ಪುರುಷ ಕೇಂದ್ರಿತ ರಂಗಭೂಮಿ; ಮಹಿಳೆಯರಿಗೆ ಅಸ್ತಿತ್ವದ ಸವಾಲು

ಉತ್ತರ ಕನ್ನಡ ಜಿಲ್ಲೆಯ ಕೆರೇಕೈ ಊರಿನ ರಜನಿ ಗರುಡ ಅವರು ಹೆಗ್ಗೋಡಿನ ನೀನಾಸಂನಲ್ಲಿ ತರಬೇತಿ ಪಡೆದ ನಂತರ ರಂಗಕರ್ಮಿ ಪ್ರಕಾಶ ಗರುಡ ಅವರನ್ನು ಮದುವೆಯಾಗಿ ನೆಲೆ ನಿಂತಿದ್ದು ಧಾರವಾಡದಲ್ಲಿ. ಪಪೆಟ್ ಹೌಸ್ ತಂಡದ ಮೂಲಕ ‘ಅದ್ಭುತ ರಾಮಾಯಣ’ ಎಂಬ ಶತಕಂಠ ರಾವಣನ ಚರಿತ್ರೆಯ ನಾಟಕವನ್ನು ಗೊಂಬೆಯಾಟದ ಮೂಲಕ ಅನಾವರಣಗೊಳಿಸುತ್ತಾರೆ.
‘‘ಗೊಂಬೆಯಾಟದ ಪ್ರದರ್ಶನಕ್ಕೆ ಹೊರಟ ಮೇಲೆ ಹಲವಾರು ಅನುಭವಗಳಾದವು. ಎಲ್ಲೇ ಹೋದರೂ ನಾವು ಹೆಣ್ಣುಮಕ್ಕಳು ನೀರಿನ ವ್ಯವಸ್ಥೆ ಇರುವ, ಸ್ವಚ್ಛತೆ ಇರುವ ಶೌಚಾಲಯವನ್ನು ಹುಡುಕುತ್ತ ಕಿಲೋಮೀಟರುಗಟ್ಟಲೆ ಅಲೆಯುತ್ತೇವೆ.
ನಾನು ರಂಗನಟಿ, ನಿರ್ದೇಶಕಿಯಾಗಿದ್ದರೂ ಮಕ್ಕಳಿಗಾಗಿ ತೊಗಲುಗೊಂಬೆಯಾಟ ಮಾಡುತ್ತೇನೆ. ಎರಡೂ ಕ್ಷೇತ್ರಗಳು ಅಪಾರವಾದ ತಾಳ್ಮೆ, ಸಮಯ ಮತ್ತು ಸೃಷ್ಟಿಶೀಲತೆಯನ್ನು ಬೇಡುವಂಥವು. ಗೊಂಬೆಯಾಟವನ್ನು ರಂಗಭೂಮಿಯ ವಿಸ್ತರಣೆಯ ಭಾಗ ಎಂದುಕೊಂಡಿದ್ದೇನೆ. ಆದರೆ ಉತ್ತರ ಕರ್ನಾಟಕದಲ್ಲಿ ರಂಗಭೂಮಿ ಚಟುವಟಿಕೆಗಳು ಒಂದೇ ಸಮನಾಗಿ ಆಕ್ಟೀವ್ ಆಗೇನೂ ಇಲ್ಲ. ಧಾರವಾಡವೂ ಸೇರಿದಂತೆ ಹಲವಾರು ಏರಿಳಿತಗಳಾಗುತ್ತಿರುತ್ತವೆ. ಇದಕ್ಕೆ ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿವೆ. ನಟ-ನಟಿಯರ ಕೊರತೆ, ತಾಂತ್ರಿಕ ಪರಿಣತರ ಕೊರತೆ, ಹಣದ ಕೊರತೆ ಇಂದು ಹೆಚ್ಚಾಗಿ ಕಾಣುತ್ತಿದೆ. ಮುಖ್ಯವಾಗಿ ಹೊಸ ತಲೆಮಾರಿನವರದ್ದೇ ಕೊರತೆ. ಕಾಲೇಜು ನಾಟಕೋತ್ಸವದಲ್ಲೋ ಅಥವಾ ಯಾವುದಾದರೂ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ನಮಗೆ ನಂತರವೂ ದೊರೆಯುತ್ತಿದ್ದರು. ಈಗ ಆ ಥರದ ಮುಂದುವರಿಕೆ ಕಾಣುತ್ತಿಲ್ಲ. ಯುವಪೀಳಿಗೆ ಹೆಚ್ಚಾಗಿ ಬರುತ್ತಿಲ್ಲ.
