ಮರಿಯಮ್ಮನಹಳ್ಳಿ ರಂಗತಾರೆ ನಾಗರತ್ನಮ್ಮ

74 ವರ್ಷ ವಯಸ್ಸಿನ ಮರಿಯಮ್ಮನಹಳ್ಳಿ ನಾಗರತ್ನಮ್ಮ ಅವರು 2024-25ನೇ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಈಗಾಗಲೇ ಅವರು ಮಹರ್ಷಿ ವಾಲ್ಮೀಕಿ ಪ್ರಶಸ್ತಿ, ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.
ಕಲಾವಿದೆಯರ ತವರೂರು, ನಾಟಕಗಳ ರಾಜಧಾನಿ, ಕಲಾಗ್ರಾಮ ಎಂದೇ ಪ್ರಸಿದ್ಧವಾದುದು ಅಖಂಡ ಬಳ್ಳಾರಿ ಜಿಲ್ಲೆಯ ಈಗಿನ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ. ಇಲ್ಲಿನ ರಂಗಭೂಮಿಯ ಹಿರಿಯ ಕಲಾವಿದೆ, 74 ವರ್ಷ ವಯಸ್ಸಿನ ಮರಿಯಮ್ಮನಹಳ್ಳಿ ನಾಗರತ್ನಮ್ಮ ಅವರು 2024-25ನೇ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಈಗಾಗಲೇ ಅವರು ಮಹರ್ಷಿ ವಾಲ್ಮೀಕಿ ಪ್ರಶಸ್ತಿ, ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.
ಅವರೊಂದಿಗೆ ಮಾತನಾಡಿದ್ದು ಇಲ್ಲಿದೆ.
‘‘ಸೋಮವಾರ ಸಂತೆಯ ದಿನವಾದ ನಮ್ಮೂರಲ್ಲಿ ನಾಟಕ, ಬಯಲಾಟ ಇಲ್ಲವೇ ಗೊಂದಲಿಗರ ಆಟ ಇರಬೇಕಿತ್ತು. ನೋಡುವವರೂ ಉತ್ಸುಕತೆಯಿಂದ ಇಡೀ ರಾತ್ರಿ ನಾಟಕ ನೋಡುತ್ತಿದ್ದರು. ರಕ್ತರಾತ್ರಿ, ಹೇಮರಡ್ಡಿ ಮಲ್ಲಮ್ಮ, ಪೃಥ್ವಿ ಪುತ್ರ ಬೋಮಾಸುರ ನಾಟಕಗಳನ್ನು ಪ್ರತೀ ವಾರ ಆಡುತ್ತಿದ್ದರು. ನಮ್ಮೂರಿನ ನರಸಿಂಹಾಚಾರ್ ಅವರ ಮನೆ ‘ಪ್ರಕಾಶ ಮಂದಿರ’ದಲ್ಲಿ ಪೌರಾಣಿಕ ನಾಟಕಗಳಿಗೆ ಬೇಕಾದ ಉಡುಪು, ಪರದೆಗಳು, ಒಡವೆಗಳು ಸಿಗುತ್ತಿದ್ದವು. ಅವರ ಹತ್ತಿರ ಹತ್ತಾರು