವಾಗನಾ ಬಿಸಿ ಬಿಸಿ ಚಹ ಮಾರೋರು ಬರೋರು. ಚಹಾಕ್ಕ ಐದು ಪೈಸೆ. ಸಿನೆಮಾಕ್ಕ ನಲವತ್ತು ಪೈಸೆ.ಅದು ಬೆಂಚ್‌ಗೆ. ಕುರ್ಚಿಗೆ ಎಪ್ಪತ್ತೈದು ಪೈಸೆ, ಮಸಾಲೆ ದೋಸೆಗೆ ಇಪ್ಪತ್ತು ಪೈಸೆ ಇರತಿತ್ತು. ಚಹ ಊದೂದಿ ನಮ್ಮವ್ವ ನಮಗೀಟು ಕುಡಿಸಿ ತಾನೂ ಕುಡಿಯೋಳು. ರಾಜಕುಮಾರನ ಫೈಟಿಂಗ್ ಸೀನ್ ಬಂತಂದರ ಸಣ್ಣ ಅಣ್ಣ ಅಕ್ಕ ಪಕ್ಕ ಕುಂತ ಹೆಣಮಕ್ಕಳಿಂದ ಬೈಸಿಕೊಂತಿದ್ದ. ಅವ ಏನು ಮಾಡ್ತಿದ್ದ? ಫೈಟಿಂಗ್ ಸೀನ್ ಬಂತಂದರ ಹುಂ ಹಾಕ್ಕು, ಹುಂ ತಿವಿ ಅನುಕೋಂತ ಪಕ್ಕಕ್ಕ ಕುಂತ ಹೆಣಮಕ್ಕಳಿಗೆ ಗುದ್ದಿಬಿಡುತಿದ್ದ.
ಹೀಂಗ ಒಂದು ಸಾರಿ ಅಪರೂಪದ ರಾಜಕುಮಾರನ ಸಿನೆಮಾ. ಎರಡನೇ ಶೋ ನಡದದ. ಅವತ್ತು ನಮ್ಮ ದೊಡ್ಡ ಅತ್ತಿಗೆಯನ್ನೂ ನಮ್ಮವ್ವ ಕರಕೊಂಡು ಬಂದಾಳ. ಹೀಂಗ ನಡುಬರಕ ಬಿಸಿ ಬಿಸಿ ಚಹ ಬಂದದ. ಒಂದು ಚಹ ತಗೋಂಡ್ರ ಆ ಚಹ ವನ್ ಬೈ ತ್ರೀ ನೂ ಆಗೋದು ಬೈ ಫೋರೂ ಆಗೋದು.
ಅಂತಾನಾ ಆ ಒಂದು ಚಹದಾಗ ನಮ್ಮವ್ವ ನಮಗೀಟು ಕುಡಿಸಿ, ತಾನೀಟು ಕುಡುದು ನಮ್ಮತ್ತಿಗೆಗೆ ತಗೋಳವ್ವ ನೀನೀಟು ಕುಡಿ ಅಂತ ಕೊಟ್ಟಾಳ. ನಮ್ಮತ್ತಿಗೆ ರಪ್ಪನ ನಮ್ಮವ್ವನ ಕಡೆ ಮುಖ ತಿರುವಿ, ಉರಿಗಣ್ಣು ಬಿಟ್ಟುಕೊಂಡು ಸ್ವಾಟಿ ತಿರುವಿಕೋಂತ ‘ಯಾಕಬೇ ನಿನ್ನ ಎಂಜಲ ನಾ ಯಾಕ ಕುಡೀಲಿ’ ಅಂದು ಬಿಟ್ಟಾಳ. ನಮ್ಮವ್ವಗ ಪಕ್ಕನ ಖೂನ್ ಸಿಕ್ತು. ತನ್ನ ಸೊಸಿ ದೇಹದೊಳಗ ಯಾವುದೋ ಗಾಳಿ ಸಂಚಾರ ಆಗ್ಯಾದ ಅಂತ. ಗಂಡು ಮಕ್ಕಳಕಡಿ ಕುಂತ ನಮ್ಮಣ್ಣಂದಿರಗ ಸುದ್ದಿ ಪಾಸ್ ಆತು. ನೋಡರೀ...ಇಂಥಾ ಹೊತ್ತಿನಾಗೂ ನಮ್ಮವ್ವ ಪೂರಾ ಸಿನೆಮಾ ನೋಡ್ಯಾಳ. ಅತ್ತಿಗೀ ದೇಹದೊಳಗ ಹೊಕ್ಕ ಗಾಳೀನೂ ಪೂರಾ ಸಿನೆಮಾ ನೋಡ್ಯಾದ. ನಾನು ಸಣ್ಣವಲ್ರೀ... ಪೂರಾ ಸಣ್ಣವ ನಾನು ಹೆದರಿ ಹೆದರೀ ಅತ್ತಿಗೀ ಮುಖ ನೋಡ್ತಿದ್ದೆ. ಥೇಟ್ ‘ನಾನಿನ್ನ ಬಿಡಲಾರೆ’ ಸಿನೆಮಾದ ಅನಂತನಾಗನ ಮುಖದಾಂಗ ಆಗಿತ್ತು. ಅಂತು ಸಿನೆಮಾ ಮುಗೀತು. ಗಾಳಿ ಹಾಂ ಅಂತಿಲ್ಲ ಹೂಂ ಅಂತಿಲ್ಲ ಬರಬರ ನಡಕೋಂತ ನಮ್ಮನಿ ದಾರಿ ಹಿಡೀತು.