ಎಲ್ಲ ಕ್ಷೇತ್ರಗಳಂತೆ ರಂಗಭೂಮಿಯೂ ಪುರುಷ ಕೇಂದ್ರಿತ ಕ್ಷೇತ್ರ. ನಮ್ಮ ಅಸ್ತಿತ್ವ ಸ್ಥಾಪಿಸಿಕೊಳ್ಳುವುದು ಮತ್ತು ಸಿಕ್ಕ ಅವಕಾಶದಲ್ಲಿ ಕೆಲಸ ಮಾಡಿ ಬದುಕುವುದು ಎರಡೂ ದೊಡ್ಡ ಸವಾಲೇ ಸರಿ’’
* * *
ಬೆಂಗಳೂರಿನ ಶ್ವೇತಾ ಶ್ರೀನಿವಾಸ್ ಪ್ರತಿಭಾವಂತ ಕಲಾವಿದೆ ಜೊತೆಗೆ ವಸ್ತ್ರವಿನ್ಯಾಸಕಿ, ನೃತ್ಯ ಸಂಯೋಜಕಿ. ಯೋಗ ಮತ್ತು ಸಮರಕಲೆ ಶಿಕ್ಷಕಿ ಮೇಲಾಗಿ ನಾಟಕ ನಿರ್ದೇಶಕಿ. ಹೀಗಿರುವ ಅವರು ‘ರಂಗರಥ- ಭಾರತೀಯ ಪ್ರದರ್ಶನ ಕಲಾಸಂಸ್ಥೆ’ ಸಂಸ್ಥಾಪಕ ನಿರ್ದೇಶಕರಾಗಿ ಮತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ರಂಗಭೂಮಿಗೆ ಒಲಿದದ್ದು, ಬೆಳೆದದ್ದು ಗಮನಾರ್ಹ.
‘‘ನನ್ನ ಮನೇಲಿ ಯಾರೂ ಕಲಾವಿದರಿಲ್ಲ. ಬೆಂಗಳೂರಿನ ರಾಷ್ಟ್ರೀಯ ವಿದ್ಯಾನಿಲಯದಲ್ಲಿ ಎಂಟನೇ ತರಗತಿಯಲ್ಲಿ ಓದುವಾಗ ಮಂಜುನಾಥ ಬಡಿಗೇರ ಅವರು ‘ಮೌಗ್ಲಿ ಕಾಡಿನಿಂದ ನಾಡಿಗೆ’ ನಾಟಕ ನಿರ್ದೇಶಿಸಿದ್ದರು. ಇದರಲ್ಲಿ ನನ್ನ ತಂಗಿ ಪಾತ್ರ ನಿರ್ವಹಿಸಿದ್ದಳು. ನಾನು ನಾಟಕ ನೋಡಲು ಹೋಗಿದ್ದೆ. ನಾಟಕ ಮುಗಿದ ನಂತರ ಮೇಷ್ಟ್ರು ‘ನಾಟಕ ಹೇಗಿದೆ?’ ಎಂದು ಕೇಳಿದಾಗ ‘ಚೆನ್ನಾಗಿದೆ’ ಎಂದೆ. ‘ನೀನೂ ನಾಟಕಕ್ಕೆ ಸೇರಿಕೊ’ ಎಂದರು. ‘ಬರ್ತೀನಿ’ ಎಂದೆ. ಮರುದಿನ ನಾಟಕಕ್ಕೆ ಸೇರಿದೆ. ಬಳಿಕ ರಂಗಕಹಳೆ ತಂಡಕ್ಕೆ ಸೇರಿದೆ. ‘ಕಾರಣಿಕ ಶಿಶು’ ನಾಟಕದಲ್ಲಿ ಬಸವಣ್ಣನ ಅಕ್ಕನ ಪಾತ್ರ ಮಾಡಿದಾಗ ರಾಜ್ಯಮಟ್ಟದ ಬಾಲನಟಿ ಪ್ರಶಸ್ತಿ ಬಂತು. ಇಲ್ಲಿಂದ ರಂಗಪಯಣ ಶುರುವಾಯಿತು.