ಜನರು ದುಡಿಯುತ್ತಿದ್ದರು. ಥಿಯೇಟರ್ ಹಾಕಲಿಕ್ಕೂ ಜನರನ್ನು ಕರೆದುಕೊಂಡು ಹೋಗುತ್ತಿದ್ದರು. ಯಾವುದೇ ಊರಿಗೆ ಹೋದರೂ ನಾಟಕ ನಡೆಯುವ ಜಾಗ ತೋರಿಸಿದರೆ ಸಾಕು. ತಗ್ಗು ತೆಗೆದು, ಕುರ್ಚಿಗಳನ್ನು ಹಾಕಿಸಿ ಥಿಯೇಟರ್ ಸಿದ್ಧಗೊಳಿಸುತ್ತಿದ್ದರು. ಅರುವತ್ತರಿಂದ ಎಂಭತ್ತರ ದಶಕದವರೆಗೆ ನಮ್ಮೂರು ನಾಟಕಗಳಿಗೆ ಪ್ರಸಿದ್ಧವಾಗಿತ್ತು. ಮರಿಯಮ್ಮನಹಳ್ಳಿ ನಾಟಕವೆಂದರೆ ಬಂಡಿಗಳನ್ನು ಕಟ್ಟಿಕೊಂಡು ಬರುತ್ತಿದ್ದರು. ಸೋಮವಾರ ಸಂತೆಯ ದಿನವಿರುತ್ತದೆಯೆಂದು ಬಂದು ಬಿಡುತ್ತಿದ್ದರು. ಚಾಪೆಗೆ ಎಪ್ಪತ್ತೈದು ಪೈಸೆ, ಎಂಟಾಣೆಗೆ ನೆಲ, ಎರಡು ರೂಪಾಯಿ, ಎರಡೂವರೆ ರೂಪಾಯಿಗೆ ಕಬ್ಬಿಣದ ಕುರ್ಚಿಗಳು.
ಬಳ್ಳಾರಿ ಜಿಲ್ಲೆಯ ತೋರಣಗಲ್ ಹತ್ತಿರದ ಕುರಿಯಕುಪ್ಪದ ಮಲ್ಲಿಕಾರ್ಜುನಸ್ವಾಮಿ ಹಾರ್ಮೋನಿಯಂ ಮಾಷ್ಟ್ರು ನಾಟಕಕ್ಕೆ ನಮ್ಮೂರಿಗೆ ಬರುತ್ತಿದ್ದರು. ಗೌಳೇರ ಮೈಲಾರಪ್ಪ ನನ್ನ ಗುರುಗಳು. ನನ್ನಪ್ಪ ಕೆ. ಮಾರೆಪ್ಪ ನಾಟಕದ ಸಣ್ಣಪುಟ್ಟ ಪಾತ್ರ, ಬಯಲಾಟವನ್ನೂ ಮಾಡುತ್ತಿದ್ದರು. ತಾಯಿ ಸಿದ್ದಮ್ಮ ಹೊಲಮನೆ ಕೆಲಸ ಮಾಡುತ್ತಿದ್ದರು. ದಲಾಲ್ ಅಂಗಡಿಯಲ್ಲಿ ಅಪ್ಪ ಲೆಕ್ಕ ಬರೆಯುತ್ತಿದ್ದರು. ತಿಂಗಳಿಗೆ ನೂರು ರೂಪಾಯಿ ದುಡಿಯತ್ತಿದ್ದರು. ನಾವು ಆರು ಜನ ಅಕ್ಕತಂಗಿಯರು. ನನ್ನ ತಮ್ಮ ರಾಮಚಂದ್ರಪ್ಪ. ಆಗೆಲ್ಲ ಬಹಳ ಕಷ್ಟವಿತ್ತು. ನಾನೇ ಹಿರಿಯವಳು. ಬಣ್ಣ ಹಚ್ಚಿಕೊಂಡು ನಾಟಕವಾಡುವಾಗ ಕೀಳುಮಟ್ಟದಿಂದ ನೋಡುತ್ತಿದ್ದರು. ಅಪ್ಪನಿಗೆ ಹುಷಾರಿರಲಿಲ್ಲ. ದುಡಿಯಬೇಕಾದ ಅನಿವಾರ್ಯತೆಯಿತ್ತು.