ಇನ್ನೇನು ನಮ್ಮನಿ ಬಂತು ಅನ್ನುವಾಗ ನಮ್ಮ ಎದುರು ಮನಿಯವರ ಅಂಗಳದಾಗ ದೊಪ್ ಅಂತ ಬಿತ್ತು. ಆಮ್ಯಾಲೆ ನಮ್ಮ ಅಂಗಳಕ್ಕ ಹೊತ್ತುಕೊಂಡು ಬಂದ್ರು. ನಮ್ಮಪ್ಪಗ ಏನೂಂತ ಗೊತ್ತಾತು. ಆಗ ಕಲ್ಲೂ ನೀರೂ ಕರಗೋ ಹೊತ್ತು. ಸೆಕೆಂಡ್ ಶೋ ಮುಗಿಯೋದಾ ಅದಾ ಹೊತ್ತಾಗಿರುತಿತ್ತು. ನಮ್ಮಪ್ಪ ಮೈ ದುಂಬಿದ ಗಾಳಿ ಎದುರು ಕುಂತು ಅದರ ಜಟ್ಟು ಹಿಡಿದು ಜೋರುಮಾಡಿ ಯಾರು ನೀನು ಹೇಳು? ಅನ್ತಿದ್ದ.
ಅಗ ಹೋಗುವಾಗ ಹಂಗ ಹೋಗಬ್ಯಾಡ ಏನಾದರು ಗುರುತು ಕೊಟ್ಟು ಹೋಗು ಅನ್ತಿದ್ದ. ಗಾಳಿ ನಮ್ಮಪ್ಪಗ ಉರಿಗಣ್ಣು ಬಿಟ್ಟುಗೊಂಡು ‘ಏ...ನಾ ಯಾರಂತ ಕೇಳತೀ? ಗುರುತು ಹಿಡಿ...ಗುರುತು ಹಿಡಿ’ ಅಂತ ಅನುಕೋಂತ ಎದುರು ಮನಿಯಾಗ ಸತ್ತ ಹೆಂಗಸಿನ ಹೆಸರೇಳಿ ಗಪ್ಪಗಡಾರ್ ಆತು. ಎಲ್ಲಾರೂ ಎದುರು ಮನಿ ಕಡಿ ನೋಡ್ತಿದ್ರು.ನಮ್ಮವ್ವ ಮಾತ್ರ ನಮ್ಮಪ್ಪನ್ನ ನೋಡುತಿದ್ದಳು.
ನಾನಿನ್ನು ಸಣ್ಣಾವರೀ ಪೂರಾ ಸಣ್ಣಾವ. ಗುರುತು ಅಂತ ಗಾಳಿ ಕೊಟ್ಟೋದ ಕೂದಲನ್ನ ನಮ್ಮಪ್ಪ ನಾಗೊಂದಿಗೆಗೆ ನೇತಾಡುವ ಕಬ್ಬಿಣದ ಬಳೆಗೆ ಕಟ್ಟಿದ್ದ. ಹಗಲೊತ್ತಿಗೆಲ್ಲ ನಾನು ಆ ಕೂದಲಾನಾ ನೋಡತಿದ್ದೆ. ಇದು ನಾಟ್ಯ ಶಾಸ್ತ್ರದೊಳಗ ಭಯಾನಕ ರಸದ ವರ್ಣನೆ ಮಾಡುವಾಗ ಬರತದ. ಆಶ್ಚರ್ಯ ಅಂದ್ರ ಈ ಎಂಜಲಿನ ಪ್ರಸ್ತಾಪವೂ ಬರತದ. ಈ ಘಟನೆ ಆಗಿ ಐವತ್ತೈದು ವರ್ಷನಾರ ಆಗಿರಬೇಕು. ನಮ್ಮ ನಟರ ಭಾವನಾ ಭಂಡಾರದೊಳಗ ಇಂಥವಾ ತುಂಬಿಕೊಂಡಿರಬೇಕು. ನಮ್ಮೂರಗಂತೂ ಕೈಗೊಂದು ಕಾಲಿಗೊಂದು ಇಂಥವು ಸಿಗ್ತಾವ.’’