ಅದೊಮ್ಮೆ ಎಂಟನೇ ಕ್ಲಾಸಿನಲ್ಲಿ ಓದುವಾಗ ಹುಡುಗರೊಂದಿಗೆ ಪಾತ್ರ ಮಾಡಿದ್ದು ನಾನೊಬ್ಬಳೆ. ಇಡೀ ದಿನ ವಾಷ್‌ರೂಮಿಗೆ ಹೋಗದೆ ಪರಿತಪಿಸಿದ್ದೆ. ಮನೆಗೆ ಹೋದ ಮೇಲೆಯೇ ವಾಷ್‌ರೂಮಿಗೆ ಹೋಗಿದ್ದೆ.
2015ರಲ್ಲಿ ದಿಲ್ಲಿಯಲ್ಲಿ ಮೆಟಾ ಪ್ರಶಸ್ತಿ ಬಂತು. ಪ್ರಶಸ್ತಿ ಬಂದಿದ್ದು ಸಮಷ್ಟಿ ತಂಡದಿಂದ ಪ್ರದರ್ಶಿಸಿದ ‘ಚಿತ್ರಪಟ’ ನಾಟಕಕ್ಕೆ. ಇದಕ್ಕಾಗಿ ಅತ್ಯುತ್ತಮ ನಟಿ, ಅತ್ಯುತ್ತಮ ವಸ್ತ್ರವಿನ್ಯಾಸಕಿ ಪ್ರಶಸ್ತಿ ಬಂತು. ಎಲ್ಲ ರಾಜ್ಯಗಳಿಂದ ಅತ್ಯುತ್ತಮ ನಾಟಕಗಳಿದ್ದವು. ನನಗೆ ಪ್ರಶಸ್ತಿ ಬಂದದ್ದು ಮರೆಯಲಾರದ ಘಟನೆ. ಆದರೆ ರಂಗರಾಜಕೀಯ ಬಹಳ ಕಹಿ ಎನ್ನಿಸುತ್ತದೆ. ಯಾವುದೇ ಬೆಂಬಲ, ಬೆನ್ನೆಲುಬಿಲ್ಲದೆ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವೆ. ಆದರೆ ನಮಗೊಂದು ನಾಟಕ ಕೊಡಿ, ಷೋ ಕೊಡಿ ಎಂದು ಕೇಳಿದಾಗ ಕೊಡೋಣ ಎಂದವರು ಆಮೇಲೆ ತಪ್ಪಿಸಿದವರು ಇದ್ದಾರೆ. ಇಸಂಗಳಿಗೆ ತಗಲು ಹಾಕಿಕೊಂಡರೆ ಒಂದು ವರ್ಗ ಮಾತ್ರ ಬೆಂಬಲಿಸುತ್ತದೆ. ಆದರೆ ಮಧ್ಯದ ಹಾದಿ ಕಷ್ಟದ್ದು. ಮಾನವೀಯತೆ, ನೈತಿಕಪ್ರಜ್ಞೆಯಿರುವ ನಾಟಕಗಳನ್ನು ಆಡಲು ಇಷ್ಟ. ಕಷ್ಟವೆಂದರೆ ಯಾರೋ ತಿರುಚಿ ಹೇಳಿದ್ದನ್ನು, ಕಿರುಚಿ ಹೇಳಿದ್ದನ್ನು ನಾಟಕವಾಗಿಸಲು ಇಷ್ಟಪಡಲ್ಲ.