ತುಂಗಭದ್ರಾ ಡ್ಯಾಂ ಕಟ್ಟುವಾಗ ಮುಳುಗಿದ ಮೂವತ್ತು ಹಳ್ಳಿಗಳಲ್ಲಿ ನಮ್ಮ ಊರಾದ ಬಸಾಪುರ ಕೂಡಾ ಒಂದು. ಅಲ್ಲಿಂದ ದೇವಲಾಪುರಕ್ಕೆ ಬಂದೆವು. ಇಲ್ಲಿಂದ ಮರಿಯಮ್ಮನಹಳ್ಳಿಗೆ ದಲಾಲ್ ಅಂಗಡಿಗೆ ಲೆಕ್ಕ ಬರೆಯಲು ಅಪ್ಪ ಹೋಗುತ್ತಿದ್ದರು. ಸೈಕಲ್ ಮೇಲೆ ಓಡಾಡುತ್ತಿದ್ದರು. ಆಮೇಲೆ ಅವರಿಗೆ ಅಸ್ತಮಾ ಕಾಡಿದ್ದರಿಂದ ಮರಿಯಮ್ಮನಹಳ್ಳಿಯಲ್ಲಿಯೇ ಬಾಡಿಗೆ ಮನೆಗೆ ಬಂದೆವು. ಇಲ್ಲಿನ ಸರಕಾರಿ ಶಾಲೆಗೆ ಮೂರನೇ ತರಗತಿ ಸೇರಿದೆ. ಇದಕ್ಕಿಂತ ಮೊದಲು ಅಕ್ಷರಗಳನ್ನು ಕಲಿತಿದ್ದೆ. ಮುಂದೆ ಮರಿಯಮ್ಮನಹಳ್ಳಿಯಲ್ಲಿಯೇ ಹೈಸ್ಕೂಲು ಆರಂಭವಾದಾಗ ಸೇರಿ ಎಸೆಸೆಲ್ಸಿ ಮುಗಿಸಿದೆ. ಹತ್ತನೇ ವರ್ಷದಿಂದಲೇ ಬಣ್ಣ ಹಚ್ಚಿದೆ. ಹೇಮರಡ್ಡಿ ಮಲ್ಲಮ್ಮ ನಾಟಕದಲ್ಲಿ ಮಲ್ಲಮ್ಮನಿಗೆ ಆರತಿ ಮಾಡುವ ಪಾತ್ರ ಸಿಕ್ಕೇ ಸಿಗುತ್ತಿತ್ತು. ಹರಿಶ್ಚಂದ್ರ ನಾಟಕದಲ್ಲಿ ಲೋಹಿತಾಶ್ವನ ಪಾತ್ರ ಮಾಡುತ್ತಿದ್ದೆ. ಕೊಟ್ಟಿಗಿ ನಾಗಪ್ಪ ಅವರು ಹರಿಶ್ಚಂದ್ರನ ಪಾತ್ರವನ್ನು ಅದ್ಭುತವಾಗಿ ಮಾಡುತ್ತಿದ್ದರು. ತಾರಾಮತಿ ಪಾತ್ರಕ್ಕೆ ನಮ್ಮೂರಿನ ಶಾಂತಮ್ಮ ಬಣ್ಣ ಹಚ್ಚುತ್ತಿದ್ದರು. ನನಗೆ ಸೇವಕ, ಆರತಿ ಬೆಳಗುವ, ಸಖಿ ಪಾತ್ರಗಳು ಸಿಗುತ್ತಿದ್ದವು. ಮೈಲಾರಪ್ಪನವರು ಹೆಣ್ಣುಮಕ್ಕಳನ್ನೇ ಹುಡುಕಿ ‘ಸಂಸಾರ’ ನಾಟಕ ಮಾಡಿಸಿದರು. ಇದರಲ್ಲಿ ನಾಯಕಿ ಪಾತ್ರ ನಿರ್ವಹಿಸಿದೆ. ಅದು ಬಹಳ ಚೆಂದವಾಯಿತು. ಪಾತ್ರವನ್ನೂ ಮೆಚ್ಚಿದರು. ಆದರೆ ಶಿಕ್ಷಕರು, ‘ಪಾತ್ರ ಮಾಡಬ್ಯಾಡ. ಮುಂದೆ ಓದಿ ಶಿಕ್ಷಕಿಯಾಗು’ ಎಂದರು. ನನಗೂ ಶಿಕ್ಷಕಿಯಾಗುವ ಆಸೆಯಿತ್ತು. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಹರಪನಹಳ್ಳಿ ತಾಲೂಕಿನ ಬಾಗಳಿ, ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಗೊಳ, ಹೂವಿನಹಡಗಲಿ ತಾಲೂಕಿನ ಸೋಗಿ ಗ್ರಾಮಗಳಿಗೆ ನಾಟಕ ಆಡಲು ಹೋಗುತ್ತಿದ್ದೆ. ಇಂತಹ ದಿನ ಬರಬೇಕೆಂದು ತಾಲೀಮಿಗೆ ಕರೆಯುತ್ತಿದ್ದರು. ಆಗ ಎಲ್ಲ ಪಾತ್ರಗಳನ್ನು ಪುರುಷರೇ ನಿರ್ವಹಿಸುತ್ತಿದ್ದರು. ನೃತ್ಯವಿರುವ ಪಾತ್ರಗಳಿಗೆ ನನ್ನನ್ನು ಆಹ್ವಾನಿಸುತ್ತಿದ್ದರು. ಆಗೆಲ್ಲ ಇಪ್ಪತ್ತು ರೂಪಾಯಿ ಕೊಡುತ್ತಿದ್ದರು. ಒಂದು ರೂಪಾಯಿ ಆಯೇರಿ (ಕಾಣಿಕೆ) ಕೊಡುತ್ತಿದ್ದರು. ಹುಡುಗರೆಲ್ಲ ನಾಲ್ಕಾಣೆ ಸೇರಿಸಿ ಒಂದು ರೂಪಾಯಿ ಕೂಡಿಸಿ ಕೊಡುತ್ತಿದ್ದರು. ಐದು ರೂಪಾಯಿ ಕೂಡಿದರೆ ಖುಷಿಯಿಂದ ಬರುತ್ತಿದ್ದೆ.
ದಾವಣಗೆರೆಯ ಮಹಾಬಲಿ ಅವರು ಹಾಲೇಶ್ವರ ನಾಟ್ಯ ಸಂಘ ಕಟ್ಟಿಕೊಂಡಿದ್ದರು. ಮೈಲಾರ, ಹೂವಿನಹಡಗಲಿ, ಹಿರೇಹಡಗಲಿ ಹಾಗೂ ಹೊಸಪೇಟೆಯಲ್ಲಿ ಅವರು ಎನ್.ಎಸ್. ಜೋಶಿ ಅವರ ‘ರತ್ನಮಾಂಗಲ್ಯ’ ನಾಟಕ ಆಡಿಸುತ್ತಿದ್ದರು. ಅವರು ಹಾಸ್ಯ ಪಾತ್ರ ಮಾಡುತ್ತಿದ್ದರು. ಸಿನೆಮಾ ನಟ ಸುದರ್ಶನ್ ಹಾಗೂ ಅವರ ಪತ್ನಿ ಶೈಲಶ್ರೀ ಅವರು ಜೋಡಿಯಾಗಿ ಪಾತ್ರಕ್ಕಾಗಿ ಬಂದಿದ್ದರು.