**
‘‘ನಟನಾದವನು... ತಟಸ್ಥನಾಗಿ ಈ ಲೋಕವನ್ನ ದೂರ ನಿಂತುಗೊಂಡು ನೋಡೋದ ಕಲೀಬೇಕು. ನೋಡು ನೋಡತಿದ್ದಾಂಗ ನಮಗರಿವಿಲ್ಲದಾಂಗ ಕೌತುಕಕ್ಕ ಒಳಗಾಗ್ತೇವಿ, ಬಾಯಿ ಮ್ಯಾಲ ಕೈ ಇಟುಗೊಂಡು ಬೆರಗಾಗ್ತೇವಿ, ನೋಡಲಿಕ್ಕಾಗದ ಮುಖ ಸಿಂಡರಿಸ್ತೀವಿ, ಸಂತೋಷ ತಡೀಲಾರದ ಕೂಗ್ತೀವಿ ಇದು ಹೀಂಗಾ ಭಾವಯಾನ.
ಆದರ ನಮ್ಮ ಸಮಾಜದೊಳಗಿನ ಅಂದರ ಈ ಲೋಕದೊಳಗಿನ ಮನುಷ್ಯರು ಅರ್ಥ ಮಾಡಿಕೊಳ್ಳಲಿಕ್ಕ ಆಗದಷ್ಟು ಜಟಿಲ ಆಗಿರತಾರ. ಹೀಂಗ ನಿಂತರ ಒಂದು ನಮೂನಿ ಕಾಣ್ತಾರ. ಹಾಂಗ ನಿಂತರ ಮತ್ತೊಂದ ನಮೂನಿ ಕಾಣ್ತಾರ. ಅಳ್ತಾರ ಆದರ ಕಣ್ಣೀರು ಬರೂದಿಲ್ಲ. ನಗ್ತಾರ ಆದರ ಮನಃ ಪೂರ್ತಿನಗೂದಿಲ್ಲ. ವಾತಾವರಣ ಕೆಟ್ಟೋಗಿ ಖರೆ ಯಾವುದು ಖೊಟ್ಟಿ ಯಾವುದು ಅನ್ನೂದಾ ಗೊತ್ತಾಗುವುದಿಲ್ಲ. ಈ ಖರೆ-ಖೊಟ್ಟಿ ಪತ್ತೆಹಚ್ಚಲಾರದ ನಟ ಜಾಣ ನಟ ಆಗಿ ಬಿಡ್ತಾನ. ಆಗ ಅವ ಅತೀ ಜಾಣ ಆದರ ಮುಂದೆ ವ್ಯವಹರಿಸಿದ ದಾರಿ ಎಲ್ಲವೂ ಜಾಣತನದ ದಾರಿನೇ ಆಗಿರ್ತದ. ಖೊಟ್ಟಿಯಾಗಿರತದ.ಕೊನೀಗೆ ಅದು ‘ದ ಬ್ಲೂ ಜಾಕಲ್ ಕಥಿ’ ಆಗಿರತದ. (ಬಣ್ಣ ಬಳಕೊಂಡ ನರಿ) ಅದಕ್ಕ ನಾ ಅಂದದ್ದು ಮುಗ್ಧತೆಗಾಗಿ ಸ್ವಲ್ಪ ದಡ್ಡತನಬೇಕು. ಮುಂದಿನ ದಾರಿ ತಿಳಿಯುವಷ್ಟು ಜಾಣತನನೂ ಬೇಕು ಅಂತ. ರಾಜಕುಮಾರ, ಅಶ್ವತ್, ಟಿ.ಎನ್.ಬಾಲಕೃಷ್ಣ, ನರಸಿಂಹರಾಜು, ಲೀಲಾವತಿ, ಪಂಡರಿಬಾಯಿ ಇನ್ನು ಅನೇಕರಲ್ಲಿ ಜಾಣತನಕ್ಕಿಂತ ಮುಗ್ಧತೆಯೇ ಮನೆ ಮಾಡಿತ್ತು ಅಂತ ಅನಿಸೂದಿಲ್ಲ?’’