ಕ್ಲಾಸಿಕ್ ಜೊತೆಗೆ ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಅಗತ್ಯವಿದೆ. ಯುವತಲೆಮಾರು ಬರುತ್ತಾರೆ. ಅವರಿಗೆ ನಟಿಸಬೇಕು, ಸೀರಿಯಲ್, ಸಿನೆಮಾದಲ್ಲಿ ಕಾಣಿಸಬೇಕೆಂಬ ತುಡಿತವಿರುತ್ತದೆ. ಅವರಿಂದ ಚೆಂದದ ನಾಟಕಗಳನ್ನು ಆಡಿಸಿದರೆ ಉಳಿಯುತ್ತಾರೆ. ಆದರೆ ಅವಸರದಲ್ಲಿರುತ್ತಾರೆ. ಕೆಲವರು ಯೂಟ್ಯೂಬ್, ಇನ್‌ಸ್ಟಾಗಳ ಜೊತೆಗೆ ರೀಲ್ ಮಾಡುತ್ತಾರೆ. ರೀಲ್‌ಗಳನ್ನು ಖಂಡಿಸುತ್ತಿಲ್ಲ. ಆದರೆ ರಂಗಭೂಮಿ ಕುರಿತು ಮಾಡಿ ಎನ್ನುವ ಸಲಹೆ ನನ್ನದು. ರಂಗಭೂಮಿಯಿಂದ ಪಡೆದ ಅನುಭವ, ತರಬೇತಿ ಶಿಬಿರಗಳಲ್ಲಿ ಪಡೆದುಕೊಂಡಿದ್ದನ್ನು ರೀಲ್ ಮಾಡಿ ಎನ್ನುವುದು ನನ್ನ ಕಿವಿಮಾತು. ಕೂಳು ಮತ್ತು ಆತ್ಮಸಂತೋಷಕ್ಕಾಗಿ ಸಿನೆಮಾ, ಸೀರಿಯಲ್ ಮಾಡಿದೆ. ಆದರೆ ಉಳಿದುಕೊಂಡಿದ್ದು ರಂಗಭೂಮಿಯಲ್ಲಿ.
ರಂಗಭೂಮಿ ಮಾಡಬೇಕಾದರೆ ಎಂಟೆದೆ ಬೇಕು. ಅಡ್ವೆಂಚರ್ ಕೂಡಾ ಇದು. ನಾಟಕ ಮಾಡುವಾಗ ಬಿಕ್ಕಟ್ಟು, ಇಕ್ಕಟ್ಟುಗಳಿರುತ್ತವೆ. ಆನ್‌ಸ್ಟೇಜ್ ಅಲ್ಲ, ಸಂಘಟನೆಯಲ್ಲೂ. ನಟಿಸುವುದರ ಜೊತೆಗೆ ನಾಟಕಗಳನ್ನು ನಿರ್ದೇಶಿಸುವ ಹೊಣೆ ಇರುತ್ತದೆ. ಮಹಿಳೆಯರಿಗೆ ಸವಾಲುಗಳು ಹೆಚ್ಚಿವೆ. ನಟಿಸುವುದು, ನಿರ್ದೇಶಿಸುವುದು ಸುಲಭ. ಆದರೆ ಸಂಘಟನೆ ಸಮಸ್ಯೆ. ಅದರಲ್ಲೂ ಆರ್ಥಿಕ ಸಮಸ್ಯೆ ಕಾಡುತ್ತದೆ. ನಾವೇ ದುಡಿದು ನಾಟಕ ಕಟ್ಟಬೇಕು, ಆಡಬೇಕು. ಗಳಿಸಿದ್ದನ್ನು ಮತ್ತೆ ತೊಡಗಿಸಬೇಕು.
ಬೆಂಗಳೂರಿನಲ್ಲಿ ಯುವಕರು ಬಲು ಬೇಗ ಕೈ ಕೊಡುತ್ತಾರೆ. ಒಂದು ನಾಟಕದ ಎರಡು ಪ್ರದರ್ಶನಗಳಾದ ಕೂಡಲೇ ಅವರ ಅಭಿಮಾನಿಗಳು ಬಂದು ಕೈಕುಲುಕಿದಾಗ, ಅವರ ಗೆಳೆಯರೇ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದಾಗ ಉಬ್ಬಿ ಹೋಗುತ್ತಾರೆ. ರಂಗಪಯಣ ಈಗ ಶುರುವಾಗಿದೆಯೆಂದು ಅರಿಯುವುದಿಲ್ಲ. ಹೀಗೆಂದಾಗ ರಂಗಭೂಮಿಯಲ್ಲಿ ಉದ್ಯೋಗವಿಲ್ಲ ಎಂದಲ್ಲ. ಖಂಡಿತವಾಗಿ ಸೃಷ್ಟಿಸಿಕೊಳ್ಳಬಹುದು. ವಸ್ತ್ರವಿನ್ಯಾಸಕರಾಗಬಹುದು, ಲೈಟಿಂಗ್ ಮಾಡಬಹುದು. ನಾಟಕ ರಚನೆ, ಪೋಸ್ಟರ್ ವಿನ್ಯಾಸ... ಹೀಗೆ. ಆದರೆ ಯುವತಲೆಮಾರಿನವರಲ್ಲಿ ಕಲಿಯುವ ಹಪಾಹಪಿ ಕಡಿಮೆಯಾಗುತ್ತಿದೆ. ಈಗ ಅವರ ಕೈಯಲ್ಲಿ ಸ್ಮಾರ್ಟ್‌ಫೋನುಗಳಿರುತ್ತವೆ. ಆದರೆ ಅವರು ಸ್ಮಾರ್ಟ್ ಆಗಿರುವುದಿಲ್ಲ. ನಾವ್ಯಾಕೆ ಇಷ್ಟು ಕಷ್ಟಪಡಬೇಕು? ದೇಹವನ್ನು ಯಾಕೆ ದಂಡಿಸಬೇಕು ಎಂದು ಕೇಳಿಕೊಳ್ಳುತ್ತಾರೆ. ಶರೀರ ಮತ್ತು ಶಾರೀರವನ್ನು ಹುರಿಗೊಳಿಸಿಕೊಂಡು, ಹೊಸ ಕೌಶಲವನ್ನು ಕಲಿಯಬೇಕು. ಕಲಿತುದನ್ನು ಅಳವಡಿಸಿಕೊಳ್ಳಬೇಕು ಎನ್ನುವ ತುಡಿತ ಬೇಕು’’.
* * *
ಮಂಗಳೂರಿನ ಶ್ವೇತಾ ಅರೆಹೊಳೆ ಓದಿದ್ದು ಬಿ.ಎ. ಪತ್ರಿಕೋದ್ಯಮ. ನೃತ್ಯಪಟು ಜೊತೆಗೆ ರಂಗಭೂಮಿಯ ನಿರಂತರ ಒಡನಾಟ. ನಂದಗೋಕುಲ ತಂಡದ ಜೊತೆಗೆ ಅವರ ತಂದೆ ಅರೆಹೊಳೆ ಸದಾಶಿವರಾವ್ ಅವರ ಅರೆಹೊಳೆ ಪ್ರತಿಷ್ಠಾನದ ಮೂಲಕ ಶಿಕ್ಷಣ-ಕಲೆ-ಸಾಹಿತ್ಯ- ಸಂಸ್ಕೃತಿಯ ಕಾರ್ಯಕ್ರಮಗಳ ಆಯೋಜನೆ. ಕಳೆದ ಎರಡು ವರ್ಷಗಳಿಂದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಅರೆಹೊಳೆಯಲ್ಲಿ ಕಟ್ಟಿಸಿದ ರಂಗಮಂದಿರ ನಂದಗೋಕುಲ ರಂಗಶಾಲೆ ಮೂಲಕ ನಾಟಕ, ತರಬೇತಿ ಶಿಬಿರ ಆಯೋಜಿಸುತ್ತಿದ್ದಾರೆ.