ಇಂತಹ ಮರಿಯಮ್ಮನಹಳ್ಳಿಯಲ್ಲಿ ಆಗ ಮೂವತ್ತು ಕಲಾವಿದೆಯರಿದ್ದೆವು; ವಯಸ್ಸಾದವರನ್ನು ಬಿಟ್ಟು. ಆಮೇಲೆ ಹಳ್ಳಿಗಳಿಗೆ ಕಲಾವಿದೆಯರು ಹೋಗುತ್ತಿದ್ದೆವು. ಎಸ್. ರೇಣುಕಾ, ಎ. ರೇಣುಕಾ, ಎನ್. ರೇಣುಕಾ ಈ ಮೂವರೂ ನನ್ನ ಜೊತೆಗೇ ಇದ್ದರು. ಯಶೋದಾ ಅವರು ಗ್ರಾಮೀಣ ರಂಗಭೂಮಿಯಲ್ಲಿ ಹೆಸರು ಮಾಡಿದ್ದಾಕೆ. ಬಹಳ ಬೇಗ ತೀರಿಕೊಂಡರು. ಆಗೆಲ್ಲ ಬಸ್ ವ್ಯವಸ್ಥೆ ಇರಲಿಲ್ಲ. ವೇಷಭೂಷಣ, ಮೇಕಪ್ ಇರುವ ಟ್ರಂಕ್ ಹೊತ್ತುಕೊಂಡು, ನೀರು ಕುಡಿಯಲು ಹಿತ್ತಾಳೆಯ ತಿರುಗಣಿ ಚೆಂಬು ಹಿಡಿದುಕೊಂಡು ಇಪ್ಪತ್ತು ಮೈಲು ನಡೆದುಕೊಂಡು ಹೋಗುತ್ತಿದ್ದೆವು. ನಮ್ಮ ಗುರುತೆಂದರೆ; ಟ್ರಂಕ್ ಹೊತ್ತುಕೊಂಡು, ತಿರುಗಣಿ ಚೆಂಬು ಹಿಡಿದುಕೊಂಡಿರುತ್ತಾರೆ ಎಂದು ಪ್ರಸಿದ್ಧರಾಗಿದ್ದೆವು. ಆದರೆ ನಿದ್ದೆ ಬರುತ್ತದೆ ಎಂದು ಊಟ ಮಾಡುತ್ತಿರಲಿಲ್ಲ. ಕಣ್ತುಂಬಾ ನಿದ್ದೆ ಮಾಡಲಿಲ್ಲ, ತುಂಬು ಬಸುರಿಯಾಗಿದ್ದಾಗಲೂ ಪಾತ್ರ ಮಾಡಿದೆ. ಪಾತ್ರ ಮಾಡದಿದ್ದರೆ ಸಾಲ ಮಾಡಬೇಕಾಗಿತ್ತು. ತಂಗಿಯರ ಮದುವೆ, ಅವರ ಬಸುರಿ, ಬಾಣಂತನಕ್ಕೆ ಸಾಲ ಮಾಡುತ್ತಿದ್ದೆ. ಸಾಲ ತೀರಿಸಲು ಮತ್ತೆ ನಾಟಕ ಆಡುತ್ತಿದ್ದೆ. ಆಮೇಲೆ ನನ್ನ ತಮ್ಮ ರಾಮಚಂದ್ರಪ್ಪ ವಯಸ್ಸಿಗೆ ಬಂದ ಮೇಲೆ ನೆರವಾದ. ಎರಡು ಮಕ್ಕಳಾದ ಮೇಲೆ ಗಂಡ ದುಶ್ಚಟಕ್ಕೆ ಬಲಿಯಾದ. ಆಮೇಲೆ ಪತ್ರಕರ್ತ ಗುಡಿಹಳ್ಳಿ ನಾಗರಾಜ ಅವರು ಗಾಡ್ ಫಾದರ್ ಅಗಿಬಂದರು. ಚಿಗಟೇರಿ ಸಂಗಣ್ಣ ಅವರು ತಂದೆಯ ಸಮಾನರಾಗಿ ಕಂಡರು. ಎಂ.ಪಿ. ಪ್ರಕಾಶ್‌ಅವರು ಶಾಸಕರಾಗುವ ಮೊದಲು ಅವರ ರಂಗಭಾರತಿ ತಂಡದ ಕಲಾವಿದೆಯಾಗಿದ್ದೆ. ಈ ತಂಡವನ್ನು ಮೂರನೆಯ ತಲೆಮಾರು ಮುಂದುವರಿಸಿಕೊಂಡು ಹೊರಟಿದೆ. ಅವರೂ ಗುರುತಿಸುತ್ತಾರೆ.
ಆಗ ದೇವದಾಸಿ ಪದ್ಧತಿ ಇದ್ದುದರಿಂದ ರಂಗಭೂಮಿಗೆ ಬಂದೆ. ದೇವದಾಸಿ ಪದ್ಧತಿ ಒಪ್ಪಿಕೊಂಡೆ. ಆದರೆ ಈ ಪದ್ಧತಿಗೆ ನಮ್ಮ ಮನೆಯಲ್ಲಿ ನಾನೇ ಕೊನೆಯವಳು. ಅಪ್ಪನ ಅನಾರೋಗ್ಯ, ಮನೆ ಜವಾಬ್ದಾರಿ ಹೊರಬೇಕಿತ್ತು. ಇದಕ್ಕಾಗಿ ದೇವದಾಸಿ ಪದ್ಧತಿ ಒಪ್ಪಿಕೊಂಡೆ. ಮುಂದೆ ದೇವದಾಸಿ ಪದ್ಧತಿ ವಿರುದ್ಧ ಬೀದಿನಾಟಕ ಆಡಿದೆ.
ನನಗೆ ಇಬ್ಬರು ಮಕ್ಕಳು. ಮಗ ವೆಂಕಟೇಶ ದಾವಣಗರೆಯ ಜೆಸ್ಕಾಂನಲ್ಲಿ ಇಂಜಿನಿಯರ್ ಆಗಿದ್ದಾನೆ. ಮಗಳು ಪಂಕಜಾ ಡಿಪ್ಲೊಮಾ ಓದಿದ್ದು, ಮದುವೆಯಾಗಿ ಬೆಂಗಳೂರಿನಲ್ಲಿದ್ದಾಳೆ. ನಮ್ಮೂರಿನ ತಳವಾರ ಹನುಮಂತಮ್ಮ ದೊಡ್ಡ ಕಲಾವಿದೆ. ಅವರ ಮೊಮ್ಮಗ ಬಸವರಾಜನಿಗೆ ನನ್ನ ಮಗಳು ಪಂಕಜಾಳನ್ನು ಕೊಟ್ಟು ಮದುವೆ ಮಾಡಿದೆ. ಹನುಮಂತಮ್ಮ, ಡಿ.ದುರ್ಗಾದಾಸ ಅವರು ಮೇರು ನಟರು. ಅವರನ್ನು ನೋಡಿ ಕಲಿತೆ.
ಹೂವಿನ ಹಡಗಲಿ ತಾಲೂಕಿನ ಸೋಗಿ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರೆಗೆ ಪ್ರತೀ ವರ್ಷ ‘ಗಂಡನಾಜ್ಞೆ’ ನಾಟಕ ಆಡುತ್ತಿದ್ದರು. ಎಸ್.ರೇಣುಕಾ, ನಾನು ಪ್ರತಿ ವರ್ಷ ಹೋಗುತ್ತಿದ್ದೆವು. ಇದರಲ್ಲಿ ನಾಯಕಿ ಪಾತ್ರ ಮಾಡುತ್ತಿದ್ದೆ. ಈ ನಾಟಕ ನೋಡಲು, ನಾಟಕ ರಚಿಸಿದ ಮಂಗಳೂರು ಕವಿಗಳು ಬಂದಿದ್ದರು. ಅವರನ್ನು ಸನ್ಮಾನಿಸಿದಾಗ ‘‘ಈ ಗೌರವಾರ್ಪಣೆ ನನಗಲ್ಲ, ನಾಗರತ್ನಮ್ಮ ಅವರಿಗೆ ಸಲ್ಲಬೇಕು’’ ಎಂದು ಹೇಳಿ ತಮಗೆ ಸನ್ಮಾನ ಮಾಡಿದ್ದ ಶಾಲು, ಹಾರವನ್ನು ನನಗೆ ಹಾಕಿದರು. ‘‘ಪರಿಣಾಮಕಾರಿಯಾಗಿ ಪಾತ್ರ ಮಾಡಿದ್ದಿ, ನಿಜವಾದ ರಂಗನಾಯಕಿ’’ ಎಂದು ಹೊಗಳಿದರು. ನಾಟಕ ಬರೆದ ಕವಿಗಳೇ ‘ಯಾರೂ ಹಿಂಗ ಮಾಡಿಲ್ಲ’ ಎಂದಿದ್ದನ್ನು ಮರೆಯಲಾಗದು. ಸೋಗಿ ಊರಿನವರು ಈಗಲೂ ಜಾತ್ರೆಗೆ, ಮದುವೆಗೆ ಕರೆಯುತ್ತಾರೆ. ನನಗೆ ಸೀರೆ ಉಡಿಸಿ, ಉಡಿ ತುಂಬಿ ಕಳಿಸುತ್ತಾರೆ. ತವರುಮನೆಯದು. ಹಗರಿಬೊಮ್ಮನಹಳ್ಲಿ ತಾಲೂಕಿನ ಬಸರಕೋಡ ಕೂಡಾ ತವರುಮನೆಯಿದ್ದ ಹಾಗೆ. ಪ್ರತೀ ವರ್ಷ ಜಾತ್ರೆಗೆ, ಮದುವೆಗೆ ಹೋಗುವೆ. ನನ್ನ ಕಷ್ಟದಲ್ಲಿ ಭಾಗಿಯಾದವರು ಇಲ್ಲಿನವರು. ನನ್ನ ತಂಗಿಯರ ಮದುವೆಗೆ ತಮ್ಮ ತೋಟದಲ್ಲಿ ಬೆಳೆದುದನ್ನು ತಂದುಕೊಟ್ಟರು.
ಆದರೆ ವೈಯಕ್ತಿಕ ಸುಖ ಕಾಣಲಿಲ್ಲ. ನಾಟಕಗಳು ಸುಖ ಕೊಟ್ಟವು. ರಂಗಭೂಮಿ ತಾಯಿ ನನ್ನ ಕೈ ಹಿಡಿದು ಇಲ್ಲಿವರೆಗೆ ನಡೆಸಿಕೊಂಡು ಹೊರಟಿದ್ದಾಳೆ. ಕೆಲ ಕಡೆ ಅವಮಾನವಾದರೂ ಅನೇಕ ಕಡೆ ಸನ್ಮಾನ ಸಿಕ್ಕಿತು.
ಲಲಿತಕಲಾರಂಗ ತಂಡವನ್ನು ಕಟ್ಟಿ ಐವತ್ತು ವರ್ಷವಾಯಿತು. ನಂತರ ಮಹಿಳಾ ವೃತ್ತಿ ರಂಗ ಕಲಾವಿದರ ಸಂಘವನ್ನು ಕಟ್ಟಿ ಇಪ್ಪತ್ತೈದು ವರ್ಷವಾಯಿತು. ಪುರುಷ ಪಾತ್ರಗಳನ್ನು ನಾವೇ ನಿರ್ವಹಿಸುತ್ತೇವೆ. ಮಂಜಮ್ಮ ಜೋಗತಿ ಕೂಡಾ ಪಾತ್ರ ನಿರ್ವಹಿಸಿದರು.