24 ವರ್ಷ ವಯಸ್ಸಿನ, ಯಕ್ಷಗಾನದ ಜೊತೆಗೆ ನೃತ್ಯಪಟುವಾಗಿರುವ ಅವರು, ನೀನಾಸಂ ನಾಟಕಗಳನ್ನು ನೋಡಿದ ಪ್ರಭಾವದ ಪರಿಣಾಮ ನಾಟಕದ ಶಿಬಿರದಲ್ಲಿ ಪಾಲ್ಗೊಂಡರು. ಅವರ ತಂಡದಲ್ಲಿ ಹುಡುಗಿಯರೇ ಹೆಚ್ಚಿದ್ದು ‘ಗೋಕುಲ ನಿರ್ಗಮನ’ ನಾಟಕವಾಡಿದರು. ಇದನ್ನೇ ನೃತ್ಯರೂಪಕವಾಗಿಸಿ 30ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದರು. ಆನಂತರ ‘ಕಂಸಾಯಣ’, ‘ಉಡಿಯೊಳಗಣ ಕಿಚ್ಚು’, ಇಬ್ಬರ ಅಭಿನಯದ ‘ದ್ವಯ’, ‘ಗೆಲ್ಲಿಸಬೇಕು ಅವಳ’ ಏಕವ್ಯಕ್ತಿ ನಾಟಕವಾಡಿದ್ದಾರೆ. ಸದ್ಯ ‘ದಶಾನನ ಸ್ವಪ್ನಸಿದ್ಧಿ’ ನಾಟಕವಾಡುತ್ತಿದ್ದಾರೆ. ದಿಲ್ಲಿಯಲ್ಲಿ ನಡೆಯುವ ಮೆಟಾ ರಾಷ್ಟ್ರೀಯ ಪ್ರಶಸ್ತಿಗಾಗಿ ಇದೇ ಮಾರ್ಚ್ 15ರಂದು ದಶಾನನ ಸ್ವಪ್ನಸಿದ್ಧಿ ನಾಟಕವಾಡುತ್ತಿದ್ದಾರೆ. ಒಟ್ಟು ಆರು ವಿಭಾಗಗಳಲ್ಲಿ ಭಾಗವಹಿಸುತ್ತಿದ್ದಾರೆ.
‘‘ಸಾಮಾನ್ಯವಾಗಿ ಪುರುಷ ಪಾತ್ರಗಳನ್ನೇ ಮಾಡುವೆ. ಗೋಕುಲ ನಿರ್ಗಮನದಲ್ಲಿ ಕೃಷ್ಣ, ಕಂಸಾಯಣದಲ್ಲಿ ಕಂಸ ಪಾತ್ರವಾಡುವಾಗ ಆಂಗಿಕ ಅಭಿನಯ ರೂಢಿಸಿಕೊಳ್ಳಬೇಕಿತ್ತು. ಮನೆಯಲ್ಲಿ ಅಪ್ಪ-ಅಮ್ಮನ ಪ್ರೋತ್ಸಾಹವಿದೆ’’
* * *
ಸುಜಾತಾ ಜೇವರ್ಗಿ ಹುಟ್ಟಿದ್ದು ರಂಗಭೂಮಿಯಲ್ಲಿ. ಅವರ ತಂದೆ ಜೇವರ್ಗಿ ರಾಜಣ್ಣ ಪ್ರಸಿದ್ಧ ರಂಗಭೂಮಿ ಕಲಾವಿದರು ಹಾಗೂ ವಿಶ್ವಜ್ಯೋತಿ ಪಂಚಾಕ್ಷರ ನಾಟ್ಯ ಸಂಘದ ಒಡೆಯರು. ತಾಯಿ ಪ್ರೇಮಾ ಕೂಡಾ ಕಲಾವಿದೆ. ಓದಿದ್ದು ಆರನೇ ತರಗತಿ. ಆಮೇಲೆ ರಂಗಭೂಮಿಯಲ್ಲಿಯೇ ತೊಡಗಿಸಿಕೊಂಡಿದ್ದಾರೆ. ತಂದೆಯ ಕಂಪೆನಿಯಲ್ಲಿ ಪಳಗಿದ ನಂತರ ಪ್ರಶಾಂತ್ ಗುಬ್ಬಿ ಅವರನ್ನು ಮದುವೆಯಾದ ಮೇಲೆ ಬಿಎಸ್‌ಆರ್ ನಾಟಕ ಸಂಘ, ಗುಬ್ಬಿ ಕಂಪೆನಿ ಕಟ್ಟಿಕೊಂಡು ನಿರಂತರವಾಗಿ ನಾಟಕವಾಡುತ್ತಿದ್ದಾರೆ.