ಮಕ್ಕಳಿಗಾಗಿ, ಯುವಕರಿಗಾಗಿ ನಾಟಕೋತ್ಸವ ಆಯೋಜಿಸಿದೆ. ನಮ್ಮ ತಂಡದಲ್ಲಿ ದುಡಿದ ರಾಜೇಶ್ ಈಗ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾನೆ. ಈಗ ಮರಿಯಮ್ಮನಹಳ್ಳಿ ಬದಲಾಗಿದೆ. ನಮ್ಮೂರಿನ ಕಲಾವಿದೆಯರು ನೀನಾಸಂ, ಸಾಣೇಹಳ್ಳಿಗೆ ಹೋದವರಿದ್ದಾರೆ. ಕಲಾವಿದೆಯರು ಕಡಿಮೆಯಾಗಿದ್ದು ನಿಜ.
ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ಸರಕಾರ ಘೋಷಿಸಿದಾಗ ಖುಷಿಯಾಯಿತು. ಆದರೆ ನಾನು ಹವ್ಯಾಸಿ ರಂಗಭೂಮಿ ಕಲಾವಿದೆ, ಗ್ರಾಮೀಣ ರಂಗಭೂಮಿ ಕಲಾವಿದೆ ಎಂದು ಕೆಲವರು ತಕರಾರು ಮಾಡಿ ನನಗೆ ಪ್ರಶಸ್ತಿ ಕೊಡಬೇಡವೆಂದಾಗ ನೋವಾಗಿತ್ತು. ನಾಟಕ ಕಂಪೆನಿಗಳಿಗೆ ನಷ್ಟವಾದಾಗ ಪಾತ್ರಗಳಿಗೆ ಬಣ್ಣ ಹಚ್ಚಿದೆ. ಪಿ.ಬಿ.ಧುತ್ತರಗಿ ಅವರು ಹನುಮಸಾಗರದಲ್ಲಿ ‘ಮಲಮಗಳು’ ಅರ್ಥಾತ್ ‘ಮುದುಕನ ಮದುವೆ’ ಹಾಗೂ ‘ಇಳಕಲ್ಲ ಸೀರೆ’ ನಾಟಕಗಳನ್ನು ಏರ್ಪಡಿಸಿದ್ದಾಗ ಹೋಗಿದ್ದೆ. ಸರೋಜಮ್ಮ ಧುತ್ತರಗಿ ಅವರು ತಾಯಿಯ ಪಾತ್ರವನ್ನು, ಧುತ್ತರಗಿ ಅವರು ಅಪ್ಪನ ಪಾತ್ರಕ್ಕೆ ಬಣ್ಣ ಹಚ್ಚಿದರೆ, ಅವರ ಮಗಳ ಪಾತ್ರಕ್ಕೆ ನಾನು ಬಣ್ಣ ಹಚ್ಚುತ್ತಿದ್ದೆ. ಒಂದು ವಾರದವರೆಗೆ ಹನುಮಸಾಗರದಲ್ಲಿದ್ದೆ. ಸಿನೆಮಾ ನಟ ಧೀರೇಂದ್ರ ಗೋಪಾಲ್ ಅವರೂ ಬಂದಿದ್ದರು. ಮಳೆಯಾಗಿದ್ದರಿಂದ ನಾಟಕ ನಿಂತಿತು. ಇಲ್ಲದಿದ್ದರೆ ಇನ್ನೂ ನಡೆಯುತ್ತಿತ್ತು.
ನಮ್ಮೂರಿನ ಗ್ರಾಮ ಪಂಚಾಯತ್ ಸದಸ್ಯೆಯಾಗಿ, ಹೊಸಪೇಟೆ ತಾಲೂಕು ಪಂಚಾಯತ್ ಸದಸ್ಯೆಯಾಗಿಯೂ ದುಡಿದಿರುವೆ. ಜೊತೆಗೆ ಬೀದಿನಾಟಕಗಳನ್ನೂ ಆಡಿರುವೆ. ರಂಗಭೂಮಿ ನಂಟು ಬಿಟ್ಟಿಲ್ಲ, ಬಿಡುವುದೂ ಇಲ್ಲ.’’