‘‘2008ರೊಳಗ ಅಪ್ಪನ ಕಂಪೆನಿಯು ದಾವಣಗೆರೆಯಲ್ಲಿದ್ದಾಗ ಸುಟ್ಟಿತು. ಎಲ್ಲಾ ಸುಟ್ಟು ಹೋಗಿ ಖಾಲಿ ಕೈಲಿ ಕುಂತಿದ್ದೆವು. ರಸ್ತೆಯಲ್ಲಿ ಓಡಾಡಿ ರೊಕ್ಕ ಸಂಗ್ರಹಿಸಿದೆವು. ಹಿರಿಯ ರಾಜಕಾರಣಿ ಶಾಮನೂರು ಶಂಕರಪ್ಪ ಸೇರಿದಂತೆ ಸಾರ್ವಜನಿಕರು ಸಹಾಯ ಮಾಡಿದ್ದರಿಂದ ಕಂಪೆನಿ ಸುಟ್ಟ ಜಾಗದಲ್ಲಿಯೇ ಮತ್ತೆ ನಾಟಕವಾಡಿದ್ದನ್ನು ಮರೆಯಲಾಗದು.
ಪ್ರತೀ ವರ್ಷ ಕೊಪ್ಪಳ ಜಿಲ್ಲೆಯ ಕುಕನೂರಲ್ಲಿ ಗುದ್ನೇಶ್ವರ ಜಾತ್ರೆಯ ಮೂಲಕ ಆರಂಭವಾಗುವ ಸೀಸನ್ ನಂತರ ಬನಶಂಕರಿ ಜಾತ್ರೆ, ಅಲ್ಲಿಂದ ಮೈಲಾರ, ಎರಡು ವರ್ಷಕ್ಕೊಮ್ಮೆ ನಡೆಯುವ ಶಿರಸಿ ಜಾತ್ರೆ ಮುಗಿಸಿಕೊಂಡು ಕೊಟ್ಟೂರು ಜಾತ್ರೆಯಲ್ಲಿ ಕಂಪೆನಿಯ ಮೊಕ್ಕಾಂ ಹಾಕ್ತೀವಿ. ಹಿಂಗ ಆರು ತಿಂಗಳು ನಿರಂತರವಾಗಿ ತಿರುಗಾಟ ಮಾಡಿ ಮಳೆಗಾಲದಾಗ 3-4 ತಿಂಗಳು ಅಡ್ಡಾಡದ ಹಂಗ ಕಂಪೆನಿ ಹಾಕಿ ಮತ್ತ ತಿರುಗಾಟ ಶುರು ಮಾಡ್ತೀವಿ.
ಬನಶಂಕರಿ ಜಾತ್ರೆಯೊಳಗ ಮಧ್ಯಾಹ್ನ ಎರಡರಿಂದ ಆರಂಭವಾಗುವ ನಾಟಕವು ಸಂಜೆ ಆರು, ರಾತ್ರಿ ಒಂಬತ್ತು, ಮಧ್ಯರಾತ್ರಿ 12 ಗಂಟೆಯಿಂದ ನಸುಕಿನ ನಾಲ್ಕು ಗಂಟೆಗೆ ಮುಗೀತದ. ಸದ್ಯ ವಿಜಯನಗರ ಜಿಲ್ಲೆಯ ಕೊಟ್ಟೂರು ಜಾತ್ರೆಯೊಳಗ ದಿನಕ್ಕೆ ಸಂಜೆ ಆರು ಗಂಟೆಗೆ, ರಾತ್ರಿ ಒಂಭತ್ತು ಗಂಟೆಗೆ ಶುರುವಾಗಿ ಮಧ್ಯರಾತ್ರಿ ಮುಗಿದರೆ, ಮೇಕಪ್ ತೆಗೆದು ಊಟ ಮಾಡಿ ಮಲಗುವಾಗ ರಾತ್ರಿ ಮೂರು ಗಂಟೆ ಆಗ್ತದ. ಇದೇ ಉದ್ಯೋಗ, ದುಡಿಮೆ. ನಿದ್ದೆಗೆಡುವುದು ಖಾಯಂ. ವರ್ಷದ 12 ತಿಂಗಳೂ ರಾತ್ರಿ ನಿದ್ದೆಗೆಡ್ತೀವಿ’’